JNU ವಿದ್ಯಾರ್ಥಿಗಳಿಗೆ 'ದಿ ಕೇರಳ ಸ್ಟೋರಿ' ವಿಶೇಷ ಪ್ರದರ್ಶನ: ಆಡಿಟೋರಿಯಂ ಮುಂದೆ ಪ್ರತಿಭಟನೆ
'ದಿ ಕೇರಳ ಸ್ಟೋರಿ' ಟ್ರೈಲರ್ ರಿಲೀಸ್ ಆದಲ್ಲಿಂದ ದೇಶದ ಹಲವೆಡೆ ವಿವಾದಗಳು ಹುಟ್ಟುಕೊಂಡಿವೆ. ಕೇರಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡುವಂತೆ ಕೋರ್ಟ್ ಮೊರೆ ಹೋಗಲಾಗಿದೆ. ಕೇರಳದ ರಾಜಕೀಯ ಮುಖಂಡರು ಈ ಸಿನಿಮಾ ವಿರುದ್ಧ ತಿರುಗಿಬಿದ್ದಿದ್ದಾರೆ.
ಕೇರಳದ ಸುಮಾರು 32 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ. ಇವರೆಲ್ಲರೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಭಯೋತ್ಪಾದನಾ ಸಂಘಟನೆ ಐಸಿಸ್ ಸೇರ್ಪಡೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದೇ ವಿಷಯಕ್ಕೆ ಕೇರಳದ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. 'ದಿ ಕೇರಳ ಸ್ಟೋರಿಯನ್ನು ಇಟ್ಟುಕೊಂಡು ಸಂಘ ಪರಿವಾರ ನಕಲಿ ಪ್ರಚಾರ ಮಾಡುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ರೋಶ ಹೊರಹಾಕಿದ್ದರು.

ಪಿಣರಾಯಿ ವಿಜಯನ್, ಶಶಿ ತರೂರ್ ಸೇರಿದಂತೆ ಕೇರಳದ ಸಿಪಿಎಂ ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ರಪಡಿಸುತ್ತಿದ್ದಾರೆ. ಈ ಮಧ್ಯೆ ಪ್ರತಿಭಟನೆಯ ಹೊರತಾಗಿಯೂ ದೆಹಲಿಯ ಜೆಎನ್‌ಯುನಲ್ಲಿ 'ದಿ ಕೇರಳ ಸ್ಟೋರಿ' ವಿಶೇಷ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.
JNUನಲ್ಲಿ 'ದಿ ಕೇರಳ ಸ್ಟೋರಿ' ಪ್ರದರ್ಶನ
ತೀವ್ರ ಪ್ರತಿಭಟನೆಯ ಹೊರತಾಗಿಯೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವಿದ್ಯಾರ್ಥಿಗಳ ಗುಂಪು JNUನಲ್ಲಿ 'ದಿ ಕೇರಳ ಫೈಲ್ಸ್' ಸಿನಿಮಾದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. JNU ಕ್ಯಾಂಪಸ್‌ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಆಡಿಟೋರಿಯಂ ಮುಂಭಾಗ ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಈ ವಿಶೇಷ ಪ್ರದರ್ಶನದಲ್ಲಿ 'ದಿ ಕೇರಳ ಸ್ಟೋರಿ' ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಷಾ ಹಾಗೂ ನಟಿ ಅದಾ ಶರ್ಮಾ ಭಾಗವಹಿಸಿದ್ದರು. ಇದೇ ವೇಳೆ JNU ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಭಾಗಿಯಾಗಿದ್ದರು.

32 ಸಾವಿರ ಕೇರಳ ಮಹಿಳೆಯರು ನಾಪತ್ತೆ
'ದಿ ಕೇರಳ ಸ್ಟೋರಿ' ಟ್ರೈಲರ್‌ನಲ್ಲಿ 32 ಸಾವಿರ ಕೇರಳ ಮಹಿಳೆಯರು ಕಾಣೆಯಾಗಿದ್ದಾರೆ. ಇವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಐಸಿಸ್‌ಗೆ ಭರ್ತಿ ಮಾಡಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಇದು ದೇಶದೆಲ್ಲೆಡೆ ಸಂಚಲನವನ್ನು ಸೃಷ್ಟಿಸಿತ್ತು. ಅಲ್ಲದೆ ಕೆಲವರು ಟೀಕೆ ಕೂಡ ಮಾಡುತ್ತಿದ್ದಾರೆ.
ಮೇ 5ರಂದು ರಿಲೀಸ್‌ಗೆ ರೆಡಿಯಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾಗೆ ತಡೆ ನೀಡುವಂತೆ ಕೋರಿ ಸುಪ್ರಿಂ ಕೋರ್ಟ್ ಮೊರೆ ಹೋಗಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ವಿಚಾರಣೆ ಮಾಡಲು ಒಪ್ಪಲಿಲ್ಲ. ಹೈಕೋರ್ಟ್‌ಗೆ ಹೋಗುವಂತೆ ಸಲಹೆ ನೀಡಿತ್ತು. ಇತ್ತ ಕೇರಳ ಕೋರ್ಟ್ ಕೂಡ ಟ್ರೈಲರ್ ನೋಡಿ ಸಿನಿಮಾ ತಡೆ ನೀಡಲು ಅಸಾಧ್ಯವೆಂದಿದೆ. ಅಲ್ಲದೆ ಕೇರಳದಲ್ಲಿ ಈ ಸಿನಿಮಾಗೆ ವಿರೋಧ ಹೆಚ್ಚಾದ ಬೆನ್ನಲ್ಲೇ ಚಿತ್ರತಂಡ ತನ್ನ ವಿವರಣೆಯನ್ನು ಬದಲಾಯಿಸಿದೆ.
ಯೂಟ್ಯೂಬ್‌ನಲ್ಲಿ ಬದಲಾಯ್ತು ವಿವರಣೆ
'ದಿ ಕೇರಳ ಸ್ಟೋರಿ' ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್‌ನಲ್ಲಿ ಕೆಲವು ವಿವರಣೆಯನ್ನು ಬದಲಾಯಿಸಲಾಗಿದೆ. ಈ ಹಿಂದೆ 32 ಸಾವಿರ ಕೇರಳ ಮಹಿಳೆಯರು ಕಾಣೆಯಾದ ಬಗ್ಗೆ ತೋರಿಸಲಾಗಿದೆ ಎಂದು ಹೇಳಿದ್ದರು. ಆದ್ರೀಗ ತೀವ್ರ ವಿರೋಧದ ಬೆನ್ನಲ್ಲೇ "ಕೇರಳದ ಮೂರು ವಿಭಿನ್ನ ಭಾಗದ ಯುವತಿಯರ ನೈಜ ಘಟನೆಗಳು" ಎಂದು ಹೇಳಿದೆ.
ಕೇರಳ ಎಂಪಿ ಶಶಿ ತರೂರ್ 32 ಸಾವಿರ ಸಂಖ್ಯೆಯ ಬಗ್ಗೆ ಸವಾಲು ಎಸೆದಿದ್ದರು. ಹಾಗೇ 'ದಿ ಕೇರಳ ಸ್ಟೋರಿ' ಸಿನಿಮಾ ಮೇಕರ್ಸ್ ವಿರುದ್ಧ ತಿರುಗಿಬಿದ್ದಿದ್ದರು. ಇದು "ಕೇರಳದ ವಾಸ್ತವದ ಉತ್ಪ್ರೇಕ್ಷೆ ಹಾಗೂ ಅಪಪ್ರಚಾರ" ಎಂದು ಶಶಿ ತರೂರ್ ಹೇಳಿದ್ದರು. ಇಷ್ಟೆಲ್ಲಾ ವಿವಾದಗಳ ಮಧ್ಯೆಯೂ 'ದಿ ಕೇರಳ ಸ್ಟೋರಿ' ಮೇ 5ರಂದು ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











