ಸಿದ್ಧಾರ್ಥ್, ಅಮಿತಾಭ್, ರಣ್‌ಬೀರ್ ಬಳಿಕ ಸಲ್ಮಾನ್ ಖಾನ್ ಸಿನಿಮಾದಲ್ಲಿ ರಶ್ಮಿಕಾ; ಬಾಲಿವುಡ್ ಸೆಟಲ್ ಆಗ್ಬಿಟ್ರಾ?
ಬಾಲಿವುಡ್ ಚಿತ್ರರಂಗ ಒಂದು ಸಾಗರವಿದ್ದಂತೆ. ಭಾರತದ ಮೂಲೆ ಮೂಲೆಯಿಂದಲೂ ವೃತ್ತಿ ಬದುಕನ್ನು ಅರಸಿ ಇಲ್ಲಿಗೆ ಬರುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ದಕ್ಷಿಣ ಭಾರತದಿಂದ ಬಾಲಿವುಡ್ ಕಡೆಗೆ ಪಯಣ ಬೆಳೆಸುತ್ತಾರೆ. ಅಲ್ಲಿ ನೆಲೆಯೂರುವುದಕ್ಕೂ ಪ್ರಯತ್ನ ಪಡುತ್ತಾರೆ. ಅದರಲ್ಲಿ ನಟಿಯರೇ ಹೆಚ್ಚು ಎನ್ನಬಹುದು.
ಈಗಾಗಲೇ ದಕ್ಷಿಣ ಭಾರತದ ನಟಿಯರು ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಸೂಪರ್‌ಸ್ಟಾರ್ ಆದ ಉದಾಹರಣೆಗಳು ಕಣ್ಮುಂದೆ ಇವೆ. ಬಾಲಿವುಡ್ ಸ್ಟಾರ್ ನಟಿಯಾಗಿರೆಸಿಕೊಂಡಿರೋ ರೇಖಾ, ಹೇಮಮಾಲಿನಿ, ಶ್ರೀದೇವಿ, ವಿದ್ಯಾಬಾಲನ್ ಎಲ್ಲರೂ ದಕ್ಷಿಣ ಭಾರತದವರೇ. ಇವರೆಲ್ಲರಿಗೂ ಬಾಲಿವುಡ್ ಒಗ್ಗಿಕೊಂಡಿದೆ. ಈಗ ಆ ಸಾಲಿಗೆ ರಶ್ಮಿಕಾ ಮಂದಣ್ಣ ಕೂಡ ಸೇರಿಕೊಳ್ಳುತ್ತಾರಾ? ಅನ್ನೋ ಕುತೂಹಲ ಹೆಚ್ಚಾಗಿದೆ.

ಇತ್ತೀಚೆಗೆ ದಕ್ಷಿಣ ಭಾರತದ ಬಹುಭಾಷಾ ನಟಿ ಪ್ರಿಯಾಮಣಿ ಕೂಡ ಬಾಲಿವುಡ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಮಣಿ ನಟಿಸಿದ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಕೂಡ ಒಂದರ ಹಿಂದೊಂದು ಬಾಲಿವುಡ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಯಶಸ್ಸು ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ 'ಮಿಷನ್ ಮಜ್ನು' ಹಾಗೂ ಅಮಿತಾಭ್ ಬಚ್ಚನ್ ಜೊತೆ ನಟಿಸಿದ 'ಗುಡ್ ಬೈ' ಸಿನಿಮಾಗಳು ಅಷ್ಟೇನು ಸದ್ದು ಮಾಡಿರಲಿಲ್ಲ. ಆದರೆ, ರಣ್‌ಬೀರ್ ಕಪೂರ್ ಜೊತೆ ನಟಿಸಿದ 'ಅನಿಮಲ್' ಬಾಕ್ಸಾಫೀಸ್ ಅನ್ನು ಚಿಂದಿ ಉಡಾಯಿಸಿತ್ತು.
ರಣ್‌ಬೀರ್ ಕಪೂರ್ ಕರಿಯರ್‌ನಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ಅನಿಮಲ್'ಗೆ ರಶ್ಮಿಕಾ ಮಂದಣ್ಣ ಲಕ್ಕಿ ಎನಿಸಿಕೊಂಡಿದ್ದರು. ಅದೆಷ್ಟೇ ಟ್ರೋಲ್‌ಗಳಾದರೂ, ರಶ್ಮಿಕಾ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬಂದಿದ್ದರು. ಇದೇ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಸಲ್ಮಾನ್ ಖಾನ್ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತಮಿಳಿನ ಸ್ಟಾರ್ ನಿರ್ದೇಶಕ ಎ ಆರ್ ಮುರುಗದಾಸ್ 'ಸಿಖಂದರ್' ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಘಜನಿ', 'ದರ್ಬಾರ್' ಅಂತಹ ಮಾಸ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಮುರುಗದಾಸ್ ಈಗ ಬಾಲಿವುಡ್ ಬಾಕ್ಸಾಫೀಸ್ ಕಿಂಗ್ ಸಲ್ಮಾನ್ ಖಾನ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಿನಿಮಾಗೆ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಇದು ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಕಾಂಬಿನೇಷನ್‌ನ ಮೊದಲ ಸಿನಿಮಾ. ಹೀಗಾಗಿ ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ.
ರಶ್ಮಿಕಾ ಮಂದಣ್ಣ ಕೈ ತುಂಬಾ ಸಿನಿಮಾಗಳಿವೆ. 'ಅನಿಮಲ್' ಬಳಿಕ ಸದ್ಯ 'ಪುಷ್ಪ 2' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಸದ್ದು ಮಾಡುತ್ತಿದೆ. ಇದರೊಂದಿಗೆ ಟೈಗರ್ ಶ್ರಾಫ್, ವಿಜಯ್ ದೇವರಕೊಂಡ ಜೊತೆ ಒಂದೊಂದು ಸಿನಿಮಾವಿದೆ. ಅಲ್ಲದೆ ತಮಿಳಿನಲ್ಲೂ ಒಂದು ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾಹಿತಿ ಇದೆ.


Click it and Unblock the Notifications











