ಕೋಪಕ್ಕೆ ಬ್ರೇಕ್ ಹಾಕಿದ ಪರೇಶ್ ರಾವಲ್; ಬಾಬು ರಾವ್ ಎಂಟ್ರಿ.. 'ಹೇರಾ ಪೇರಿ 3' ಶುರು
ಬಾಲಿವುಡ್‌ನಲ್ಲಿ ಬಂದ ಯಶಸ್ವಿ ಕಾಮಿಡಿ ಸಿನಿಮಾಗಳಲ್ಲಿ 'ಹೇರಾ ಫೇರಿ' ಕೂಡ ಒಂದು. ಈ ಸಿನಿಮಾಗೆ ಸಿಕ್ಕ ಯಶಸ್ಸಿನ ಬೆನ್ನು ಹತ್ತಿದ ತಂಡ ಮೂರನೇ ಸರಣಿಗೆ ಕೈ ಹಾಕಿತ್ತು. ಆದರೆ, ಮೂವರಲ್ಲಿ ಇಬ್ಬರಾದ ಪರೇಶ್ ರಾವಲ್ ಈ ಸಿನಿಮಾದಿಂದ ಹೊರ ಹೋಗುವುದಾಗಿ ಘೋಷಿಸಿದ್ದರು. ಈಗ ಮುನಿಸನ್ನು ಮರೆತು 'ಹೇರಾ ಪೇರಿ 3' ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
'ಹೇರಾ ಫೇರಿ' ಅಂದರೆ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್. ಈ ಮೂವರು ಲೆಜೆಂಡ್‌ಗಳಲ್ಲಿ ಒಬ್ಬರು ಮಿಸ್ ಆದರೂ ಅದು 'ಹೇರಾ ಫೇರಿ' ಸಿನಿಮಾ ಆಗುವುದಿಲ್ಲ ಅನ್ನೋದು ಫಿಲ್ಮ್ ಮೇಕರ್‌ಗಳಿಗಷ್ಟೇ ಅಲ್ಲ, ಸಿನಿ ಪ್ರಿಯರಿಗೂ ಕೂಡ ಗೊತ್ತು. ಆದರೆ, 'ಹೇರಾ ಫೇರಿ 3' ಅನೌನ್ಸ್ ಆದಾಗ, ಪರೇಶ್ ರಾವಲ್ ಈ ಸಿನಿಮಾದಿಂದ ಹೊರ ನಡೆದಿದ್ದರು. ಇದು 'ಹೇರಾ ಫೇರಿ' ಫ್ಯಾನ್ಸ್‌ಗೆ ನಿರಾಸೆ ಮೂಡಿಸಿತ್ತು. ಈ ಸಿನಿಮಾ ಸೆಟ್ಟೇರುತ್ತೋ? ಇಲ್ಲವೋ? ಅಂತ ಬೇಸರ ಪಟ್ಟುಕೊಂಡಿದ್ದರು. ಕೊನೆಗೆ ಪರೇಶ್ ರಾವಲ್ ಮನಸ್ಸು ಬದಲಾಯಿಸಿದ್ದಾರೆ.

ಪರೇಶ್ ರಾವಲ್ 'ಹೇರಾ ಫೇರಿ' ಮೂರನೇ ಪಾರ್ಟ್‌ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಹಾಗೇ ಶೇ.100ರಷ್ಟು ಈ ಸಿನಿಮಾ ಆಗಿಯೇ ಆಗುತ್ತೆ ಎಂದೂ ಹೇಳಿದ್ದಾರೆ. ಅಷ್ಟಕ್ಕೂ ಪರೇಶ್ ರಾವಲ್ 'ಹೇರಾ ಫೇರಿ 3'ಯಿಂದ ಹೊರ ಬಂದಿದ್ದು ಯಾಕೆ? ಅಕ್ಷಯ್ ಕುಮಾರ್ ಕಾನೂನು ಕ್ರಮ ಜರುಗಿಸಿದ್ದು ಏಕೆ? ಮತ್ತೆ ಈ ಹಾಸ್ಯ ನಟ ಸಿನಿಮಾ ಒಪ್ಪಿಕೊಂಡಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.
'ಹೇರಾ ಫೇರಿ 3' ಅನೌನ್ಸ್ ಆದ ಕೆಲವೇ ದಿನಗಳಲ್ಲಿ ಪರೇಶ್ ರಾವಲ್ ಈ ಪ್ರಾಜೆಕ್ಟ್‌ನಿಂದ ಹೊರ ಬಂದಿರುವುದಾಗಿ ಘೋಷಿಸಿದ್ದರು. ಇದಕ್ಕೆ ಕಾರಣವನ್ನು ಅಂತ ಹುಡುಕುತ್ತಿರುವಾಗಲೇ ಅಕ್ಷಯ್ ಕುಮಾರ್ ಕೇಸ್ ಹಾಕಿದ್ದರು. ₹25 ಕೋಟಿ ಪರಿಹಾರ ನೀಡುವಂತೆ ಕೇಸ್ ದಾಖಲಿಸಿದ್ದರು. ಅಲ್ಲಿಗೆ ಇದು ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಮಧ್ಯೆ ಏನೋ ಆಗಿದೆ ಅನ್ನೋದು ಗೊತ್ತಾಗಿತ್ತು. ಈ ಪ್ರಾಜೆಕ್ಟ್‌ನಿಂದ ಹೊರ ಬಂದಿದ್ದರೂ ಬಾಲಿವುಡ್‌ನ ಹಾಸ್ಯ ನಟ ಕಾರಣವನ್ನು ಮಾತ್ರ ತಿಳಿಸಿರಲಿಲ್ಲ.
ಈಗ ಮತ್ತೆ ಅಕ್ಷಯ್ ಕುಮಾರ್ ಜೊತೆ ಮುನಿಸು ಮರೆತು 'ಹೇರಾ ಫೇರಿ 3'ನಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಪ್ರೇಕ್ಷಕರ ಪ್ರೀತಿಗೆ ಗೌರವ ನೀಡಬೇಕು. ನಮ್ಮ ಕೆಲಸ ಜನರಿಗೆ ಇಷ್ಟ ಆದ ಮೇಲೆ ಹೆಚ್ಚು ಜಾಗರೂಕರಾಗಿರಬೇಕು. ಪ್ರೇಕ್ಷಕರ ಪ್ರೀತಿಯನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಕೆಲವರನ್ನು ದಾರಿಗೆ ತರಬೇಕಿತ್ತು. ಆ ಕೆಲಸವನ್ನು ಮಾಡಲಾಗಿದೆ. ನಿರ್ದೇಶಕ ಪ್ರಿಯಾದರ್ಶನ್, ಅಕ್ಷಯ್ ಕುಮಾರ್, ಸುನಿಲ್ ಎಲ್ಲರೂ ಕ್ರಿಯೆಟಿವ್ ಆಗಿದ್ದಾರೆ. ಹಲವು ವರ್ಷಗಳಿಂದ ನನಗೆ ಗೆಳೆಯರು. 'ಹೇರಾ ಪೇರಿ 3' ಸಿನಿಮಾ ಆಗುತ್ತೆ" ಎಂದು ಪರೇಶ್ ರಾವಲ್ ಹೇಳಿದ್ದಾರೆ.
ಇನ್ನು ಅಕ್ಷಯ್ ಹಾಗೂ ಪರೇಶ್ ರಾವಲ್ ಮಧ್ಯೆ ಸಂಭಾವನೆ ವಿಷಯಕ್ಕೆ ಮನ:ಸ್ತಾಪ ಇತ್ತು ಎಂದು ಹೇಳಲಾಗಿದೆ. ಪರೇಶ್ ರಾವಲ್ ಈ ಸಿನಿಮಾದಲ್ಲಿ ನಟಿಸುವುದಕ್ಕೆ ₹15 ಕೋಟಿ ಸಂಭಾವನೆಯನ್ನು ಫಿಕ್ಸ್ ಮಾಡಲಾಗಿತ್ತು. ಹೀಗಾಗಿ ಮುಂಗಡವಾಗಿ 11 ಲಕ್ಷ ರೂಪಾಯಿಯನ್ನು ಪರೇಶ್ ರಾವಲ್ ನೀಡಲಾಗಿತ್ತು. ಉಳಿದ ₹14.89 ಕೋಟಿಯನ್ನು ಸಿನಿಮಾ ಬಿಡುಗಡೆಯಾದ ಬಳಿಕ ನೀಡುವುದಾಗಿ ಅಕ್ಷಯ್ ಕುಮಾರ್ ಹೇಳಿದ್ದರು. ಅದಕ್ಕೆ ಒಪ್ಪದ ಪರೇಶ್ ರಾವಲ್ ಬೇಸರಗೊಂಡು ಬಂದಿದ್ದರು ಎಂದು ಹೇಳಲಾಗಿದೆ.
ಸಂಭಾವನೆ ವಿಷಯದಲ್ಲಿ ಇಬ್ಬರ ನಡುವೆ ಮನಸ್ತಾಪ ಎದ್ದಿದ್ದರಿಂದ ಪರೇಶ್ ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ತೀರ್ಮಾನಿಸಿದ್ದರು. ಈಗ ಇಬ್ಬರ ನಡುವೆ ಸಂಧಾನ ಏರ್ಪಟ್ಟಿದೆ ಎಂದು ಹೇಳಾಗುತ್ತಿದೆ. ಆದರೆ, ಪರೇಶ್ ರಾವಲ್ ಮತ್ತೆ ಈ ಸಿನಿಮಾಗೆ ಒಪ್ಪಿಕೊಳ್ಳುವುದಕ್ಕೆ ಏನು ಕಾರಣ ಅನ್ನೋದು ಇನ್ನೂ ಅಧಿಕೃತವಾಗಿ ರಿವೀಲ್ ಆಗಿಲ್ಲ. ಸದ್ಯ 'ಹೇರಾ ಪೇರಿ 3' ಶುರುವಾಗುತ್ತಿದೆ ಅನ್ನೋದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.


Click it and Unblock the Notifications











