ಅಮಿತಾಬ್ ಬಚ್ಚನ್ ಈ ಎರಡು 'ಸ್ಟೈಲ್' ಹಿಂದೆ ಇರೋದು ನೋವಿನ ಕಥೆ
ಸಿನಿಮಾ ತಾರೆಯರು ಚಿತ್ರಕ್ಕಾಗಿ ಮಾಡುವ ಸ್ಟೈಲ್ ಅನ್ನು ಜನರೂ ಅನುಕರಿಸುತ್ತಾರೆ. ಸುದೀಪ್ ಅವರ 'ಹೆಬ್ಬುಲಿ' ಹೇರ್ ಸ್ಟೈಲ್, ಕಲ್ಪನಾ ಅವರ ಸೀರೆಯ ವೈಶಿಷ್ಟ್ಯ, ಮುಂಗಾರು ಮಳೆಯಲ್ಲಿ ಗಣೇಶ್ ಬೆರಳಿಗೆ ಹಾಕಿದ್ದ ಉಂಗುರ ಮತ್ತು ಕತ್ತಿನ ಚೈನ್ ಇವೆಲ್ಲವನ್ನೂ ಅಭಿಮಾನಿಗಳು ಫಾಲೋ ಮಾಡಿದ್ದರು. ಹಾಗೆಯೇ ಹಿಂದಿಯ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪ್ರತಿ ಸಿನಿಮಾದ ಸ್ಟೈಲ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿತ್ತು.
Recommended Video
ಅಮಿತಾಬ್ ಅವರ ಕೆಲವು ಸ್ಟೈಲ್‌ಗಳು ಸಾಕಷ್ಟು ಜನಪ್ರಿಯವಾಗಿದ್ದವು. 1984ರಲ್ಲಿ ಬಿಡುಗಡೆಯಾದ 'ಶರಾಬಿ' ಚಿತ್ರದ ಹಾಡೊಂದರಲ್ಲಿ ಬಿಳಿ ಸೂಟ್ ಧರಿಸಿ, ಬಲಗೈನಲ್ಲಿ ಗ್ಲಾಸ್ ಹಿಡಿದು ಎಡಗೈಯನ್ನು ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ಸ್ಟೈಲ್ ವಿಶೇಷ ಎನಿಸಿತ್ತು. ಅದೇ ವರ್ಷ 'ಇಂಕ್ವಿಲಾಬ್' ಚಿತ್ರದಲ್ಲಿಯೂ ಅಮಿತಾಬ್ ಕೈಗೆ ಕರ್ಚೀಫ್ ಕಟ್ಟಿಕೊಂಡು ನರ್ತಿಸುವ ದೃಶ್ಯವೂ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಅಮಿತಾಬ್ ರೀತಿಯೇ ಅನೇಕರು ಕೈಗೆ ಕರವಸ್ತ್ರ ಕಟ್ಟಿಕೊಂಡು ಓಡಾಡುವುದು ಫ್ಯಾಷನ್ ಆಗಿತ್ತು. ಆದರೆ ಅದರ ಹಿಂದಿನ ಕಥೆ ಬೇರೆಯೇ ಇದೆ. ಮುಂದೆ ಓದಿ...

ಫ್ಯಾಷನ್ ಆಗಿದ್ದ ಸ್ಟೈಲ್‌ಗಳು
ಈ ಎರಡೂ ಸ್ಟೈಲ್‌ಗಳು ಆಗಿನ ಕಾಲದಲ್ಲಿ ಯುವಜನರ ಪಾಲಿಗೆ ವಿಶಿಷ್ಟ ಫ್ಯಾಷನ್ ರೀತಿ ಕಂಡಿತ್ತು. ಆದರೆ ವಾಸ್ತವವಾಗಿ ಅಮಿತಾಬ್ ಅವುಗಳನ್ನು ಫ್ಯಾಷನ್‌ಗಾಗಿ ಮಾಡಿರಲಿಲ್ಲ. ಅವರಿಗೆ ತಮ್ಮ ಗಾಯವನ್ನು ಮುಚ್ಚಿಕೊಳ್ಳಲು ಅನಿವಾರ್ಯವಾಗಿ ಇದ್ದ ಆಯ್ಕೆಗಳಾಗಿದ್ದವು. ಆದರೆ ಅವು ಫ್ಯಾಷನ್ ಆಗುತ್ತದೆ ಎಂದು ಅವರೂ ಭಾವಿಸಿರಲಿಲ್ಲ.

ದೀಪಾವಳಿ ಪಟಾಕಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ ಅಮಿತಾಬ್ ಅವರ ಕೈ ಬೆರಳುಗಳಿಗೆ ಗಾಯವಾಗಿತ್ತು. ಅವು ವಾಸಿಯಾಗಲು ಹಲವು ದಿನಗಳು ಬೇಕಾಗಿತ್ತು. ಆದರೆ ಅದರ ನಡುವೆಯೇ ಚಿತ್ರೀಕರಣ ಮಾಡಬೇಕಿದ್ದರಿಂದ ಅಮಿತಾಬ್ ಕೈಗೆ ಆಗಿದ್ದ ಗಾಯವನ್ನು ತೋರಿಸದಂತೆ ಈ ಸ್ಟೈಲ್ ಮಾಡಿದ್ದರು ಎಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಎರಡು ತಿಂಗಳು ಬೇಕಾಯಿತು
'ಮಾನವ ದೇಹದಲ್ಲಿ ಮರು ಸಂರಚನೆ ಮಾಡಲು ಅತ್ಯಂತ ಕಷ್ಟಕರವಾದ ಅಂಗಗಳೆಂದರೆ ಬೆರಳುಗಳು. ಏಕೆಂದರೆ ಅವುಗಳಿಗೆ ನಿರಂತರ ಚಲನೆ ಅಗತ್ಯ. ಚಲನೆ ನಿಂತರೆ ಅವು ಸೆಟೆದುಕೊಂಡು ಬಿಡುತ್ತವೆ. ದೀಪಾವಳಿ ಬಾಂಬ್‌ನಿಂದ ನನ್ನ ಕೈಯನ್ನು ಸುಟ್ಟುಕೊಂಡಿದ್ದೆ. ಹೆಬ್ಬೆರಳಿನಿಂದ ತೋರುಬೆರಳಿನವರೆಗಿನ ಬೆರಳುಗಳನ್ನು ಚಲಿಸುವಂತೆ ಮಾಡಲು ಎರಡು ತಿಂಗಳು ಬೇಕಾಯಿತು. ನೋಡಿ ಎಷ್ಟು ಸೃಜನಶೀಲವಾಗಿತ್ತು' ಎಂದು ಫೋಟೊ ಹಂಚಿಕೊಂಡಿದ್ದಾರೆ.

ಗಾಯವಾದರೂ ಶೂಟಿಂಗ್ ಮಾಡಬೇಕಿತ್ತು
ಬಳಿಕ ತಮ್ಮ ಬ್ಲಾಗ್‌ನಲ್ಲಿ ಅದರ ಕುರಿತು ವಿವರವಾಗಿ ಬರೆದಿದ್ದಾರೆ. ಕೈಗೆ ಗಾಯವಾದರೂ ಕೆಲಸ ಮುಂದುವರಿಸಬೇಕಿತ್ತು. ಕೈಗೆ ಕರ್ಚೀಫ್ ಕಟ್ಟುವುದೋ ಅಥವಾ ಜೇಬಿನೊಳಗೆ ಕೈ ಇರಿಸಿಕೊಳ್ಳುವ ಆಟಿಟ್ಯೂಡ್‌ನೊಂದಿಗೋ ಕೆಲಸ ನಡೆಯಿತು. ಅದು ಮುಂದುವರೆಯಲೇ ಬೇಕಿತ್ತು ಎಂದು ಹೇಳಿದ್ದಾರೆ. ಆದರೆ ಅವುಗಳ ಹಿಂದಿನ ಪೂರ್ಣ ಕಥೆಯನ್ನು ಹೇಳಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ.


Click it and Unblock the Notifications











