ಭಾರತದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿದ ನಾಲ್ಕು ಮಂದಿ ಸೂಪರ್ ಸ್ಟಾರ್‌ಗಳು ಇವರೇ; ಅಮಿತಾಭ್ ಬಚ್ಚನ್ ನಂ 1
ಭಾರತದ ಯಾವುದೇ ಚಿತ್ರರಂಗವಿರಲಿ. ಅವರು ಸಿನಿಮಾ ಬಗ್ಗೆ ಮಾಹಿತಿ ಕೊಡುತ್ತಾರೆ ಹೊರತು, ತಮ್ಮ ಸಂಭಾವನೆ ಬಗ್ಗೆ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಅದರಲ್ಲೂ ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಯಾವುದೇ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ತಮ್ಮ ಗಳಿಕೆಯನ್ನು ಗೌಪ್ಯವಾಗಿಯೇ ಇಡುತ್ತಾರೆ. ಆದರೂ, ಅವರು ಗಳಿಸಿದ್ದೆಷ್ಟು ಅನ್ನೋದು ವರ್ಷಕ್ಕೊಮ್ಮೆ ರಿವೀಲ್ ಆಗುತ್ತೆ.
ಸೂಪರ್‌ಸ್ಟಾರ್‌ಗಳು ಆದಾಯ ತೆರಿಗೆ ಇಲಾಖೆಗೆ ಪ್ರತಿ ವರ್ಷ ಎಲ್ಲರಂತೆ ತಮ್ಮ ಆದಾಯಕ್ಕೆ ತಕ್ಕಂತೆ ತೆರಿಗೆಯನ್ನು ವಾವತಿ ಮಾಡುತ್ತಿದ್ದಾರೆ. ಅತೀ ಹೆಚ್ಚು ತೆರಿಗೆಯನ್ನು ಯಾರು ಪಾವತಿ ಮಾಡುತ್ತಾರೋ ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಬಾರಿ, ಅಂದರೆ, 2024 ಹಾಗೂ 2025ನೇ ಸಾಲಿನಲ್ಲಿ ಅತೀ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡಿದ ಸಿನಿಮಾ ಸ್ಟಾರ್‌ಗಳ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್ ನಂ 1 ಸ್ಥಾನದಲ್ಲಿ ಇದ್ದಾರೆ.

ಈಗಾಗಲೇ ಅಮಿತಾಭ್ ಬಚ್ಚನ್ ಆದಾಯ ತೆರಿಗೆ ಇಲಾಖೆಗೆ ಬೃಹತ್ ಮೊತ್ತವನ್ನು ಮುಂಗಡವಾಗಿ ಪಾವತಿ ಮಾಡಿದ್ದಾರೆ. 82ನೇ ವಯಸ್ಸಿನಲ್ಲಿ ಇಷ್ಟೊಂದು ಹಣ ಸಂಪಾಧನೆ ಮಾಡಿದ್ದು ಹೇಗೆ? ತೆರಿಗೆ ಕಟ್ಟಿದ್ದು ಎಷ್ಟು? ಇದೂವರೆಗೂ ಅತೀ ಹೆಚ್ಚು ತೆರಿಗೆ ಕಟ್ಟಿದ್ದರು ಭಾರತದ ನಟರು ಯಾರು? ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.
ಅಮಿತಾಭ್ ಬಚ್ಚನ್
ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ 2024-25ನೇ ಸಾಲಿನಲ್ಲಿ ಅತೀ ಹೆಚ್ಚು ಬೃಹತ್ ಮೊತ್ತದ ತೆರಿಗೆಯನ್ನು ಪಾವತಿಸಿದ್ದಾರೆ. ಈಗ ಬಿಗ್ ಬಿಗೆ 82 ವರ್ಷ. ಈ ಇಳಿ ವಯಸ್ಸಿನಲ್ಲೂ ಅಮಿತಾಭ್ ಗಳಿಕೆಯನ್ನು ಕೇಳಿದರು ಹೆಮ್ಮೆ ಎನಿಸುತ್ತೆ. ಅಮಿತಾಭ್ ಬಚ್ಚನ್ ಪ್ರಸಕ್ತ ಸಾಲಿನಲ್ಲಿ ಸುಮಾರು 120 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಇದೂವರೆಗೂ ಅತೀ ಹೆಚ್ಚು ತೆರಿಗೆ ಪಾವತಿಸಿದ ಸೂಪರ್‌ಸ್ಟಾರ್ ಪಟ್ಟಿಯಲ್ಲಿ ಶಾರುಖ್ ಖಾನ್ ಮೊದಲಿದ್ದರು. ಈ ಮೂಲಕ ಅಮಿತಾಭ್ ಬಚ್ಚನ್ ಅವರನ್ನೂ ಹಿಂದಿಕ್ಕಿದ್ದಾರೆ.
2024-25ನೇ ಸಾಲಿನಲ್ಲಿ ಅಮಿತಾಭ್ ಬಚ್ಚನ್ ಆದಾಯ 350 ಕೋಟಿ ರೂಪಾಯಿ ಎಂದು ಮಧ್ಯಮಗಳು ವರದಿಯನ್ನು ಮಾಡಿವೆ. ಕಳೆದ ವರ್ಷ ಬಿಗ್ ಬಿ ಸುಮಾರು 71 ಕೋಟಿ ರೂಪಾಯಿಯನ್ನು ತೆರಿಗೆಯಾಗಿ ಪಾವತಿಸಿದ್ದರು. ಆದರೆ, ಈ ವರ್ಷ ಸುಮಾರು ಶೇ. 69ರಷ್ಟು ಆದಾಯದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಅಮಿತಾಭ್ ಬಚ್ಚನ್ ಇಷ್ಟೊಂದು ಹಣವನ್ನು ತಮ್ಮ ಸಿನಿಮಾಗಳಿಂದ, ಜಾಹೀರಾತುಗಳಿಂದ ಹಾಗೂ ಜನಪ್ರಿಯ ಕ್ವಿಜ್ ಶೋ ಕೌನ್ ಬನೇಗಾ ಕರೋಡ್‌ಪತಿಯಿಂದ ಆದಾಯವನ್ನು ಸಂಪಾದನೆ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಸುಮಾರು ಎರಡು ದಶಕಗಳಿಂದ ಕೌನ್ ಬನೇಗಾ ಕರೋಡ್‌ಪತಿಯ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಶೋನಿಂದ ಅವರ ಆದಾಯ ಹೆಚ್ಚಿದೆ ಎನ್ನಲಾಗಿದೆ.
ಈಗಾಗಲೇ ವರದಿಯಾಗಿರುವ ಪ್ರಕಾರ, ಅಮಿತಾಭ್ ಬಚ್ಚನ್ ಮಾರ್ಚ್ 15ರಂದು ಮುಂಗಡವಾಗಿ ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರೆ. ಕೊನೆಯ ಕಂತಿನಲ್ಲಿ ಸುಮಾರು 52.5 ಕೋಟಿ ರೂಪಾಯಿಯನ್ನು ತರಿಗೆಯಾಗಿ ಪಾವತಿ ಮಾಡಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳು ಹಾಗೂ ಇಬ್ಬ ದಕ್ಷಿಣ ಭಾರತದ ನಟನನ್ನು 82 ವರ್ಷದ ಹಿರಿಯ ನಟ ಹಿಂದಿಕ್ಕಿದ್ದಾರೆ.

ಶಾರುಖ್ ಖಾನ್
ಇದೂವರೆಗೂ ಅತೀ ಹೆಚ್ಚು ತೆರಿಗೆ ಪಾವತಿಸಿದ ಭಾರತದ ಸೂಪರ್‌ಸ್ಟಾರ್‌ಗಳ ಪೈಕಿ ಶಾರುಖ್ ಖಾನ್ ಕೂಡ ಒಬ್ಬರು. ಕಳೆದ ವರ್ಷ ಶಾರುಖ್ ಖಾನ್ ನಟಿಸಿದ ಮೂರು ಸಿನಿಮಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. 'ಪಠಾಣ್', 'ಜವಾನ್' ಹಾಗೂ 'ಡಂಕಿ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. 'ಪಠಾಣ್' ಹಾಗೂ 'ಜವಾನ್' ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ 1000 ಕೋಟಿರ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ್ದವು. ಇನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ 'ಡಂಕಿ' ಸಿನಿಮಾ ಕೂಡ 470 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಹೀಗಾಗಿ ಶಾರುಖ್ ಖಾನ್ 2023 ಹಾಗೂ 2024ನೇ ಸಾಲಿನಲ್ಲಿ ಸುಮಾರು 92 ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಪಾವತಿ ಮಾಡಿದ್ದರು. ಕಳೆದ ವರ್ಷ ಬಾಲಿವಡ್‌ನ ಕಿಂಗ್ ಖಾನ್ ಪಾವತಿಸಿದ ತೆರಿಗೆಯೇ ಅತೀ ಹೆಚ್ಚು ಎಂದು ಹೇಳಲಾಗಿತ್ತು. ಶಾರುಖ್ ಖಾನ್ ಕಳೆದ ವರ್ಷ ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಮತ್ತೊಬ್ಬ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅನ್ನು ಹಿಂದಿಕ್ಕಿದ್ದರು.

ದಳಪತಿ ವಿಜಯ್
ದಳಪತಿ ವಿಜಯ್ ಕೂಡ ದಕ್ಷಿಣ ಭಾರತದಿಂದ ಅತೀ ಹೆಚ್ಚು ತೆರಿಗೆ ಪಾವತಿಸಿದ ದಕ್ಷಿಣ ಭಾರತದ ನಟ ಎನಿಸಿಕೊಂಡಿದ್ದರು. 2023 ಹಾಗೂ 24ನೇ ಸಾಲಿನಲ್ಲಿ ದಳಪತಿ ವಿಜಯ್ ಸುಮಾರು 80 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದರು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವು ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ.
ಕಳೆದ ವರ್ಷ ವಿಜಯ್ ನಟಿಸಿದ ಮೂರು ಸಿನಿಮಾಗಳು ರಿಲೀಸ್ ಆಗಿದ್ದವು. 'ವಾರಿಸು', ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದ 'ಲಿಯೋ' 2023ಯಲ್ಲಿ ರಿಲೀಸ್ ಆಗಿದ್ದರೆ, 2024ನೇ ಸಾಲಿನಲ್ಲಿ 'ಗೋಟ್' (The Greatest of All Time)ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಸಿನಿಮಾಗಳಿಂದ ಅತೀ ಹೆಚ್ಚು ಸಂಭಾವನೆಯನ್ನು ಪಡೆದಿದ್ದರು ಎಂದು ಹೇಳಾಗಿದೆ. ಆದರೆ, ಈ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ಇನ್ನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ತಮ್ಮದೇ 'ತಮಿಳಿಗ ವೆಟ್ರಿ ಕಳಗಂ' ಪಕ್ಷ ಸ್ಥಾಪನೆ ಮಾಡಿದ್ದಾರೆ. ಹೀಗಾಗಿ 'ಜನ ನಾಯಗನ್' ಅನ್ನುವ ಕೊನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಮೂಲಗಳ ಪ್ರಕಾರ, ವಿಜಯ್ ತಮ್ಮ ಕೊನೆಯ ಸಿನಿಮಾಗೆ 200 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಸಲ್ಮಾನ್ ಖಾನ್
2023-24ನೇ ಸಾಲಿನಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸಿದ ಭಾರತದ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಕೂಡ ಇದ್ದರು. ಈ ಸಾಲಿನಲ್ಲಿ ಇವರು ಸುಮಾರು 75 ಕೋಟಿ ರೂಪಾಯಿ ಆದಾತ ತೆರಿಗೆಯನ್ನು ಪಾವತಿ ಮಾಡಿದ್ದರು. ಶಾರುಖ್ ಖಾನ್ , ದಳಪತಿ ವಿಜಯ್ ಬಿಟ್ಟರೆ ಸೂಪರ್‌ಸ್ಟಾರ್‌ಗಳ ಪೈಕಿ ಹೆಚ್ಚು ತೆರಿಗೆ ಕಟ್ಟಿದವರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೂರನೇ ಸ್ಥಾನದಲ್ಲಿ ಇದ್ದರು.
2023 ಹಾಗೂ 2024ರಲ್ಲಿ ಸಲ್ಮಾನ್ ಖಾನ್ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಂತ ಯಶಸ್ಸು ಕಂಡಿರಲಿಲ್ಲ. 23ರಲ್ಲಿ ಸಲ್ಮಾನ್ ಖಾನ್ ನಿರ್ಮಿಸಿ, ನಟಿಸಿದ್ದ 'ಕಿಸಿ ಕಾ ಬಾಯ್ ಕಿಸಿ ಕಿ ಜಾನ್' ಸಿನಿಮಾ ರಿಲೀಸ್ ಆಗಿತ್ತು. ಇದರ ಹಿಂದೆನೇ 'ಟೈಗರ್ 3' ಕೂಡ ರಿಲೀಸ್ ಆಗಿತ್ತು. ಆದರೆ, ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೂ ಸಲ್ಮಾನ್ ಖಾನ್ ಆದಾಯದಲ್ಲಿ ಕೊರತೆ ಆಗಿರಲಿಲ್ಲ.
ಸಲ್ಮಾನ್ ಖಾನ್ ಸಿನಿಮಾಗಳ ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ನಿರೂಪಕರಾಗಿದ್ದಾರೆ. ಈ ಶೋನಿಂದ ಸಲ್ಮಾನ್ ಖಾನ್ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗೇ ಸಿನಿಮಾಗಳಿಂದ, ಜಾಹೀರಾತಿಗಳಿಂದ ಉತ್ತಮ ಆದಾಯವನ್ನು ಪ್ರತಿವರ್ಷ ಗಳಿಸುತ್ತಾರೆ.
ಈ ವರ್ಷ ಅಮಿತಾಭ್ ಬಚ್ಚನ್ ಇವರೆಲ್ಲರ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. 120 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿ ಮಾಡಿದ್ದು ಬಾಲಿವುಡ್ ಮಂದಿಗೆ ಅಚ್ಚರಿಯನ್ನು ಮೂಡಿಸಿದೆ. ಇನ್ನು 24-25ನೇ ಸಾಲಿನ ಶಾರುಖ್ ಖಾನ್, ಸಲ್ಮಾನ್ ಖಾನ್ ದಳಪತಿ ವಿಜಯ್ ಎಷ್ಟು ಕೋಟಿ ತೆರಿಗೆಯನ್ನು ಪಾವತಿ ಮಾಡಿದ್ದಾರೆ ಅನ್ನೋ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.


Click it and Unblock the Notifications











