'ರಾಮಾಯಣ' ಗ್ಲಿಂಪ್ಸ್ ರಿಲೀಸ್ ಆಗುತ್ತಿದ್ದಂತೆ ಪ್ರಭಾಸ್ ನಟಿಸಿದ 'ಆದಿಪುರುಷ್' ಸಾಂಗ್ ಬಿಡುಗಡೆ; ಹಿಗ್ಗಾಮುಗ್ಗಾ ಟ್ರೋಲ್
ಇಂದು (ಜುಲೈ 3) ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾದ ಟೈಟಲ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಈ ಗ್ಲಿಂಪ್ಸ್ ಅನ್ನು ಕಣ್ತುಂಬಿಕೊಳ್ಳುವುದಕ್ಕೆ ಸಿನಿ ಪ್ರಿಯರು ಕಾತುರದಿಂದ ಕಾದು ಕೂತಿದ್ದರು. ಅದರಲ್ಲೂ ಕನ್ನಡಿಗರು ಈ ಗ್ಲಿಂಪ್ಸ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. 'ರಾಮಾಯಣ' ಗ್ಲಿಂಪ್ಸ್ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. ಯಶ್, ರಣ್‌ಬೀರ್ ಕಪೂರ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಒಳ್ಳೆಯ ಅಭಿಪ್ರಾಯವನ್ನು ಕೊಟ್ಟಿದ್ದಾರೆ.
'ರಾಮಾಯಣ' ಗ್ಲಿಂಪ್ಸ್ ಟ್ರೆಂಡಿಂಗ್‌ನಲ್ಲಿ ಇರುವಾಗಲೇ ಒಂದು ಎಡವಟ್ಟು ನಡೆದು ಹೋಗಿದೆ. ಸುಮ್ಮನೆ ಇದ್ದಿದ್ದರೆ ಆಗಿರುತ್ತಿತ್ತು. 'ರಾಮಾಯಣ' ಗ್ಲಿಂಪ್ಸ್ ರಿಲೀಸ್ ಆಗಿದ್ದೇ ತಡ ಪ್ರಭಾಸ್ ನಟಿಸಿದ 'ಆದಿಪುರುಷ್' ನಿರ್ಮಾಣ ಸಂಸ್ಥೆ ಇದೇ ಸಿನಿಮಾದ ಹಾಡೊಂದನ್ನು ಅಪ್‌ಲೋಡ್ ಮಾಡಿತ್ತು. ಅದ್ಯಾವಾಗ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಯ್ತೋ ನೆಟ್ಟಿಗರು ಸಿಕ್ಕಿದ್ದೆ ಚಾನ್ಸ್ ಎಂಬಂತೆ ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಬಿಸಾಕಿದ್ದಾರೆ.

2023ರಲ್ಲಿ ಪ್ರಭಾಸ್, ಸೈಫ್ ಅಲಿಖಾನ್, ಕೃತಿ ಸನನ್ ನಟಿಸಿದ 'ಆದಿಪುರುಷ್' ಸಿನಿಮಾ ರಿಲೀಸ್ ಆಗಿತ್ತು. ಓಂ ರಾವತ್ ನಿರ್ದೇಶಿಸಿದ ಈ ಸಿನಿಮಾವನ್ನು ಟೀಸರ್ ರಿಲೀಸ್ ಆದಲ್ಲಿಂದಲೇ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. ಸಿನಿಮಾ ರಿಲೀಸ್ ಆದ ಬಳಿಕವಾದರೂ ನಿಲ್ಲಬಹುದು ಎಂದುಕೊಂಡಿದ್ದರು. ಆದರೆ, ಆದರೂ ಆಗಿರಲಿಲ್ಲ. 'ಆದಿಪುರುಷ್' ಸಿನಿಮಾವನ್ನು ಮರೆತು 'ರಾಮಾಯಣ'ಕ್ಕೆ ಶಿಫ್ಟ್ ಆಗಿದ್ದ ಪ್ರೇಕ್ಷಕರನ್ನು ಸಾಂಗ್ ರಿಲೀಸ್ ಮಾಡಿ ಬಡಿದೆಬ್ಬಿಸಿದಂತೆ ಆಗಿದೆ.
'ರಾಮಾಯಣ' ಸಿನಿಮಾದ ಬಗ್ಗೆ ಕ್ರೇಜ್ ಕ್ರೇಜಿಯಾಗಿದೆ. ರಣ್‌ಬೀರ್ ಕಪೂರ್, ಯಶ್ ಅಂತಹ ಇಬ್ಬರು ಸೂಪರ್‌ಸ್ಟಾರ್‌ಗಳ ಮುಖಾ ಮುಖಿಯನ್ನು ತೆರೆಮೇಲೆ ನೋಡುವುದಕ್ಕೆ ಥ್ರಿಲ್ ಆಗಿದ್ದಾರೆ. ಹೀಗಾಗಿ ಗ್ಲಿಂಪ್ಸ್ ರಿಲೀಸ್ ಮುಂದಾದಾಗ ಪ್ರೇಕ್ಷಕರು ಕಣ್ತುಂಬಿ ಕೊಳ್ಳುವುದಕ್ಕೆ ಮುಗಿಬಿದ್ದಿದ್ದರು. ಚಿಕ್ಕದೊಂದು ತುಣುಕುಗಳನ್ನು ತೋರಿಸಿ ಆ ಕೌತುಕವನ್ನು ಹಾಗೇ ಕಾಯ್ದಿಟ್ಟುಕೊಂಡಿದ್ದಾರೆ. 'ರಾಮಾಯಣ' ಕ್ರೇಜ್ ಅರಿವಿದ್ದರೂ 'ಆದಿಪುರುಷ್' ನಿರ್ಮಾಣ ಸಂಸ್ಥೆ ಹಾಡನ್ನು ರಿಲೀಸ್ ಮಾಡಿತ್ತು. ಆದರೆ, ಅವರಿಗೆ ತಿರುಗು ಬಾಣವಾಗಿದೆ.
'ಆದಿಪುರುಷ್' ಸಿನಿಮಾದ ಹಾಡು ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ರೊಚ್ಚಿಗಿದ್ದಿದ್ದಾರೆ. 'ರಾಮಾಯಣ'ದ ಕ್ರೇಜ್ ಅನ್ನು ಕಡಿಮೆ ಮಾಡುವುದಕ್ಕೆ ಅಂತಾನೇ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ. 'ಆದಿಪುರುಷ್'ಗಿಂತ 'ರಾಮಾಯಣ' ನೂರು ಪಾಲು ಮೇಲು, ರಣ್‌ಬೀರ್ ಕಪೂರ್, ನಿತಿಶ್ ತಿವಾರಿ ನೋಡಿ ಪ್ರಭಾಸ್ ಹಾಗೂ ಓಂ ರಾವತ್ ಕಲಿಯುವುದು ಬಹಳಷ್ಟಿದೆ ಎಂದೆಲ್ಲ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಕೆಲವರು ಎರಡೂ ಸಿನಿಮಾವನ್ನು ಹೋಲಿಕೆ ಮಾಡುವುದಕ್ಕೆ ಹೊರಟಿದ್ದಾರೆ.

"ಇಂದು ರಾಮಾಯಣ ಟೀಸರ್ ರಿಲೀಸ್ ಆಗುತ್ತಿದ್ದಂತೆ ಟಿ ಸೀರಿಸ್‌ಗೆ ಕೀಳು ಮಟ್ಟದ ಪ್ರಜ್ಞೆ ಕಾಡುವುದಕ್ಕೆ ಶುರುವಾಗಿದೆ. ಆದಿಪುರುಷ್ ಆನ್‌ಲೈನ್‌ನಲ್ಲಿ ಫ್ರೆಶ್ ಆಗಿ ಎಂಟ್ರಿ ಕೊಟ್ಟಿದ್ದರು. ನಾನು ಒಬ್ಬ ಮುಸ್ಲಿಂ ಆಗಿ ಎಆರ್ ರೆಹಮಾನ್, ಹನ್ಸ್‌ಜಿಮ್ಮರ್ ಸಂಗೀತದೊಂದಿಗೆ 'ರಾಮಾಯಣ' ಸಿನಿಮಾವನ್ನು ನೋಡುವುದಕ್ಕೆ ಸಿಕ್ಕಾಪಟ್ಟೆಉತ್ಸುಕನಾಗಿದ್ದೇನೆ. ಟಿ ಸೀರಿಸ್ ಇಂದು ಅಳುವುದಕ್ಕೆ ಶುರು ಮಾಡಿದೆ." ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ.
ಇನ್ನೊಬ್ಬರು, "ಆದಿಪುರುಷ್ ಒಂದು ಕೆಟ್ಟ ಸಿನಿಮಾ. ಟಿ ಸೀರಿಸ್ ಆದಿಪುರುಷ್ ವಿಡಿಯೋ ಕ್ಲಿಪಿಂಗ್ಸ್ ಅನ್ನು ಮೇಮ್ಸ್ ಮಾಡುವುದಕ್ಕೆ 8Kನಲ್ಲಿ ಸಿದ್ಧಪಡಿಸಿದೆ. ಈ ಮೂಲಕ ಜನರಿಂದ ಹಣವನ್ನು ಮಾಡುವುದಕ್ಕೆ ಮುಂದಾಗಿದೆ" ಎಂದು ಮತ್ತೊಬ್ಬರ ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications











