ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು; ಜನರಿಗೆ ಬೈದು ಪೋಸ್ಟ್ ಮಾಡಿದ್ರಾ ಸೋನು ನಿಗಂ"
2024ರ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಿಸಲ್ಟ್ ಹೊರಬೀಳುತ್ತಿದ್ದಂತೆ ಸೆಲೆಬ್ರಿಟಿಗಳು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ತಮ್ಮ ನೆಚ್ಚಿನ ಪಕ್ಷಗಳ ಪರವಾಗಿ, ಕೆಲವರು ವಿರೋಧವಾಗಿ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲೊಂದು ಸೋನು ನಿಗಂ ಅವರ ಎಕ್ಸ್ ಪೋಸ್ಟ್ ಕೂಡ ಒಂದು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಕೂಡ ಬಿಜೆಪಿ ಅಭೂತಪೂರ್ವಕವಾಗಿ ಗೆದ್ದು ಬೀಗುತ್ತೆ ಅಂದುಕೊಂಡವರಿಗೆ ನಿರಾಸೆ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಉತ್ತರ ಪ್ರದೇಶದಲ್ಲಿ ಭರ್ಜರಿ ಜಯ ಗಳಿಸಬಹುದೆಂದು ನಿರೀಕ್ಷೆ ಮಾಡಿದವರಿಗೆ ಉಲ್ಟಾ ರಿಸಲ್ಟ್ ಬಂದು ಶಾಕ್ ಆಗಿದೆ. ಅದರಲ್ಲೊಂದು ಅಯೋಧ್ಯೆ ಕೂಡ ಹೌದು.

ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಿತ್ತು. ಹೀಗಾಗಿ ಅಯೋಧ್ಯೆಯಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಅಯೋಧ್ಯೆಯ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋಲುಂಡಿದ್ದಾರೆ. ಈ ಬಗ್ಗೆ ಸೋನು ನಿಗಂ ಮಾಡಿದ ಎಕ್ಸ್ ಪೋಸ್ಟ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಅಯೋಧ್ಯೆ ಇರುವ ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಕ್ಕೆ ಖಂಡಿಸಿ ಸೋನು ನಿಗಂ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಕ್ಕೆ ಸೋನು ನಿಗಂ ಅಯೋಧ್ಯೆ ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಿದ್ದರೆ, ಈ ಪೋಸ್ಟ್‌ನಲ್ಲಿ ಅಂತಹದ್ದೇನಿದೆ? ತಿಳಿಯಲು ಮುಂದೆ ಓದಿ..
"ಯಾವ ಸರ್ಕಾರ ಅಯೋಧ್ಯೆಯನ್ನು ಮಿಂಚುವಂತೆ ಮಾಡಿತ್ತು. ಹೊಸ ಏರ್‌ಪೋರ್ಟ್ ಕೊಟ್ಟಿತ್ತು. ರೈಲ್ವೆ ಸ್ಟೇಷನ್ ನಿರ್ಮಾಣ ಮಾಡಿತ್ತು, 500 ವರ್ಷಗಳ ಬಳಿಕ ರಾಮ ಮಂದಿರವನ್ನು ನಿರ್ಮಾಣ ಮಾಡಿತ್ತು. ಇಡೀ ಅಯೋಧ್ಯೆಯನ್ನು ಟೆಂಪಲ್ ಎಕಾನಮಿಯನ್ನಾಗಿ ಮಾಡಿತ್ತು. ಅದೇ ಪಕ್ಷ ಈಗ ಅಯೋಧ್ಯೆಯಲ್ಲಿ ಸೋಲಬೇಕಾಗಿದೆ. ಅಯೋಧ್ಯೆಯಲ್ಲಿ ವಾಸಿಸುವವರೇ ನಿಮಗೆ ನಾಚಿಕೆ ಆಗಬೇಕು" ಎಂದು ಎಕ್ಸ್ ಖಾತೆಯಲ್ಲಿ ಬರೆಯಲಾಗುತ್ತು.
ಸೋನು ನಿಗಂ ಹೆಸರಿನಲ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಆಗುತ್ತಿದ್ದಂತೆ ನೆಟ್ಟಿಗರು ಗಾಯಕನಿಗೆ ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಯೋಧ್ಯೆಯ ಜನರನ್ನು ಬೈದಿದ್ದಕ್ಕೆ ಸೋನು ನಿಗಂಗೆ ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಈ ಟ್ವೀಟ್‌ನಲ್ಲೊಂದು ಟ್ವಿಸ್ಟ್ ಇದೆ.
ಅದೇನಂದರೆ, ಈ ಟ್ವೀಟ್ ಅನ್ನು ಬಹುಭಾಷಾ ಗಾಯಕ ಸೋನು ನಿಗಂ ಖಾತೆಯಿಂದ ಮಾಡಿದ್ದಲ್ಲ. ಹಾಗಂತ ಇದು ನಕಲಿ ಖಾತೆನೂ ಅಲ್ಲ. ಇದು ಸೋನು ನಿಗಂ ಹೆಸರಿನಲ್ಲಿರುವ ಸೋನು ನಿಗಂ ಸಿಂಗ್ ಎನ್ನುವವರ ಎಕ್ಸ್ ಖಾತೆ. ಈ ಖಾತೆಗೆ ಬ್ಲ್ಯೂ ಟಿಕ್ ಕೂಡ ಇದೆ. ಹೀಗಾಗಿ ಈ ಪೋಸ್ಟ್ ಅನ್ನು ಗಾಯಕ ಸೋನು ನಿಗಂ ಅವರೇ ಮಾಡಿದ್ದೆ ಅಂತ ನೆಟ್ಟಿಗರು ತಪ್ಪಾಗಿ ಭಾವಿಸಿದ್ದರು. ಹೀಗಾಗಿ ನೆಟ್ಟಿಗರು ಗರಂ ಆಗಿದ್ದರು.
ಅಸಲಿಗೆ ಈ ಸೋನಿ ನಿಗಂ ಸಿಂಗ್ ಅನ್ನೋರು ಬಿಹಾರದ ನಿವಾಸಿ. ವೃತ್ತಿಯಲ್ಲಿ ಇವರು ವಕೀಲರಾಗಿದ್ದಾರೆ. ಅವರು ತಮ್ಮ ಪ್ರೊಫೈಲ್‌ನಲ್ಲಿ ಕ್ರಿಮಿನಲ್ ಲಾಯರ್, ಬಿಹಾರ, ಭಾರತ ಎಂದು ಹೇಳಿಕೊಂಡಿದ್ದಾರೆ. ಒಟ್ನಲ್ಲಿ ಬೇರೊಬ್ಬ ಸೋನು ನಿಗಂ ಮಾಡಿದ ಪೋಸ್ಟ್‌ಗೆ ಗಾಯಕನನ್ನು ಎಳೆದು ತರಲಾಗಿತ್ತು.


Click it and Unblock the Notifications











