"ನನ್ನ ಮಗಳನ್ನು ಯಾರೂ ನೋಡಿಕೊಳ್ಳುವ ಅಗತ್ಯವಿಲ್ಲ.. ಒಂಟಿಯಾಗಿಯೇ ಸಾಕಬಲ್ಲೆ"- ನಟಿ ಐಶ್ವರ್ಯಾ ರೈ
ಮಾಜಿ ವಿಶ್ವದ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಕು ಮೂಡಿದೆ ಅನ್ನೋ ವಿಷಯ ಬಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಸಿದೆ. ಕಳೆದ ಹಲವು ತಿಂಗಳಿನಿಂದ ಇಬ್ಬರಿಬ್ಬರ ವಿಚ್ಚೇದನದ ಸುದ್ದಿನೇ ಓಡಾಡುತ್ತಿದೆ. ಹಾಗೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಕೊಡುವ ಹೇಳಿಕೆಗಳು ಕೂಡ ಈ ಸುದ್ದಿಗೆ ಪೂರಕವಾಗಿಯೇ ಇವೆ.
ಐಶ್ವರ್ಯಾ ರೈ ತನ್ನ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2007ರಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ತಮ್ಮ ಪುತ್ರನ ಮದುವೆಯನ್ನು ಐಶ್ವರ್ಯಾ ರೈ ಜೊತೆ ಮಾಡಿದ್ದರು. ಅವರ ಮನೆಯಲ್ಲಿಯೇ ನಡೆದ ಅದ್ಧೂರಿ ವಿವಾಹಕ್ಕೆ ಬಾಲಿವುಡ್ ಮಂದಿ ಸಾಕ್ಷಿಯಾಗಿದ್ದರು.

2011ರಲ್ಲಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾಗೆ ಜನ್ಮ ನೀಡಿದ್ದರು. ಇಲ್ಲಿಂದ ಇಬ್ಬರ ನಡುವಿನ ಸಂಬಂಧ ಚೆನ್ನಾಗಿಯೇ ಇತ್ತು. ಕೆಲವು ವರ್ಷಗಳಿಂದ ಅತ್ತೆ ಹಾಗೂ ನಾದಿನಿ ನಡುವೆ ಐಶ್ವರ್ಯಾ ರೈಗೆ ವೈಮನಸ್ಸು ಮೂಡಿದೆ ಎಂದು ಬಾಲಿವುಡ್ ಮಾತಾಡಿಕೊಳ್ಳುತ್ತಿದೆ. ಅಮಿತಾಭ್ ಬಚ್ಚನ್ ತಮ್ಮ ಆಸ್ತಿಯನ್ನು ತಮ್ಮಿಬ್ಬರು ಮಕ್ಕಳಿಗೂ ಸಮಾನವಾಗಿ ಭಾಗ ಮಾಡಿದ ದಿನದಿಂದ ವಿಚ್ಛೇದನದ ಬಗ್ಗೆ ವದಂತಿಗಳು ಮತ್ತಷ್ಟು ಜೋರಾಗಿಯೇ ಹರಿದಾಡುವುದಕ್ಕೆ ಶುರುವಾಗಿತ್ತು.
ಪ್ರತ್ಯೇಕವಾಗಿ ವಾಸ?
ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರ ವಿಚ್ಚೇದನದ ಸುದ್ದಿ ಹರಿದಾಡುತ್ತಿದ್ದಂತೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಐಶ್ವರ್ಯಾ ಹಾಗೂ ಅಭಿಷೇಕ್ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇವೆ ಅನ್ನೋದು ಬೆಳಕಿಗೆ ಬಂದಿತ್ತು. ಇತ್ತೀಚೆಗೆ ಯಾವುದೇ ಕಾರ್ಯಕ್ರಮಗಳು ಇದ್ದರೂ ಇಬ್ಬರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಅನುಮಾನಕ್ಕೆ ಕಾರಣವಾಗಿದೆ.

ಊಹಾಪೋಹಗಳು ಒಂದೆರಡಲ್ಲ
ಅಭಿಷೇಕ್ ಬಚ್ಚನ್ ಕೆಲವೊಮ್ಮೆ ನೀಡಿದ ಹೇಳಿಕೆಗಳು ಐಶ್ವರ್ಯಾ ಜೊತೆಗಿನ ಸಂಬಂಧಕ್ಕೆ ಮತ್ತಷ್ಟು ಬೆಂಕಿ ಹಚ್ಚಿದೆ. ಆಗಾಗ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಭಿಷೇಕ್ ಬಚ್ಚನ್ ವಿಚ್ಛೇದನದ ಕುರಿತ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ. ಅತ್ತ ಅಮಿತಾಭ್ ಬಚ್ಚನ್ ಕೂಡ ತಮ್ಮ ಎಕ್ಸ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಮಾರ್ಮಿಕವಾಗಿ ಸಂದೇಶಗಳನ್ನು ರವಾನೆ ಮಾಡಿದ್ದರು.
ಮಗಳ ಜೊತೆಗೆ ಬಾಂಧವ್ಯ
ವಿಚ್ಛೇದನದ ವದಂತಿಗಳು ಹಬ್ಬಿದ ದಿನಗಳಿಂದ ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿ ಆರಾಧ್ಯರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಏರ್‌ಪೋರ್ಟ್‌ಗಳಲ್ಲಿ, ಕಾರ್ಯಕ್ರಮಗಳಲ್ಲಿ ಐಶ್ವರ್ಯಾ ರೈ ಹಾಗೂ ಆರಾಧ್ಯಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೇ ವೇಳೆ ಸಂದರ್ಶನದಲ್ಲಿ ಮಗಳನ್ನು ಬೆಳೆಸುವ ಬಗ್ಗೆನೂ ಗಂಭೀರವಾಗಿ ಮಾತಾಡುತ್ತಿದ್ದಾರೆ. ಈ ಹಿಂದೆ ನೀಡಿದ ಸಂದರ್ಶನದಲ್ಲಿ ಕೊಟ್ಟ ಹೇಳಿಕೆಯೊಂದು ಈಗ ವೈರಲ್ ಆಗುತ್ತಿದೆ.
ಮಗಳನ್ನು ಒಂಟಿಯಾಗಿ ಬೆಳೆಸಬಲ್ಲೆ
ಈ ಹಿಂದೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ರೈ ತಮ್ಮ ಮಗಳನ್ನು ಒಂಟಿಯಾಗಿ ಬೆಳೆಸುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. "ನನ್ನ ಮಗಳನ್ನು ನೋಡಿಕೊಳ್ಳುವುದಕ್ಕೆ ನಾನು ದಾದಿಯನ್ನು ನೇಮಿಸಿಕೊಳ್ಳಬಹುದಿತ್ತು. ಆದರೆ, ಹಾಗೆ ಮಾಡಿಲ್ಲ. ಮಗಳನ್ನು ನಾನೇ ನೋಡಿಕೊಂಡಿದ್ದೇನೆ. ನಾನು ನನ್ನ ಮಗಳನ್ನು ಒಂಟಿಯಾಗಿ ಬೆಳೆಸಬಲ್ಲೆ" ಎಂದು ಐಶ್ವರ್ಯಾ ರೈ ಹೇಳಿದ್ದರು. ಇದೇ ಹೇಳಿಕೆ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಗೌಪ್ಯತೆಯನ್ನು ಕಾಪಾಡಿಕೊಂಡ ದಂಪತಿ
ಬಾಲಿವುಡ್ ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ಸಂಬಂಧದ ಸುತ್ತ ಹರಿದಾಡುತ್ತಿರುವ ಊಹಾಪೋಹಗಳು ಅಭಿಮಾನಿಗಳನ್ನು ಕುತೂಹಲವನ್ನು ಕೆರಳಿಸಿದೆ. ಎಲ್ಲಾ ಸುದ್ದಿಗಳು ಹರಿದಾಡುತ್ತಿರುವ ಹೊರತಾಗಿಯೂ ಇವರಿಬ್ಬರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ತಮ್ಮ ಸಿನಿಮಾಗಳ ಬಗ್ಗೆ ಗಮನವನ್ನು ಕೇಂದ್ರಿಕರಿಸಿದ್ದಾರೆ.


Click it and Unblock the Notifications











