"ಯಾರದ್ದೋ ಲೈಂಗಿಕ ಆಸೆಗಳನ್ನು ಪೂರೈಸಲು ಐಶ್ವರ್ಯಾ ರೈ ಫೋಟೊ ಬಳಕೆ ದುರಾದೃಷ್ಟಕರ"- ಐಶ್ ಪರ ವಕೀಲ
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ಜಾರಿಗೊಳಿಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಅನೇಕ ವೆಬ್‌ಸೈಟ್‌ಗಳು ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಬಳಸಿ ಸರಕುಗಳನ್ನು ಮಾರಾಟ ಮಾಡುತ್ತಿವೆ ಮತ್ತು AI ನಿಂದ ಮಾರ್ಫ್ ಮಾಡಿದ ಫೋಟೊಗಳನ್ನು ಪ್ರಸಾರ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ಪೀಠ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತ್ತು. ನ್ಯಾಯಾಲಯವು ಐಶ್ವರ್ಯಾ ರೈ ಅವರ ಫೋಟೋಗಳನ್ನು ಅನಧಿಕೃತವಾಗಿ ಬಳಸುತ್ತಿರುವ ವೆಬ್‌ಸೈಟ್‌ಗಳ ವಿರುದ್ಧ ಆದೇಶಗಳನ್ನು ಹೊರಡಿಸುವುದಾಗಿ ಇಂದು (ಸೆಪ್ಟೆಂಬರ್ 9) ತಿಳಿಸಿದೆ.

ಐಶ್ವರ್ಯಾ ರೈ ಪರ ಹಾಜರಾದ ಹಿರಿಯ ವಕೀಲ ಸಂದೀಪ್ ಸೇಥಿ, ಹಲವು ವೆಬ್‌ಸೈಟ್‌ಗಳು ತಮ್ಮ ಅನುಮತಿಯಿಲ್ಲದೆ ಐಶ್ವರ್ಯಾ ಹೆಸರನ್ನು ಬಳಸಿ ಮಾರಾಟ ಮಾಡುತ್ತಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. aishwaryaworld.com ಎಂಬ ವೆಬ್‌ಸೈಟ್ ಅವರ 'ಏಕೈಕ ಅಧಿಕೃತ ವೆಬ್‌ಸೈಟ್' ಎಂದು ಹೇಳಿಕೊಂಡಿದ್ದರೂ, ಅದಕ್ಕೆ ಬಾಲಿವುಡ್ ನಟಿ ಐಶ್ವರ್ಯಾ ರೈ ಇದೂವರೆಗೂ ಯಾವುದೇ ರೀತಿಯಿಂದಲೂ ಅನುಮತಿಯನ್ನು ನೀಡಿದಲ್ಲ ಎಂದು ವಕೀಲ ಸಂದೀಪ್ ಸೇಥಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
'ಐಶ್ವರ್ಯಾ ನೇಷನ್ ವೆಲ್ತ್' ಎಂಬ ಸಂಸ್ಥೆಯು ಐಶ್ವರ್ಯಾ ರೈ ಅವರನ್ನು ಆ ಸಂಸ್ಥೆಯ ಅಧ್ಯಕ್ಷೆ ಎಂದು ಹೇಳಿಕೊಂಡಿದೆ. ಆದರೆ, ಐಶ್ವರ್ಯಾ ರೈ ಬಚ್ಚನ್‌ಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಈ ಸಂಸ್ಥೆಯೊಂದಿಗೆ ಯಾವುದೇ ರೀತಿಯ ಸಂಭಾಷಣೆ ಕೂಡ ನಡೆದಿಲ್ಲ ಎಂದು ಸೇಥಿ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. ಇದರ ಹಿಂದೆ 'ವಂಚನೆಯ ಉದ್ದೇಶ'ವಿದೆ ಎಂದು ಐಶ್ವರ್ಯಾ ರೈ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಪರಿಚಯವಿಲ್ಲದ ಕೆಲವು ಸಂಸ್ಥೆಗಳು ಐಶ್ವರ್ಯಾ ರೈ ಅವರೊಂದಿಗೆ ಸಂಪರ್ಕವಿದೆ ಎಂದು ಹೇಳಿಕೊಂಡು ಹಣವನ್ನು ಸಂಗ್ರಹಿಸುತ್ತಿವೆ. ಅಲ್ಲದೇ 'ಎಐ' ಮಾರ್ಫ್ ಮಾಡಿದ ಫೋಟೋಗಳನ್ನು ಕೂಡ ಬಿತ್ತರಿಸುತ್ತಿವೆ. ಇವು ಐಶ್ವರ್ಯಾ ರೈಗೆ ಸಂಬಂಧ ಪಟ್ಟ ಫೋಟೋಗಳಲ್ಲ. ಐಶ್ವರ್ಯಾ ರೈ ಇಂತಹ ಫೋಟೊಗಳನ್ನು ಸೃಷ್ಟಿ ಮಾಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಇವೆಲ್ಲವೂ AIನಿಂದ ಸೃಷ್ಟಿಸಿದ ಫೋಟೊಗಳು. ಇದರಲ್ಲಿ ನೈಜತೆ ಇಲ್ಲ" ಎಂದು ಸೇಥಿ ನ್ಯಾಯಾಧೀಶರ ಮುಂದೆ ವಾದಿಸಿದ್ದಾರೆ.
"ಐಶ್ವರ್ಯಾ ರೈ ಅವರ ಫೋಟೋಗಳು , ಅವರ ಸೌಂದರ್ಯ ಅಥವಾ ವ್ಯಕ್ತಿತ್ವವನ್ನು ಬಳಸಿಕೊಳ್ಳಲು ಯಾವುದೇ ಹಕ್ಕು ಯಾರಿಗೂ ಇಲ್ಲ. ಐಶ್ವರ್ಯಾ ರೈ ಅವರ ಹೆಸರು ಹಾಗೂ ಫೇಸ್ ಅನ್ನು ಬಳಸಿಕೊಂಡು ಹಣ ಸಂಗ್ರಹಿಸುತ್ತಿದ್ದಾರೆ. ಐಶ್ವರ್ಯಾ ರೈ ಅವರ ಮುಖವನ್ನು ಬಳಿಸಿಕೊಂಡು ಯಾರದ್ದೋ ಲೈಂಗಿಕ ಆಸೆಗಳನ್ನು ಪೂರೈಸಲು ಬಳಕೆ ಮಾಡಲಾಗುತ್ತಿದೆ. ಇದು ನಿಜಕ್ಕೂ ತುಂಬಾನೇ ದುರಾದೃಷ್ಟಕರ" ಎಂದು ಸೇಥಿ ವಾದ ಮಂಡಿಸಿದ್ದಾರೆ.
ಐಶ್ವರ್ಯಾ ರೈ ಪರ ವಕೀಲರು ಮಾಡಿದ ವಾದವನ್ನು ಆಲಿಸಿದ ನ್ಯಾಯಮೂರ್ತಿ ತೇಜಸ್ ಕಾರಿಯಾ ಗೂಗಲ್ ಪರ ವಕೀಲರಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಐಶ್ವರ್ಯಾ ರೈ ಸಲ್ಲಿಸಿರುವ ಪಟ್ಟಿಯಲ್ಲಿ ಉಲ್ಲಂಘಿಸಿರೋ ಲಿಂಕ್‌ಗಳನ್ನು ತೆಗೆದು ಹಾಕಲು ಹೇಳಿದ್ದಾರೆ. ಐಶ್ವರ್ಯಾ ಹೆಸರು ಹಾಗೂ ಫೋಟೋಗಳನ್ನು ಅನುಮತಿ ಇಲ್ಲದೆ ಬಳಸಿಕೊಳ್ಳಿವುದಕ್ಕೆ ತಡೆಯಾಜ್ಞೆ ಆದೇಶಗಳನ್ನು ಹೊರಡಿಸುವುದಾಗಿ ನ್ಯಾಯಾಧೀಶರು ಮೌಖಿಕವಾಗಿ ತಿಳಿಸಿದರು. 2023ರಲ್ಲೂ ಬಚ್ಚನ್ ಕುಟುಂಬ ಮಗಳ ವಿಚಾರಗಾಗಿ ತಪ್ಪು ಸಂದೇಶವನ್ನು ಹರಡಿದ್ದಕ್ಕಾಗಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಗಂಭೀರವಾಗಿ ಅಸ್ವಸ್ಥಳಾಗಿದ್ದಾಳೆಂದು ಯೂಟ್ಯೂಟ್ ಚಾನೆಲ್ ವಿಡಿಯೋಗಳನ್ನು ಹಾಕಿತ್ತು. ಅದರ ವಿರುದ್ಧ ಇದೇ ಕೋರ್ಟ್ ಮೆಟ್ಟಿಲೇರಿದ್ದರು.


Click it and Unblock the Notifications











