ಧುರಂಧರ್ 2 ರಿಜೆಕ್ಟ್ ಮಾಡಿದ್ದೇಕೆ ಅನಿಲ್ ಕಪೂರ್ ? ದಾವೂದ್ ಇಬ್ರಾಹಿಂ ಜೊತೆ 'ಪಲ್ಲವಿ ಅನುಪಲ್ಲವಿ' ನಟನಿಗೆ ಇರುವ ನಂಟೇನು?
ಟೆರೆರಿಸ್ಟ್‌ಗಳ ಟೆರರ್ ಭಾರತವನ್ನ ಅದೆಷ್ಟೋ ಸಲ ರಕ್ತದ ಮಡುವಲ್ಲಿ ಮಲಗಿಸಿದೆ. ಮುಂಬೈ ಅಟ್ಯಾಕ್.. ಸಂಸತ್ ಮೇಲಿನ ದಾಳಿ.. ಹೈದ್ರಾಬಾದ್ ಬಾಂಬ್ ಬ್ಲ್ಯಾಸ್ಟ್.. ಒಂದಾ.. ಎರಡಾ..ಒಂದರ ಹಿಂದೊಂದು ದಾಳಿ ನಡೀತಾನೇ ಇದೆ. ಪ್ರತಿ ಬಾರಿ ಬ್ಲ್ಯಾಸ್ಟ್ ಆದಾಗ್ಲೂ ಪ್ರತಿಯೊಬ್ಬರೂ, ಒಬ್ಬರ ಮೇಲೆ ಇನ್ನೊಬ್ಬರ ತಪ್ಪುಗಳನ್ನು ಹೋರಿಸಿ ಕೈ ತೊಳೆದುಕೊಂಡ್ಬಿಡ್ತಾರೆ.
ಇನ್ನೊಂದಷ್ಟ್ ಸಲಾ ಅಪರಾಧಿಯನ್ನು ಹಿಡಿಯೋವಲ್ಲಿ ನಮ್ಮ ಸಿಸ್ಟಮ್ ಯಶಸ್ವಿಯಾಗುತ್ತೆ. ಇದಕ್ಕೆ ಕಸಬ್ ಮತ್ತು ಅಫ್ಜಲ್ ಗುರೂಗಾದ ಶಿಕ್ಷೆ ಸಾಕ್ಷಿ. ಆದ್ರೆ ಇದೆಲ್ಲದರ ಹಿಂದಿನ ವ್ಯಕ್ತಿ. ಭಾರತದ ಮೇಲೆ ಮೊದಲ ಬಾರಿಗೆ ದಾಳಿ ಮಾಡಿದ ದಾವೂದ್ ಎಲ್ಲಿದ್ದಾನೆ. ಇಷ್ಟ್ ದಿನಾ ಆದ್ರೂ ದಾವೂದ್ ಪೊಲೀಸರ ಕೈಗೆ ಯಾಕೆ ಸಿಕ್ಕಿಲ್ಲ ಸಿಕ್ತಿಲ್ಲ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

ಈ ಪ್ರಶ್ನೆಗೆ ಇವತ್ತಿಗೂ ಕೂಡ ಉತ್ತರ ಸಿಕ್ಕಿಲ್ಲ ಎನ್ನುವುದು ಬೇರೆ ವಿಷಯವಾದರೂ ಸದ್ಯ ದಾವೂದ್ ಇಬ್ರಾಹಿಂ ಹೆಸರೇಳಿಕೊಂಡು ಹಲವರು ಅನಿಲ್ ಕಪೂರ್ ವಿರುದ್ಧ ವಿಷ ಕಾರುತ್ತಿದ್ದಾರೆ. ಇದಕ್ಕೆ ಕಾರಣ ''ಧುರಂದರ್ 2'' ಎನ್ನುವುದು ಒಂದಾದರೆ ದಾವೂದ್ ಪಕ್ಕ ಅನಿಲ್ ಕಪೂರ್ ನಿಂತಾಗ ತೆಗೆಯಲಾದ ಫೋಟೊ ಮತ್ತೊಂದು ಕಾರಣ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಬಾಲಿವುಡ್ ಮೇಲೆ ಭೂಗತಲೋಕದ ನೆರಳು ಮೊದಲಿಂದ ಇದೆ. ಆದರೆ, ಈ ನೆರಳಿನಾಸರೆಯಲ್ಲಿ ಹಿಂದೊಮ್ಮೆ ಅನಿಲ್ ಕಪೂರ್ ತಮಗೆ ಗೊತ್ತಿಲ್ಲದೇ ನಿಂತಿದ್ದರು ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಗೊತ್ತಿದ್ದರೆ ಅನಿಲ್ ಕಪೂರ್ ಮೇಲೆ ಇಂದು ಸೈಬರ್ ದಾಳಿ ನಡೆಯುತ್ತಿರಲಿಲ್ಲ.
ನಿಮಗೆ ಗೊತ್ತಿರಲಿ ಅದು 1988ನೇ ಇಸ್ವಿ. ಸ್ಥಳ ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ. ಇನ್ನೂ ಆ ಕಾಲದಲ್ಲಿ ಶಾರ್ಜಾ ಕೇವಲ ಕ್ರಿಕೆಟ್ ಮೈದಾನವಾಗಿರಲಿಲ್ಲ. ಆ ಕಾಲದಲ್ಲಿ ಶ್ರೀಮಂತರು, ಪ್ರಭಾವಿಗಳು ಮತ್ತು ಭೂಗತ ಲೋಕದ ವ್ಯಕ್ತಿಗಳ ಅಚ್ಚುಮೆಚ್ಚಿನ ತಾಣವಾಗಿತ್ತು.
1993ರ ಮುಂಬೈ ಬ್ಲಾಸ್ಟ್ ಗಿಂತ ಮೊದಲು ರಾಜಾರೋಷವಾಗಿ ದಾವೂದ್ ಇಬ್ರಾಹಿಂ ಓಡಾಡುತ್ತಿದ್ದ ದಿನಗಳವು. ಇಂತಹ ದಿನಗಳಲ್ಲಿ ಆಗಷ್ಟೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ದ ಅನಿಲ್ ಕಪೂರ್ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ರಣ ರೋಚಕ ಪಂದ್ಯ ಕಣ್ತುಂಬಿಕೊಳ್ಳಲು ಹೋಗಿದ್ದರು.

ಕೇವಲ ಅನಿಲ್ ಕಪೂರ್ ಮಾತ್ರ ಅಲ್ಲ ಬಾಲಿವುಡ್‌ನ ದಂತಕತೆ ರಾಜ್‌ಕಪೂರ್ ಕೂಡ ತಮ್ಮ ಪತ್ನಿ ಕೃಷ್ಣ ರಾಜ್ ಕಪೂರ್ ಜೊತೆ ಹೋಗಿದ್ದರು. ಅಸಂಖ್ಯಾತ.. ಅಗಣಿತ ಕ್ರೀಡಾಭಿಮಾನಿಗಳಿಂದ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು.
ಇನ್ನೂ ಆಗಲೇ ಹೇಳಿದಂತೆ ಅನಿಲ್ ಕಪೂರ್ ಆ ಕಾಲಕ್ಕೆ ಹೊಸಬ. ವಿಐಪಿ ಗ್ಯಾಲರಿಯಲ್ಲಿ ಕೂರಲು ಅವಕಾಶ ಸಿಕ್ಕರೆ ಹೆಚ್ಚೇನ್ನುವ ದಿನಗಳವು. ಹೀಗಿರುವಾಗ ಅನಿಲ್ ಕಪೂರ್ ಗೆ ವಿಐಪಿ ಗ್ಯಾಲರಿಯಲ್ಲಿ ಕೂರುವ ಅವಕಾಶವೇನೋ ಸಿಕ್ಕಿತ್ತು. ಆದರೆ ಅನಿಲ್ ಕಪೂರ್ ಅವರಿಗೆ ತಾವು ಭಾರತದ
"ಮೋಸ್ಟ್ ವಾಂಟೆಡ್ ಕ್ರಿಮಿನಲ್" ಪಕ್ಕದಲ್ಲಿ ಕೂರುತ್ತಿದ್ದೇನೆ ಎನ್ನುವ ಕಲ್ಪನೆ ಕೂಡ ಇರಲಿಲ್ಲ. ಸುಳಿವು ಇರಲಿಲ್ಲ.
ನೋಡ ನೋಡುತ್ತಾ ದಾವೂದ್ ಜೊತೆ ಅನಿಲ್ ಕಪೂರ್ ಇರುವ ಫೋಟೊ ವೈರಲ್ ಆಯ್ತು. ಅನಿಲ್ ಕಪೂರ್ ವಿರುದ್ಧ ಒಂದು ಬಹುದೊಡ್ಡ ವರ್ಗ ಮುಗಿಬಿತ್ತು. ಬಾಲಿವುಡ್ ಮತ್ತು ಅಂಡರ್ ವರ್ಲ್ಡ್ ನಡುವೆ ಇರುವ ಸಂಬಂಧಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಯ್ತು. ತಮ್ಮ ತಂದೆಯ ವಿರುದ್ಧ ಈ ಆರೋಪಗಳಿಗೆ ಸೋನಂ ಕಪೂರ್ 2020ರಲ್ಲಿ ಉತ್ತರ ನೀಡಿದ್ದರು.
ದಾವೂದ್ ಇಬ್ರಾಹಿಂ ಜೊತೆಗಿನ ಅನಿಲ್ ಕಪೂರ್ ಹಳೇ ಚಿತ್ರವನ್ನು ಹಂಚಿಕೊಂಡಿದ್ದ ವ್ಯಕ್ತಿಯೊಬ್ಬರು ಇವರ ಸಂಬಂಧವನ್ನು ಕಾರಣ ಸಮೇತ ವಿವರಿಸಿ ಎಂದು ಸೋನಮ್‌ಗೆ ಟ್ಯಾಗ್ ಮಾಡಿದ್ದರು. 'ಕರ್ಮ'ದ್ದೋ 'ಧರ್ಮ'ದ್ದೋ ಎಂದು ಪ್ರಶ್ನೆ ಮಾಡಿದ್ದರು. ಹೀನಾ ಮಾನವಾಗಿ ಟ್ರೋಲ್ ಮಾಡಿದ್ದರು.
ತಮ್ಮ ತಂದೆಯ ವಿರುದ್ಧದ ಈ ಟ್ರೋಲ್‌ಗಳನ್ನು ಕೆರಳಿ ಕೆಂಡವಾಗಿದ್ದ ಸೋನಂ ಕಪೂರ್ ತಂದೆಗೂ ದಾವೂದ್‌ಗೂ ಇದ್ದದ್ದು ಕರ್ಮ ಅಥವಾ ಧರ್ಮದ ಸಂಬಂಧವಲ್ಲ, ಬದಲಿಗೆ ಕ್ರಿಕೆಟ್ ನ ಸಂಬಂಧ ಮಾತ್ರ ಎಂದು ಹೇಳಿದ್ದರು. ಅನಿಲ್ ಕಪೂರ್ ಮಾತ್ರವಲ್ಲ ರಾಜ್ ಕಪೂರ್ ಮತ್ತು ಕೃಷ್ಣ ಕಪೂರ್ ಕೂಡ ಅಲ್ಲಿದ್ದರು ಎಂದು ಹೇಳಿದ್ದರು. ನನ್ನ ತಂದೆಯ ವಿರುದ್ಧ ದ್ವೇಷ ಹರಡುತ್ತಿರುವ ನಿಮಗೆ ನಿಮ್ಮ ಶ್ರೀರಾಮ ಪ್ರಭು ಕ್ಷಮಿಸಲಿ ಎಂದು ಕಿಡಿ ಕಾರಿದ್ದರು.
ಈಗ ''ಧುರಂಧರ್ 2'' ಬಿಡುಗಡೆಯಾದ ಹಿನ್ನೆಲೆ ಅನಿಲ್ ಕಪೂರ್ ಮತ್ತು ದಾವೂದ್ ಇಬ್ರಾಹಿಂ ಫೋಟೊ ಮತ್ತೆ ವೈರಲ್ ಆಗಿದೆ. ಚರ್ಚೆಗೆ ಗ್ರಾಸವಾಗಿದೆ. ಅಂದ್ಹಾಗೇ ''ಧುರಂಧರ್-2'' ಚಿತ್ರದ ಆಫರ್ ನ ಅನಿಲ್ ಕಪೂರ್ ಅವರಿಗೆ ಆದಿತ್ಯ ಧರ್ ನೀಡಿದ್ದರು. ಆದರೆ ಅನಿಲ್ ಕಪೂರ್ ಈ ಅವಕಾಶವನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವನ್ನು ಕೂಡ ಹೇಳಿದ್ದರು.
''ಇಂಡಿಯಾ ಟುಡೇ'' ನಡೆಸಿದ ಕಾರ್ಯಕ್ರಮದಲ್ಲಿ ಈ ''ಧುರಂಧರ್ 2'' ಚಿತ್ರದ ಕುರಿತು ಪ್ರಶ್ನೆ ಎದುರಾದಾಗ ಪ್ರತಿಕ್ರಿಯೆ ನೀಡಿದ್ದ ಅನಿಲ್ ಕಪೂರ್, ಆದಿತ್ಯ ಧರ್ ನನ್ನನ್ನೂ ಸಂಪರ್ಕಿಸಿದ್ದು ನಿಜಾ ಎಂದು ಹೇಳಿದ್ದರು.
''ಧುರಂಧರ್ 2'' ಚಿತ್ರದಲ್ಲಿ ನಾನೊಂದು ಅತಿಥಿ ಪಾತ್ರ ಮಾಡಬೇಕಿತ್ತು ಎಂದು ಹೇಳಿದ್ದ ಅನಿಲ್ ಕಪೂರ್ ನಾನು ಇಲ್ಲಿಯವರೆಗೆ ಬರಲು ನನ್ನ ವೃತ್ತಿಪರತೆಯೇ ಪ್ರಮುಖ ಕಾರಣ, ''ಧುರಂಧರ್ 2'' ಅವಕಾಶ ಬಂದಾಗ ನಾನು ಮತ್ತೊಬ್ಬ ನಿರ್ಮಾಪಕರಿಗೆ ನನ್ನ ಕಾಲ್ ಶೀಟ್ ನೀಡಿದ್ದೆ, ಇನ್ನೂ ನನಗೆ ಮಾತು ಮುಖ್ಯ, ಹೀಗಾಗಿ ಆ ನಿರ್ಮಾಪಕರಿಗೆ ನನ್ನಿಂದ ತೊಂದರೆಯಾಗುವುದು ನನಗೆ ಇಷ್ಟ ಇರಲಿಲ್ಲ, ''ಧುರಂಧರ್ 2'' ಚಿತ್ರದ ಅವಕಾಶ ನಿರಾಕರಿಸಲು ಇದೇ ಪ್ರಮುಖ ಕಾರಣವೆಂದು ಹೇಳಿದ್ದರು.
ಆದರೆ ಅನಿಲ್ ಕಪೂರ್ ಅವರ ಈ ಮಾತನ್ನು ನಂಬದ ಹಲವರು ಸದ್ಯ ಅನಿಲ್ ಕಪೂರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹಳೆಯ ಗೆಳೆಯ ದಾವೂದ್ ಇಬ್ರಾಹಿಂಗೆ ನೋವಾಗುತ್ತೆ ಎನ್ನುವ ಕಾರಣಕ್ಕೆ ಅನಿಲ್ ಕಪೂರ್ ''ಧುರಂಧರ್ 2'' ಚಿತ್ರದಿಂದ ಹಿಂದೆ ಸರಿದರು ಎಂಬ ವಾದ ಮಾಡುತ್ತಿದ್ದಾರೆ.
ಇದೆಲ್ಲದರ ಪ್ರತಿಫಲವಾಗಿ ದಾವೂದ್ ಇಬ್ರಾಹಿಂ ಮತ್ತು ಅನಿಲ್ ಕಪೂರ್ ಅವರ ಎರಡೂವರೆ ದಶಕದ ಹಿಂದಿನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ. ಅನಿಲ್ ಕಪೂರ್ ನನ್ನ ಹತ್ರ ಟೈಮ್ ಇರಲಿಲ್ಲ ಎಂದು ಹೇಳಿದರೂ, ಒಂದು ವರ್ಗ ಮಾತ್ರ ಇದಕ್ಕೆಲ್ಲ ದಾವೂದ್ ಇಬ್ರಾಹಿಂ ಮೇಲಿನ 'ಹಳೇ ಪ್ರೀತಿ' ಕಾರಣ ಎಂದು ಕನ್ನಡದ ''ಪಲ್ಲವಿ ಅನುಪಲ್ಲವಿ'' ನಟ ಅನಿಲ್ ಕಪೂರ್ ಅವರ ಕಾಲೆಳೆಯುತ್ತಿದೆ.


Click it and Unblock the Notifications











