ನಟನೆಗೆ ಆಮಿರ್ ಖಾನ್ ಬ್ರೇಕ್: 'ಲಾಲ್ ಸಿಂಗ್ ಚಡ್ಡ' ಸೋಲಿನಿಂದ ಖಡಕ್ ನಿರ್ಧಾರ!
ಆಮಿರ್ ಖಾನ್ ಎಲ್ಲಾ ಸಿನಿಮಾಗಳನ್ನೂ ಮಾಡೋದಿಲ್ಲ. ಈ ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ಅದೇ ಹೆಚ್ಚು. ಇತ್ತೀಚೆಗಂತೂ ಈ ಬಾಲಿವುಡ್ ಸೂಪರ್‌ಸ್ಟಾರ್ ಒಂದು ಸಿನಿಮಾಗೆ ಎರಡರಿಂದ ಮೂರು ವರ್ಷ ತೆಗೆದುಕೊಳುತ್ತಾರೆ. ಇಂತಹ ಪ್ರಯೋಗದಲ್ಲಿ ಆಮಿರ್ ಖಾನ್‌ಗೆ ಗೆಲುವು ಸಿಕ್ಕಿದ್ದೇ ಹೆಚ್ಚು.
ಈ ಬಾರಿ ಆಮಿರ್ ಖಾನ್ ಗೆಲ್ಲಲಿಲ್ಲ. ತುಂಬಾನೇ ಇಷ್ಟ ಪಟ್ಟ ಮಾಡಿದ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಈ ಸೋಲನ್ನು ಆಮಿರ್ ಖಾನ್‌ಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ಖಡಕ್ ನಿರ್ಧಾರಕ್ಕೆ ತೆಗೆದುಕೊಂಡಿದ್ದಾರೆ.
'ಲಾಲ್ ಸಿಂಗ್ ಚಡ್ಡ' ಸೋಲಿನ ಬೆನ್ನಲ್ಲೇ ಆಮಿರ್ ಖಾನ್ ನಟಗೆ ಬ್ರೇಕ್ ಕೊಡುವುದಕ್ಕೆ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಎಷ್ಟು ವರ್ಷ ಸಿನಿಮಾದಲ್ಲಿ ನಟಿಸೋದಿಲ್ಲ? ನಟನೆ ಬಿಟ್ಟು ಮತ್ತೇನು ಮಾಡುತ್ತಾರೆ? ಆಮಿರ್ ಖಾನ್ ಹೇಳಿಕೆಯಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ನಟನೆಗೆ ಆಮಿರ್ ಖಾನ್ ಬ್ರೇಕ್
'ಲಾಲ್ ಸಿಂಗ್ ಚಡ್ಡ' ಬಿಡುಗಡೆ ಬಳಿಕ ಆಮಿರ್ ಖಾನ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸೈಲೆಂಟಾಗಿ ತೆರೆಮರೆಗೆ ಸರಿದಿದ್ದರು. ಆದರೆ, ಇಂದು(ನವೆಂಬರ್ 14) ಆಮಿರ್ ಖಾನ್ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಆಮಿರ್ ಖಾನ್ ಕೆಲವು ಕಾಲ ನಟನೆಯಿಂದ ದೂರವಿರುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಆಮಿರ್ ಖಾನ್ ಅಭಿಮಾನಿಗಳು ನಿರಾಸೆಯನ್ನುಂಟು ಮಾಡಿದೆ.

ಆಮಿರ್ ಖಾನ್ ಹೇಳಿದ್ದೇನು?
ದೆಹಲಿಯಲ್ಲಿ ಆಮಿರ್ ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ಲಾಲ್ ಸಿಂಗ್ ಚಡ್ಡ' ಬಳಿಕ ಆಮಿರ್ ಖಾನ್ 'ಚಾಂಪಿಯನ್ಸ್' ಅನ್ನೋ ಸಿನಿಮಾದಲ್ಲಿ ನಟಿಸಬೇಕಿತ್ತು. ಆದ್ರೀಗ ಆ ಸಿನಿಮಾದಿಂದಲೂ ದೂರ ಉಳಿದಿದ್ದಾರೆ. " ಸಿನಿಮಾದಲ್ಲಿ ನಾನು ನಟಿಸುವಾಗ ಕಳೆದು ಹೋಗಿರುತ್ತೇನೆ. ನನ್ನ ಬದುಕಿನಲ್ಲಿ ಬೇರೆ ಎನೂ ನಡೆಯುವುದೇ ಇಲ್ಲ. ಲಾಲ್ ಸಿಂಗ್ ಚಡ್ಡ ಬಳಿಕ ನಾನು ಚಾಂಪಿಯನ್ಸ್ ಅನ್ನೋ ಸಿನಿಮಾದಲ್ಲಿ ನಟಿಸಬೇಕಿತ್ತು. ಅದು ಅದ್ಭುತವಾದ ಸ್ಕ್ರಿಪ್ಟ್, ಸುಂದರವಾದ ಕಥೆ. ಹೃದಯ ಕಲುಕುವಂತಹ ಸಿನಿಮಾ. ಆದರೆ, ನಾನು ನಟನೆಯಿಂದ ಬ್ರೇಕ್ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ. ನನ್ನ ಕುಟುಂಬ, ನನ್ನ ಅಮ್ಮ ಹಾಗೂ ಮಕ್ಕಳೊಂದಿಗೆ ಇರಬೇಕು ಎಂದುಕೊಂಡಿದ್ದೇನೆ." ಎಂದು ಆಮಿರ್ ಖಾನ್ ಹೇಳಿದ್ದಾರೆ.

ಎಷ್ಟು ವರ್ಷ ನಟನೆಗೆ ಬ್ರೇಕ್?
ಆಮಿರ್ ಖಾನ್ ನಟನೆಯಿಂದ ಬ್ರೇಕ್ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಆಮಿರ್ ಖಾನ್ ಪ್ರಕಾರ, ಸುಮಾರು ಒಂದೂವರೆ ವರ್ಷ ಯಾವುದೇ ಸಿನಿಮಾದಲ್ಲಿ ನಟಿಸದೆ ಇರಲು ನಿರ್ಧಾರ ಮಾಡಿದ್ದಾರೆ. 35 ವರ್ಷಗಳ ಜರ್ನಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಇದೇ ಮೊದಲ ಬಾರಿಗೆ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಬಹುಶ: ಸಿನಿಮಾ ಸೋಲಿನಿಂದ ನೊಂದಿದ್ದು, ಪ್ರೇಕ್ಷಕರನ್ನು ರಂಜಿಸಲು ಹೊಸ ರೂಪದಲ್ಲಿ ಬರಬಹುದು ಎಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.

ಫ್ಯಾಮಿಲಿಗಾಗಿ ಆಮಿರ್ ನಟನೆ ಬ್ರೇಕ್
35 ವರ್ಷಗಳ ಸಿನಿಮಾ ಜರ್ನಿಯಲ್ಲಿ ಆಮಿರ್ ಖಾನ್ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ನೀಡಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ಸೋಲುಗಳನ್ನೂ ಕಂಡಿದ್ದಾರೆ. ಈ ಕಾರಣಕ್ಕೆ ಈ ಮೂರುವರೆ ದಶಕಗಳ ಜರ್ನಿಗೆ ಬ್ರೇಕ್ ಕೊಡಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದ್ದು, ಕುಟುಂಬದೊಂದಿಗೆ ಕಾಲ ಕಳೆಯಲು ನಿರ್ಧರಿಸಿದ್ದಾರೆ.


Click it and Unblock the Notifications










