ಅಂಬಾನಿ ಮಗನ ಪ್ರೀ ವೆಡ್ಡಿಂಗ್‌ನಲ್ಲಿ ರಾಮೇಶ್ವರಂ ಕೆಫೆ ಖಾದ್ಯಗಳು; ಶ್ರೀಮಂತರ ಪಾರ್ಟಿಯಲ್ಲಿ ಮಿಂಚಿದ ಪುಡಿ ಇಡ್ಲಿ, ದೋಸೆ
ಇತ್ತೀಚೆಗೆ ಬೆಂಗಳೂರು ಮೂಲದ ರೆಸ್ಟೋರೆಂಟ್ ರಾಮೇಶ್ವರಂ ಕೆಫೆ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಬೆಂಗಳೂರಿನ ಇಂದಿರಾನಗರದ ಬ್ರ್ಯಾಂಚ್‌ನಲ್ಲಿ ಬಾಂಬ್ ಸ್ಪೋಟ ದೇಶ್ಯಾದ್ಯಂತ ಚರ್ಚೆಯಾಗಿತ್ತು. ಈ ಕಹಿ ಘಟನೆ ಇನ್ನೇನು ಮರೆಯುತ್ತಿರುವಾಗಲೇ ಹೈದಾರಾಬಾದ್‌ನಲ್ಲಿರುವ ಶಾಖೆಯಲ್ಲಿ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ರೇಡ್ ಮಾಡಿದ್ದರು.
ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹೈದರಾಬಾದ್‌ನ ಹಲವು ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದರು. ಹಾಗೆಯೇ ರಾಮೇಶ್ವರಂ ಕೆಫೆಯ ಮೇಲೂ ದಾಳಿ ಮಾಡಿ, ಅವಧಿ ಮುಗಿದ ಹಾಗೂ ಲೇಬಲ್ ಇಲ್ಲದ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದರು. ಈ ವೇಳೆ ಕೂಡ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

ಇಷ್ಟೆಲ್ಲ ಅಡೆತಡೆಗಳ ಮಧ್ಯೆಯೂ ರಾಮೇಶ್ವರಂ ಕೆಫೆ ದೇಶ್ಯಾದ್ಯಂತ ಗಮನ ಸೆಳೆದಿದೆ. ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಇವೆಂಟ್‌ನಲ್ಲಿ ಸದ್ದು ಮಾಡಿದೆ. ಈ ಕಾರ್ಯಕ್ರಮಕ್ಕೆ ಬಂದಿದ್ದ ಸುಮಾರು 800ಕ್ಕೂ ಅಧಿಕ ಅತಿಥಿಗಳಿಗೆ ತಮ್ಮ ರೆಸ್ಟೋರೆಂಟ್‌ನ ಐಕಾನಿಕ್ ತಿನಿಸುಗಳನ್ನು ಬಡಿಸಿ ಸಂಭ್ರಮಿಸಿದ್ದಾರೆ.
ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ರಾಮೇಶ್ವರಂ ಕೆಫೆಯ ಸಹ ಸಂಸ್ಥಾಪಕರಾದ ರಾಘವೇಂದ್ರ ರಾವ್ ಈ ವಿಷಯವನ್ನು ಬಹಿರಂಗ ಪಡಿಸಿದ್ದರು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ದಕ್ಷಿಣ ಭಾರತದ ಖಾದ್ಯಗಳನ್ನು ಅತಿಥಿಗಳಿಗೆ ಉಣ ಬಡಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ರಾಮೇಶ್ವರಂ ಕೆಫೆ ಇನ್ನೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ ಎಂದಿದ್ದರು.

" ವಿಶ್ವದ ಅತ್ಯುತ್ತಮ ಪ್ರೀ ವೆಡ್ಡಿಂಗ್ ಸೆಲೆಬ್ರೆಷನ್ ಸ್ಪೇನ್‌ನ ಸೆಲೆಬ್ರೆಟಿ ಕ್ಯೂಸ್‌ನಲ್ಲಿ ನಡೆಯುತ್ತಿದೆ. ಇದರಲ್ಲಿ ಭಾಗಿಯಾಗಿದ್ದಕ್ಕೆ ಹೆಮ್ಮೆ ವ್ಯಕ್ತವಾಗುತ್ತಿದೆ. ದಕ್ಷಿಣ ಭಾರತದ ತಿನಿಸುಗಳನ್ನು ಉಣಬಡಿಸಿದ ದಕ್ಷಿಣ ಭಾರತದ ಏಕೈಕ ರೆಸ್ಟೋರೆಂಟ್ ದಿ ರಾಮೇಶ್ವರಂ ಕೆಫೆ" ಎಂದು ರಾಘವೇಂದ್ರ ರಾವ್ ಹೇಳಿಕೊಂಡಿದ್ದರು. ಹಾಗೇ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಇವೆಂಟ್‌ನಲ್ಲಿ ರಾಮೇಶ್ವರಂ ಕೆಫೆ ದಕ್ಷಿಣ ಭಾರತದ ಏನೆಲ್ಲ ಖಾದ್ಯಗಳನ್ನು ನೀಡಿತ್ತು ಅನ್ನೋದು ವರದಿಯಾಗಿದೆ.
ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್ ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ಬಾಲಿವುಡ್ ತಾರೆಯರು ಹಾಗೂ ಕ್ರಿಕೆಟರ್‌ಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದು, ಅವರೆಲ್ಲರೂ ಪುಡಿ ಇಡ್ಲಿ ಹಾಗೂ ಪುಡಿ ದೋಸೆಯನ್ನು ಎಂಜಾಯ್ ಮಾಡಿದ್ದರು ಎಂದು ಹೇಳಿದ್ದಾಗಿ ವರದಿಯಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ರಾಮೇಶ್ವರಂ ಕೆಫೆ ಬಗ್ಗೆ ಕೆಲ ನೆಟ್ಟಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಎಂದಿನಂತೆ ತುಪ್ಪವನ್ನು ಜಾಸ್ತಿ ಬಳಸುತ್ತಾರೆಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇನ್ನು ರಾಮೇಶ್ವರಂ ಕೆಫೆಯ ಜನಪ್ರಿಯ ಖಾದ್ಯಗಳಾದ ಘೀ ಪುಡಿ ಇಡ್ಲಿ, ಘೀ ಪುಡಿ ಮಸಾಲಾ ದೋಸೆ ಜೊತೆಗೆ ಓಪನ್ ಬಟರ್ ಮಸಾಲಾ ದೋಸೆ, ಗಾರ್ಲಿಕ್ ರೋಸ್ಟ್ ದೋಸೆ, ವಡೆ, ಪೊಂಗಲ್ ಅಂತಹ ಖಾದ್ಯಗಳನ್ನು ನೀಡಿರಬಹುದು ಎಂದು ಹೇಳಲಾಗುತ್ತಿದೆ. ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮ ಒಂದು ವರ್ಷದಿಂದ ಆರಂಭ ಆಗಿದೆ. ಕೆಲವು ತಿಂಗಳ ಹಿಂದಷ್ಟೇ ಈ ಜೋಡಿ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ಧೂರಿ ಪ್ರೀ ವೆಡ್ಡಿಂಗ್ ಪಾರ್ಟಿಯನ್ನು ಹಮ್ಮಿಗೊಂಡಿದ್ದರು. ಈಗ ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನು ಸ್ಪೇನ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಮೇ 29 ರಿಂದ ಜೂನ್ 1ರವರೆಗೂ ಈ ಅದ್ಧೂರಿ ಸಮಾರಂಭ ನಡೆದಿತ್ತು.


Click it and Unblock the Notifications











