ಬಹು ವರ್ಷಗಳ ಬಳಿಕ ಸಿಕ್ಕ ಗೆಲುವು: ಕ್ಯಾಮೆರಾಗಳ ಮುಂದೆಯೇ ಕಣ್ಣೀರು ಹಾಕಿದ ಖ್ಯಾತ ನಟ
ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಅನಿಮಲ್ ವರ್ಷದ ಅತ್ಯಂತ ದೊಡ್ಡ ಹಿಟ್ ಚಿತ್ರವಾಗುವ ರೇಸ್‌ನಲ್ಲಿದೆ. ಸಿನಿಮಾದಲ್ಲಿ ನಟ ಬಾಬಿ ಡಿಯೋಲ್ ಅವರ ನಟನೆಗೆ ಹೆಚ್ಚು ಪ್ರಶಂಸೆ ವ್ಯಕ್ತವಾಗುತ್ತಿದೆ. ಹಲವು ವರ್ಷಗಳ ಬಳಿಕ ಹಿರಿತೆರೆಯಲ್ಲಿ ಅವರನ್ನು ಜನ ಮೆಚ್ಚಿಕೊಳ್ಳುತ್ತಿದ್ದು ನಟ ಭಾವುಕರಾಗಿದ್ದಾರೆ.
ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಹಿಂದಿ ಚಿತ್ರ 'ಅನಿಮಲ್'. ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಮಲ್ ಟ್ರೈಲರ್‌ಗೆ ಬಂದಿದ್ದ ಅಭೂತಪೂರ್ವ ಪ್ರತಿಕ್ರಿಯೆ ಸಿನಿಮಾಗೂ ಬರುತ್ತಿದ್ದು, ಈಗಾಗಲೇ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ.

ಕ್ಯಾಮೆರಾಗಳ ಮುಂದೆ ಭಾವುಕರಾದ ಬಾಬಿ ಡಿಯೋಲ್!
ನಟ ಬಾಬಿ ಡಿಯೋಲ್ 'ಅನಿಮಲ್' ಸಿನಿಮಾದಲ್ಲಿ ಸಕತ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಖಡಕ್ ಲುಕ್, ಸಿನಿಮಾಗಾಗಿ ದೇಹವನ್ನು ದಂಡಿಸಿರುವ ರೀತಿಗೆ ಜನ ಮರುಳಾಗಿದ್ದಾರೆ. ಹೀಗಾಗಿ ಫ್ಯಾನ್ಸ್ ಪ್ರಶಂಸೆಗಳ ಸುರಿಮಳೆ ಸುರಿಸುತ್ತಿದ್ದಾರೆ. ತಾವು ಪಡೆಯುತ್ತಿರುವ ಭಾರೀ ಪ್ರತಿಕ್ರಿಯೆಯ ಬಗ್ಗೆ ನಟ ಮುಂಬೈನಲ್ಲಿ ಮಾತನಾಡಿದ್ದಾರೆ.
ಅನಿಮಲ್ ಸಿನಿಮಾದ ಸ್ಕ್ರೀನಿಂಗ್ ಬಳಿಕ ಕ್ಯಾಮೆರಾಗಳಿಗೆ ಫೋಸ್ ನೀಡುವಾಗ ಅಭಿನಂದನಾ ಮಾತುಗಳ ಸುರಿಮಳೆಗೈದ ಪಾಪರಾಜಿಗಳಿಗೆ ಧನ್ಯವಾದ ಹೇಳಿದ ನಂತರ ಬಾಬಿ ಡಿಯೋಲ್ ಭಾವುಕರಾಗಿದ್ದಾರೆ. "ತುಂಬಾ ಧನ್ಯವಾದಗಳು. ದೇವರು ನಿಜವಾಗಿಯೂ ದಯೆ ತೋರಿದ್ದಾನೆ. ನಮ್ಮ ಚಿತ್ರ ಪಡೆಯುತ್ತಿರುವ ಪ್ರೀತಿ ನನಗೆ ಕನಸಿನಂತೆ ಭಾಸವಾಗುತ್ತಿದೆ" ಎಂದು ಹೇಳಿದ್ದಾರೆ.
ಇದಾದ ನಂತರ ಸಂತೋಷದಲ್ಲಿ ಆನಂದಭಾಷ್ಪ ಸುರಿಸಿದ್ದಾರೆ. ತಕ್ಷಣ ಅವರ ಸಿಬ್ಬಂದಿ ಮತ್ತು ತಂಡವು ಬಾಬಿ ಡಿಯೋಲ್ ಅವರನ್ನು ಸಾಂತ್ವನಗೊಳಿಸಿದೆ. ಬಾಬಿ ಡಿಯೋಲ್ ಕಾರಿಗೆ ಹತ್ತುವ ಮೊದಲು ಟಿಶ್ಯೂ ಪೇಪರ್‌ನಿಂದ ಕಣ್ಣೀರು ಒರೆಸುವುದನ್ನು ಕಾಣಬಹುದು. ಈ ವೀಡಿಯೊ ವೈರಲ್ ಆಗುತ್ತಿದೆ.
ಬಾಬಿ ಡಿಯೋಲ್ ಅಭಿನಯದ ಬಗ್ಗೆ ಫ್ಯಾನ್ಸ್ ಮಾತು
ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಕಾಮೆಂಟ್‌ಗಳಲ್ಲಿ ಡಿಯೋಲ್ ಕುಟುಂಬವನ್ನೇ ಹೊಗಳಿದ್ದಾರೆ. "ಈ ವರ್ಷ ಡಿಯೋಲ್ ಕುಟುಂಬಕ್ಕೆ ಅತ್ಯುತ್ತಮ ವರ್ಷವಾಗಿದೆ. ಧರ್ಮೇಂದ್ರ ಜಿ ಅವರ ಸಿನಿಮಾ ರಿಲೀಸ್ ಆಗಿದೆ. ಸನ್ನಿ ಡಿಯೋಲ್ ಅವರ ಗದರ್ 2 ಸೂಪರ್ ಹಿಟ್ ಆಗಿದೆ, ಕರಣ್ ಮದುವೆ, ಸನ್ನಿ ಕಿರಿಯ ಮಗನ ಮೊದಲ ಸಿನಿಮಾ ರಿಲೀಸ್... ಬಾಬಿ ಅನಿಮಲ್ ಸಿನಿಮಾ.. ಇದರರ್ಥ ಇಡೀ ಕುಟುಂಬ ಮತ್ತಷ್ಟು ಸಾಧನೆ ಮಾಡಿದೆ... ಎಲ್ಲರಿಗೂ ಸಂತೋಷವಾಗಿದೆ" ಎಂದು ಅಭಿಮಾನಿಯೊಬ್ಬರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, "ಇದು ಯಶಸ್ಸಿನ ಕಣ್ಣೀರು. ಅವರು ಅದಕ್ಕೆ ಅರ್ಹರು. ಅನಿಮಲ್ ಸಿನಿಮಾದಲ್ಲಿ ಅವರ ಎಂಟ್ರಿ ಒಳ್ಳೆ ವೈಬ್ರೆಷನ್ ಕ್ರಿಯೆಟ್ ಮಾಡಿತ್ತು" ಎಂದು ಹೇಳಿದ್ದಾರೆ. ಒಟ್ಟಾರೆ ನಟನ ಅಭಿನಯಕ್ಕೆ ಅಭಿಮಾನಿಗಳು, ಸಿನಿ ಪ್ರೇಮಿಗಳು ಮನಸೋತಿದ್ದಾರೆ. ಹೀಗಾಗಿ ಇದು ಬಾಬಿ ಡಿಯೋಲ್‌ಗೆ ಸಿಕ್ಕ ವರ್ಷದ ಹಿಟ್ ಗಿಫ್ಟ್ ಎನ್ನಬಹುದು.
ಅನಿಮಲ್
ರಣಬೀರ್ ಕಪೂರ್ ನಾಯಕನಾಗಿ ನಟಿಸಿರುವ 'ಅನಿಮಲ್' ಸಿನಿಮಾದಲ್ಲಿ ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದ್ದಾರೆ. ರಣಬೀರ್ ತಂದೆಯಾಗಿ ಅನಿಲ್ ಕಪೂರ್ ನಟಿಸಿದ್ದರೆ, ರಶ್ಮಿಕಾ ಮಂದಣ್ಣ ರಣಬೀರ್ ಕಪೀರ್ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಬಿಡುಗಡೆಯಾದ ಮೊದಲ ದಿನದಂದು ಎಲ್ಲಾ ಭಾಷೆಗಳಲ್ಲಿ 63.8 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನವೇ 100 ಕೋಟಿ ಗಡಿ ದಾಟಿದೆ. ಈ ಚಿತ್ರವು ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ ಮತ್ತು ಸಲ್ಮಾನ್ ಖಾನ್ ಅವರ ಟೈಗರ್ 3 ಯಿಂದಿಗೆ ಚಿತ್ರಮಂದಿರಗಳಲ್ಲಿ ಪೈಪೋಟಿ ಎದುರಿಸುತ್ತಿದೆ.


Click it and Unblock the Notifications











