ಕದ್ದು ಫೋಟೊ ತೆಗೆದಿದ್ದಕ್ಕೆ ಆಲಿಯಾ ಗರಂ: ನಟಿಯ ಬೆಂಬಲಕ್ಕೆ ನಿಂತ ಜಾಹ್ನವಿ ಕಪೂರ್, ಅನುಷ್ಕಾ ಶರ್ಮಾ
ಬಾಲಿವುಡ್ ಸೆಲೆಬ್ರೆಟಿಗಳಿಗೂ ಪಾಪರಾಜಿಗಳಿಗೂ ಬಿಡಲಾರದ ನಂಟು. ಬಾಲಿವುಡ್ ತಾರೆಯರು ಅದೆಲ್ಲಿಗೇ ಹೋದರೂ, ಅಲ್ಲಿ ಪಾಪರಾಜಿಗಳು ಪ್ರತ್ಯಕ್ಷ ಆಗಿಬಿಡುತ್ತಾರೆ. ಏರ್‌ಪೋರ್ಟ್, ಜಿಮ್, ಶೂಟಿಂಗ್‌ಸ್ಟಾಟ್, ರೆಸ್ಟೊರೆಂಟ್ ಎಲ್ಲಿಗೆ ಹೋದರೂ ಪಾಪರಾಜಿಗಳು ಪ್ರತ್ಯಕ್ಷ ಆಗಿಬಿಡುತ್ತಾರೆ.
ಇದೇ ಕೆಲವೊಮ್ಮೆ ಸೆಲೆಬ್ರೆಟಿಗಳಿಗೆ ಇರಿಸು-ಮುರಿಸು ಮಾಡಿದ್ದೂ ಇದೆ. ಅದೆಷ್ಟೋ ಬಾರಿ ಬಾಲಿವುಡ್ ತಾರೆಯರು ಪಾಪರಾಜಿಗಳ ವಿರುದ್ಧ ತಿರುಗಿಬಿದ್ದಿದ್ದೂ ಇದೆ. ಈಗ ಆಲಿಯಾ ಭಟ್ ಕೂಡ ಖಾಸಗಿ ತನದ ಅತಿಕ್ರಮಣ ಆಗಿದೆ ಅಂತ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದು, ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆನೇ ಈಗ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಆಲಿಯಾ ಭಟ್ ಬೆಂಬಲಕ್ಕೆ ಅನುಷ್ಕಾ ಶರ್ಮಾ, ಜಾಹ್ನವಿ ಕಪೂರ್, ಅರ್ಜುನ್ ಕಪೂರ್, ಕರಣ್ ಜೋಹರ್ ಸೇರಿದಂತೆ ಇನ್ನೂ ಹಲವು ಸೆಲೆಬ್ರೆಟಿಗಳು ಬೆಂಬಲ ಸೂಚಿಸಿದ್ದು, ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆಲಿಯಾ ಭಟ್ ಹೀಗೆ ಗರಂ ಆಗಿದ್ದೇಕೆ? ಬಾಲಿವುಡ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದೇಕೆ? ಇಲ್ಲಿದೆ ರಿಪೋರ್ಟ್.

'ಖಾಸಗಿತನದ ಆಕ್ರಮಣ' ಆಲಿಯಾ ಭಟ್ ಆಕ್ರೋಶ
ಪಾಪರಾಜಿಗಳು ವಿರುದ್ಧ ಆಲಿಯಾ ಭಟ್ ಕಿಡಿಕಾರಿದ್ದಕ್ಕೆ ಕಾರಣವಿದೆ. ಆಲಿಯಾ ಭಟ್ ತಮ್ಮ ಮನೆಯ ಕಿಟಕಿ ಪಕ್ಕದಲ್ಲಿ ಕೂತಿದ್ದರು. ಈ ವೇಳೆ ಪಕ್ಕದ ಮನೆಯ ಟೆರೇಸ್ ಏರಿದ ಪಾಪರಾಜಿಗಳು ಅವರ ಫೋಟೊವನ್ನು ಕ್ಲಿಕ್ಕಿಸಿದ್ದಾರೆ. ಆ ಪೋಟೊಗಳು ಮಾಧ್ಯಮಗಳಲ್ಲಿ ಪಬ್ಲಿಶ್ ಆಗಿದೆ. ಇದನ್ನು ನೋಡುತ್ತಿದ್ದಂತೆ ಆಲಿಯಾ ಭಟ್ ಆ ಫೋಟೊವನ್ನು ಮುಂದಿಟ್ಟು, "ಖಾಸಗಿತನದ ಆಕ್ರಮಣ ಆಗಿದೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಬಾಲಿವುಡ್ ತಾರೆಯರೂ ಕೂಡ ಬೆಂಬಲ ಸೂಚಿಸಿದ್ದಾರೆ.

ಆಲಿಯಾ ಭಟ್ ಹೇಳಿದ್ದೇನು?
" ನೀವೇನು ತಮಾಷೆ ಮಾಡುತ್ತಿದ್ದೀರಾ? ನಾನು ಮಧ್ಯಮದ ವೇಳೆ ನನ್ನ ಮನೆಯ ಲಿವಿಂಗ್ ರೂಮ್‌ನಲ್ಲಿ ಆರಾಮಾಗಿ ಕೂತಿದ್ದೆ. ಆಗ ನನಗೆ ಯಾರೋ ನನ್ನನ್ನು ನೋಡುತ್ತಿದ್ದಾರೆ ಎಂದೆನಿಸಿತ್ತು. ತಕ್ಷಣವೇ ಆಚೆ ನೋಡಿದಾಗ, ಪಕ್ಕದ ಟೆರೇಸಿನ ಮೇಲೆ ಇಬ್ಬರು ವ್ಯಕ್ತಿ ನನ್ನ ಕಡೆ ಕ್ಯಾಮೆರಾ ಹಿಡಿದು ನಿಂತಿದ್ದರು. ಇದ್ಯಾವ ಪ್ರಪಂಚ, ಇದಕ್ಕೆಲ್ಲಾ ಇಲ್ಲಿ ಅನುಮತಿ ಇದೆಯೇ? ಇದು ಒಟ್ಟಾರೆಯಾಗಿ ಇನ್ನೊಬ್ಬರ ಖಾಸಗಿತನದ ಆಕ್ರಮಣ ಮಾಡಿದಂತೆ. ನೀವು ದಾಟ ಬಾರದಂತಹ ಒಂದು ಲೈನ್ ಇದೆ. ಇತ್ತು ಆ ಎಲ್ಲಾ ಲೈನ್ ಕ್ರಾಸ್ ಮಾಡಿದ್ದೀರ?" ಎಂದು ಬರೆದು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.

ಆಲಿಯಾ ಬೆಂಬಲಕ್ಕೆ ಅನುಷ್ಕಾ, ಜಾಹ್ನವಿ
ಆಲಿಯಾ ಭಟ್ 'ಖಾಸಗಿತನದ ಆಕ್ರಮಣ' ಎಂದಿದ್ದಕ್ಕೆ ಬಾಲಿವುಡ್ ತಾರೆಯರು ಬೆಂಬಲ ಸೂಚಿಸಿದ್ದಾರೆ. ಅನುಷ್ಕಾ ಶರ್ಮಾ, ಜಾಹ್ನವಿ ಕಪೂರ್,ಅರ್ಜುನ್ ಕಪೂರ್,ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ತಾರೆಯರು ಕೂಡ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಪುತ್ರಿ ವಮಿಕಾರನ್ನು ಟಾರ್ಗೆಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ಅರ್ಜುನ್ ಕಪೂರ್ "ಇದು ನಾಚಿಕೆಗೇಡಿನ ಸಂಗತಿ" ಎಂದಿದ್ದಾರೆ. " ನಾನು ಎಷ್ಟು ಬಾರಿ ಕೇಳಿಕೊಂಡರೂ ಜಿಮ್ ಒಳಗಿದ್ದ ನನ್ನ ಫೋಟೊವನ್ನು ಪದೇ ಪದೆ ತೆಗೆದಿದ್ದಾರೆ." ಎಂದು ಜಾಹ್ನವಿ ಕಪೂರ್ ಕೂಡ ಕಿಡಿಕಾರಿದ್ದಾರೆ.

ಪಾಪರಾಜಿಗಳ ವಿರುದ್ಧ ಕಿಡಿಕಾರಿದ್ದು ಸರಿಯೇ?
ಪಾಪರಾಜಿಗಳಿಗೆ ಸೆಲೆಬ್ರೆಟಿಗಳು ಬೇಕು. ಸೆಲೆಬ್ರೆಟಿಗಳಿಗೆ ಪಾಪರಾಜಿಗಳು ಬೇಕು. ತಾವು ಹೋದಲ್ಲೆಲ್ಲಾ ಬಂದು ಫೋಟೊ ತೆಗೆಯಲಿ ಅಂತ ಒಂದು ಕಾಲದಲ್ಲಿ ಬಯಸಿದ್ದು ಇದೇ ಸೆಲೆಬ್ರೆಟಿಗಳು. ಅದೇ ಈಗ ಅವರಿಗೆ ಮುಳುವಾಗಿದೆ. ಬಾಲಿವುಡ್ ಪಾಪರಾಜಿಗಳು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸೆಲೆಬ್ರೆಟಿಗಳ ನಿಂತ್ರೂ, ಕೂತ್ರೂ ಪೋಟೊ ಕ್ಲಿಕ್ಕಿಸುತ್ತಿದ್ದಾರೆ. ಇದು ಈಗ ಅವರ ಖಾಸಗಿತನಕ್ಕೆ ಧಕ್ಕೆ ತಂದಂತಾಗಿದೆ.


Click it and Unblock the Notifications











