ಚಪ್ಪಾಳೆ ತಟ್ಟಿದರೆ ವೈರಸ್ ಸಾಯುತ್ತದೆ ಎಂದ ಅಮಿತಾಬ್ ಬಚ್ಚನ್ ಟ್ವೀಟ್ ಡಿಲೀಟ್!
ಶಬ್ಧ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತಾವೆಯೇ? ಜವಾಬ್ದಾರಿಯುತ ಕಲಾವಿದರಾಗಿ ಇಂತಹ ಅಸಂಬದ್ಧ, ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವಾಗ ಅದರ ಬಗ್ಗೆ ಒಮ್ಮೆ ಯೋಚಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲವೇ?- ಇದು ಬಿಗ್‌ಬಿ ಅಮಿತಾಬ್ ಬಚ್ಚನ್ ಅವರನ್ನು ಸಿನಿಮಾ ಅಭಿಮಾನಿಗಳು, ಜನರು ತರಾಟೆಗೆ ತೆಗೆದುಕೊಂಡ ಪರಿ.
ಸದ್ದಿನ ಶಕ್ತಿಯು ಬ್ಯಾಕ್ಟೀರಿಯಾಗಳನ್ನು ಕೊಲ್ಲುವಷ್ಟು ಸಮರ್ಥವಾಗಿವೆ ಎಂದು ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಅಮಿತಾಬ್ ಬಚ್ಚನ್ ಹಾಕಿದ್ದ ಪೋಸ್ಟ್‌ಗೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಅದನ್ನು ಡಿಲೀಟ್ ಮಾಡಿದ್ದಾರೆ. ಭಾರತದ ಸಿನಿಮಾ ಸೆಲೆಬ್ರಿಟಿಗಳಲ್ಲಿಯೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಅಮಿತಾಬ್, ಜನತಾ ಕರ್ಫ್ಯೂ ಸಂದರ್ಭದಲ್ಲಿ ಸಂಜೆ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು ಚಪ್ಪಾಳೆ ಹೊಡೆಯಿರಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಮೂಢನಂಬಿಕೆಯನ್ನು ಬಿತ್ತಲು ಬಳಸಿಕೊಂಡಿದ್ದರು.

ಚಪ್ಪಾಳೆ ಮೂಲಕ ಅಭಿನಂದನೆ
ಕಳೆದ ಭಾನುವಾರ ಇಡೀ ದಿನ ದೇಶದ ಜನರೆಲ್ಲರೂ ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಸಂಜೆ ಐದು ಗಂಟೆಗೆ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ವೈದ್ಯರು, ಆರೋಗ್ಯ ಕಾರ್ಯಕರ್ತರು, ಅಗತ್ಯ ಸೇವಾ ಪೂರೈಕೆದಾರರು ಮುಂತಾದವರಿಗೆ ಕೃತಜ್ಞತೆ ಸಲ್ಲಿಸೋಣ ಎಂದು ಮೋದಿ ಹೇಳಿದ್ದರು.

ಚಪ್ಪಾಳೆಯಿಂದ ಬ್ಯಾಕ್ಟೀರಿಯಾ ಸಾವು!
ಆದರೆ ಮೋದಿ ಅವರ ಹೇಳಿಕೆಯನ್ನು ಕೆಲವು ಮಂದಿ ಬೇರೆಯದೇ ಕಥೆಗಳನ್ನು ಕಟ್ಟಿ ವಾಟ್ಸಾಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟರು. ಹುಣ್ಣಿಮೆ ಅಥವಾ ಅಮಾವಾಸ್ಯೆಯ ಸಂದರ್ಭದಲ್ಲಿ ಜೋರಾಗಿ ಸದ್ದು ಮಾಡುವುದರಿಂದ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದು ಎಂಬ ಸಂದೇಶಗಳು ಹರಿದಾಡತೊಡಗಿದ್ದವು.

ವೈರಸ್‌ಗಳ ಶಕ್ತಿ ನಾಶ
ಇದನ್ನು ಅನೇಕರು ನಂಬಿ ಫಾರ್ವರ್ಡ್ ಮಾಡಿದ್ದರು. ನಟ ಅಮಿತಾಬ್ ಬಚ್ಚನ್ ಕೂಡ ಇದರಿಂದ ಹೊರತಾಗಿರಲಿಲ್ಲ. 'ಮಾರ್ಚ್ 22ರ ಸಂಜೆ 5 ಗಂಟೆಗೆ, ಈ ತಿಂಗಳ ಅತ್ಯಂತ ಕತ್ತಲ ದಿನವಾದ ಅಮವಾಸ್ಯೆಯಂದು ವೈರಸ್, ಬ್ಯಾಕ್ಟೀರಿಯಾ, ದುಷ್ಟ ಶಕ್ತಿಗಳು ಹೆಚ್ಚು ಸಮೃದ್ಧ ಮತ್ತು ಶಕ್ತಿಶಾಲಿಯಾಗುತ್ತವೆ. ವೈರಸ್‌ಗಳ ಶಕ್ತಿಯನ್ನು ಚಪ್ಪಾಳೆ ಮತ್ತು ಶಂಖದ ಸದ್ದಿನಿಂದ ಕಡಿಮೆ/ನಾಶ ಪಡಿಸಬಹುದು.

ರೇವತಿ ನಕ್ಷತ್ರ ಮತ್ತು ಚಂದ್ರ
ಚಂದ್ರನು ಹೊಸ ನಕ್ಷತ್ರ ರೇವತಿಯನ್ನು ದಾಟಲಿದ್ದಾನೆ. ದೇಹದ ಸಂಲಚನವು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ ಎಂದು ಅಮಿತಾಬ್, ಇದನ್ನು ಸ್ವೀಕರಿಸಿದಂತೆಯೇ ಫಾರ್ವರ್ಡ್ ಮಾಡಲಾಗಿದೆ ಎಂದು ತಮ್ಮ ಫೋಟೊದೊಂದಿಗೆ ಹಂಚಿಕೊಂಡಿದ್ದರು.
ಜವಾಬ್ದಾರಿ ಪ್ರದರ್ಶಿಸಿ
ಇದಕ್ಕೆ ಅನೇಕರು ಕಿಡಿಕಾರಿದ್ದಾರೆ. ಸ್ವಲ್ಪ ವೈಜ್ಞಾನಿಕವಾಗಿ ಚಿಂತಿಸಿ. ಭಾರತೀಯರ ಜೀವಗಳು ಸಂಕಷ್ಟದಲ್ಲಿದೆ. ನೀವು ಇನ್ನಷ್ಟು ಜವಾಬ್ದಾರಿ ಪ್ರದರ್ಶಿಸಬೇಕು. ನಿಮ್ಮಂತಹ ಪ್ರಭಾವಿಗಳು ಸಾಮಾನ್ಯ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ದುರದೃಷ್ಟವಶಾತ್ ಇಂತಹ ಅಸಂಬದ್ಧ ಟ್ವೀಟ್‌ಗಳಲ್ಲಿ ಮುಳುಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೋಸ್ಟ್ ಡಿಲೀಟ್ ಮಾಡಿದ ಅಮಿತಾಬ್
ಜನರಿಂದ ವಾಗ್ದಾಳಿ ನಡೆಯುತ್ತಿದ್ದಂತೆಯೇ ಅಮಿತಾಬ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಬಳಿಕ ಅದನ್ನು ಅಳಿಸಿ ಹಾಕಿದ್ದಾರೆ. ಅಷ್ಟರೊಳಗೆ ಸಾವಿರಾರು ಮಂದಿ ಅವರ ಟ್ವೀಟ್‌ಅನ್ನು ಷೇರ್ ಮಾಡಿದ್ದರು. ಇದೇ ರೀತಿ ಟ್ವೀಟ್ ಮಾಡಿದ್ದ ಬಿಜೆಪಿ ಮುಖಂಡ ಶೈನಾ ಎನ್‌ಸಿ ಕೂಡ ಅದನ್ನು ಅಳಿಸಿಹಾಕಿದರು.


Click it and Unblock the Notifications











