ದಯವಿಟ್ಟು ಅಮಿತಾಬ್, ರಾಜೇಶ್ ಖನ್ನಾರ 'ಆನಂದ್' ಸಿನಿಮಾ ರಿಮೇಕ್ ಮಾಡ್ಬೇಡಿ: ನೆಟ್ಟಿಗರಿಂದ ವಿರೋಧ
ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಹಾಗೂ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸಿದ ಸಿನಿಮಾ 'ಆನಂದ್'. ಇದು ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲೊಂದು. ಇದೇ ಸಿನಿಮಾ ಈಗ ಬಾಲಿವುಡ್‌ನಲ್ಲಿ ಮತ್ತೊಮ್ಮೆ ರಿಮೇಕ್ ಆಗುತ್ತಿದೆ. ಈ ಸಿನಿಮಾವನ್ನು ನಿರ್ಮಿಸಿದ್ದ ಒರಿಜನ್ ನಿರ್ಮಾಪಕರಾದ ಎನ್‌ಸಿ ಸಿಪ್ಪಿ ಅವರ ಮೊಮ್ಮಗ ಸಮೀರ್ ರಾಜ್ ಸಿಪ್ಪಿ ನಿರ್ಮಾಣ ಮಾಡಲಿದ್ದಾರೆ. ಇವರೊಂದಿಗೆ ವಿಕ್ರಮ್ ಖಾಖರ್ ಕೂಡ ಸೇರಿಕೊಂಡಿದ್ದಾರೆ.
1971ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾವನ್ನು ಬಾಲಿವುಡ್‌ನ ಲೆಜೆಂಡ್ ಡೈರೆಕ್ಟರ್ ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದರು. ಇಲ್ಲಿಗೆ ಸರಿ ಸುಮಾರು 50 ವರ್ಷಗಳಾಗಿವೆ. 5 ದಶಕಗಳ ಬಳಿಕ ಮತ್ತೆ 'ಆನಂದ್' ಸಿನಿಮಾ ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ. ಆದರೆ, ನೆಟ್ಟಿಗರು ಮಾತ್ರ ದಯವಿಟ್ಟು ಈ ಸಿನಿಮಾವನ್ನು ರಿಮೇಕ್ ಮಾಡಬೇಡಿ ಅಂತ ಕಿಡಿಕಾರುತ್ತಿದ್ದಾರೆ. ಅಷ್ಟಕ್ಕೂ 'ಆನಂದ್' ಸಿನಿಮಾವನ್ನು ಯಾಕೆ ಮಾಡಬೇಡಿ ಅಂತಿದ್ದಾರೆ? ಸೋಶಿಯಲ್ ಮೀಡಿಯಾದಲ್ಲಿ ಯಾಕೀ ಗದ್ದಲ?

'ಆನಂದ್' ಬಾಲಿವುಡ್‌ನ ಕಲ್ಟ್ ಸಿನಿಮಾಗಳಲ್ಲೊಂದು
'ಆನಂದ್' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸಿಮಿ ಹಿಟ್ ಅಂತ ಸಾಬೀತಾದ ಸಿನಿಮಾ. ಆದರೆ, ಈ ಸಿನಿಮಾ ಕೊಟ್ಟ ಎಫೆಕ್ಟ್ ಇಂದಿಗೂ ಹಾಗೆಯೇ ಇದೆ. ಈ ಸಿನಿಮಾ ಲೆಜೆಂಡ್ ರಾಜೇಶ್ ಖನ್ನಾಗೆ ಬ್ಯಾಕ್ ಟು ಬ್ಯಾಕ್ 17 ಹಿಟ್ ಕೊಟ್ಟ ಸಿನಿಮಾಗಳಲ್ಲೊಂದು. ಎಲ್ಲಕ್ಕಿಂತ ಹೆಚ್ಚಾಗಿ ಅಮಿತಾಬ್ ಬಚ್ಚನ್ ಹಾಗೂ ರಾಜೇಶ್ ಖನ್ನಾ ಇಬ್ಬರೂ ಜೊತೆಯಾಗಿ ನಟಿಸಿದ ಎರಡೇ ಎರಡು ಸಿನಿಮಾಗಳಲ್ಲಿ ಇದೂ ಕೂಡ ಒಂದು.
ಈ ಸಿನಿಮಾದಲ್ಲಿ ರಾಜೇಶ್ ಖನ್ನಾ 'ಆನಂದ್'. ಅಮಿತಾಬ್ ಬಚ್ಚನ್ ಬಾಬು ಮೋಷಾಯ್ (ಡಾ. ಭಾಸ್ಕರ್). ಆನಂದ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಜೀವನೋತ್ಸಾಹ ಮಾತ್ರ ಕಡಿಮೆಯಾಗಿರುವುದಿಲ್ಲ. ತನ್ನ ಸುತ್ತಮುತ್ತಲಿನವರೆನ್ನೆಲ್ಲಾ ಖುಷಿಯಾಗಿ ಇಡಬೇಕು ಎಂಬುದು ಆತನ ಆಸೆ. ಇನ್ನು ಆನಂದ್‌ಗೆ ಚಿಕಿತ್ಸೆ ನೀಡುತ್ತಿರುವ ಡಾ. ಭಾಸ್ಕರ್ ಈ ವ್ಯಕ್ತಿತ್ವದಿಂದ ಪ್ರೇರಿತರಾಗಿದ್ದರು. ಒಬ್ಬ ರೋಗಿ, ಮತ್ತೊಬ್ಬ ಡಾಕ್ಟರ್. ಇವರಿಬ್ಬರ ಜರ್ನಿ ಹತ್ತು ಹಲವು ಸಂದೇಶಗಳನ್ನು ಸಾರಿ ಹೇಳಿತ್ತು. ಇದು 70ರ ದಶಕದ ಸಿನಿಪ್ರಿಯರ ಮನ ಗೆದ್ದಿತ್ತು. ಇದೇ ಸಿನಿಮಾವನ್ನು ಈಗ ಮತ್ತೆ ರಿಮೇಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಇದು ನೆಟ್ಟಿಗರಿ ಇಷ್ಟವಿಲ್ಲ.'ದಯವಿಟ್ಟು 'ಆನಂದ್' ರಿಮೇಕ್ ಮಾಡಬೇಡಿ'

ಆನಂದ್ ರಿಮೇಕ್ ಆಗುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ, ಕೆಲ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ. ಮತ್ತೆ ಕೆಲವರು ಸಿಟ್ಟಿಗೆದ್ದಿದ್ದಾರೆ. ಇಂತಹ ಕ್ಲಾಸಿಕ್ ಸಿನಿಮಾವನ್ನು ರಿಮೇಕ್ ಮಾಡಿದರೆ, ಸಿನಿಮಾವನ್ನು ಹಾಳು ಮಾಡಿದಂತಾಗುತ್ತೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ. " ಈಗಾಗಲೇ 'ಶೋಲೆ', 'ಜಂಜೀರ್' ಅಂತ ಸಿನಿಮಾಗಳನ್ನು ರಿಮೇಕ್ ಮಾಡಿ ಹಾಳು ಮಾಡಿದ್ದೀರಾ.. ದಯವಿಟ್ಟು ಕ್ಲಾಸಿಕ್ ಸಿನಿಮಾವನ್ನು ಹಾಳು ಮಾಡಬೇಡಿ. ಬಾಲಿವುಡ್‌ನಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಇಲ್ಲ ಅನ್ನೋದು ಇದರಿಂದ ಗೊತ್ತಾಗುತ್ತಿದೆ," ಎಂದು ಕಿಡಿಕಾಡಿದ್ದಾರೆ.
"ಈ ಸಿನಿಮಾವನ್ನು ರಿಮೇಕ್ ಮಾಡುವ ಅಗತ್ಯ ನಿಮಗೆ ಯಾಕಿದೆ? ಯಾಕೆ ಇಂತಹ ಒಳ್ಳೆಯ ಸಿನಿಮಾಗಳನ್ನು ಹಾಳು ಮಾಡುತ್ತೀರಾ" ಎಂದು ಕಿಡಿ ಕಾರುತ್ತಿದ್ದರೆ, ಇತ್ತ ಇಂದಿನ ಸ್ಟಾರ್ ನಟರ ಹೆಸರು ಹೇಳಿ ನಿರ್ಮಾಪಕ ಕಾಲೆಳೆಯುತ್ತಿದ್ದಾರೆ.
'ಅರ್ಜುನ್ ಕಪೂರ್, ವರುಣ್ ಧವನ್ ಹಾಕಿಕೊಳ್ಳಿ'
ನೆಟ್ಟಿಗರು ಇಲ್ಲಿಗೆ ಸುಮ್ಮನೆ ಕೂತಿಲ್ಲ. ನಟ-ನಟಿಯರ ಹೆಸರನ್ನೂ ಸೂಚಿಸಿ ಕಾಲೆಳೆದಿದ್ದಾರೆ. " ಅರ್ಜುನ್ ಕಪೂರ್ ಹಾಗೂ ವರಣ್ ಧವನ್‌ರನ್ನು ಈ ಸಿನಿಮಾಗೆ ಹಾಕಿಕೊಳ್ಳಿ." ಎಂದಿದ್ದಾರೆ. ಇನ್ನೊಬ್ಬರು, " ನನ್ನ ಬಳಿ ಒಂದೊಳ್ಳೆ ಸಲಹೆಯಿದೆ. ರಾಜೇಶ್ ಖನ್ನಾ ಪಾತ್ರಕ್ಕೆ ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಪಾತ್ರಕ್ಕೆ ಸೈಫ್ ಅಲಿಖಾನ್ ಹಾಕಿಕೊಳ್ಳಿ. ಅದಕ್ಕೆ ಪ್ರೀತಿ ಜಿಂಟಾ ಜೊತೆ ಸ್ವಲ್ಪ ರೊಮ್ಯಾಂಟಿಕ್ ಸೇರಿಸಿ, ಅಮೆರಿಕದಲ್ಲಿ ಶೂಟ್ ಮಾಡಿ." ಎಂದು ಕರಣ್ ಜೋಹರ್ ಕಾಲೆಳೆದಿದ್ದಾರೆ.
ಅಂದ್ಹಾಗೆ ಇನ್ನೂ 'ಆನಂದ್ ರಿಮೇಕ್ ಯಾರು ಮಾಡುತ್ತಾರೆ? ಲೀಡ್ ರೋಲ್‌ನಲ್ಲಿ ಯಾರು ನಟಿಸುತ್ತಾರೆ? ಎಂಬುವುದು ಇನ್ನೂ ತಿಳಿದಿಲ್ಲ. ಅಲ್ಲದೆ ಈ ಮಾಡರ್ನ್ ಆನಂದ್ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುವುದೂ ಇನ್ನೂ ಗೊತ್ತಾಗಿಲ್ಲ.


Click it and Unblock the Notifications











