ಅಭಿಮಾನಿಗಳನ್ನು ಕಂಡ ಕೂಡಲೇ ಓಡಿ ಹೋಗಿದ್ದೇಕೆ ರವೀನಾ ಟಂಡನ್? ಲಂಡನ್‌ನಲ್ಲಿ ನಡೆದಿದ್ದೇನು?
ಬಾಲಿವುಡ್ ನಟಿ ರವೀನಾ ಟಂಡನ್ ಕನ್ನಡಿಗರಿಗೆ ಅಪರಿಚಿತರೇನಲ್ಲ. ಉಪೇಂದ್ರ, ಕೆಜಿಎಫ್ ಸಿನಿಮಾಗಳ ಮೂಲಕ ಈ ನಟಿ ಇಲ್ಲೂ ಮನೆಮಾತಾಗಿದ್ದಾರೆ. ಇತ್ತೀಚೆಗೆ ರವೀನಾ ತಮ್ಮ ಎಕ್ಸ್ ಖಾತೆಯಲ್ಲಿ ಲಂಡನ್‌ನಲ್ಲಿ ನಡೆದ ಘಟನೆಯೊಂದನ್ನು ವಿವರಿಸಿ ಇಬ್ಬರು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.
ಕೆಲವು ದಿನಗಳ ಹಿಂದೆ ರವೀನಾ ಲಂಡನ್‌ನಲ್ಲಿ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದರಂತೆ. ಆಗ ಎದುರಿಗೆ ಬಂದ ಇಬ್ಬರು ಯುವಕರು ನೀವು ರವೀನಾ ಅಲ್ವಾ? ಅಂತ ಕೇಳಿದ್ದಾರೆ. ಆ ವೇಳೆ ಅವರಿಗೆ ಇಲ್ಲ ಅಂತ ಹೇಳಿ ರವೀನಾ ಎಸ್ಕೇಪ್ ಆಗಿದ್ದರು. ತನ್ನ ಅಭಿಮಾನಿಗಳ ಮುಂದೆ ಇಂತಹ ವರ್ತನೆ ತೋರಿಸಿದ್ದು ಯಾಕೆ? ಅನ್ನೋದನ್ನು ತನ್ನ ಎಕ್ಸ್ ಖಾತೆಯಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ.

"ಸಾಮಾನ್ಯವಾಗಿ ಯಾರಾದ್ರೂ ಹೀಗೆ ಕೇಳಿದ್ರೆ ನಾನು ಹೌದು ಎಂದೇ ಹೇಳುತ್ತಿದ್ದೆ. ಆದ್ರೆ ಯಾಕೋ ಇವರಿಗೆ ಇಲ್ಲ ಎಂದುಬಿಟ್ಟೆ. ತಕ್ಷಣ ಗಾಬರಿಯಾಗಿ ಅಲ್ಲಿಂದ ಬಿರಬಿರನೆ ನಡೆದು ಹೋದೆ. ಬಹುಶಃ ಅವರು ಒಂದು ಫೋಟೋ ತೆಗೆದುಕೊಳ್ಳೋಕೆ ಕೇಳಿರಬಹುದು ಅಷ್ಟೇ. ನಾನು ಯಾವಾಗಲೂ ಇಂಥದ್ದಕ್ಕೆ ಒಪ್ಪಿಕೊಳ್ಳುತ್ತೇನೆ. ಆದ್ರೆ ಕೆಲವು ತಿಂಗಳ ಹಿಂದೆ ಬಾಂದ್ರಾದಲ್ಲಿ ನಡೆದ ಘಟನೆಯ ನಾನು ಭಯಗೊಂಡಿದ್ದೇನೆ. ಜನರ ನಡುವೆ ಇದ್ದಾಗ ನಾನು ಆರಾಮಾಗಿರುತ್ತೇನೆ. ಆದ್ರೆ ಒಬ್ಬಳೇ ಇದ್ದಾಗ ಈಗಲೂ ಹೆದರಿಕೊಳ್ಳುತ್ತೇನೆ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆ ಇಬ್ಬರು ಅಭಿಮಾನಿಗಳಿಗೆ ಇದೇ ಪೋಸ್ಟ್ ಮೂಲಕ ಕ್ಷಮೆ ಕೂಡಾ ಕೇಳಿದ್ದಾರೆ ರವೀನಾ ಟಂಡನ್. "ನಾನು ಅವರಿಗೆ ಒಂದು ಫೋಟೋ ತೆಗೆದುಕೊಳ್ಳಲು ಬಿಡಬೇಕಿತ್ತು. ಬಹುಶಃ ಅವರು ಮುಗ್ಧ ಅಭಿಮಾನಿಗಳು ಮಾತ್ರವೇ ಆಗಿದ್ದರು ಎನಿಸುತ್ತದೆ. ಆದರೆ ನಾನು ಗಾಬರಿಯಾಗಿ ಬಹಳ ಬೇಗ ಅಲ್ಲಿಂದ ನಡೆದು ಹೋದೆ ನಂತರ ಅಲ್ಲಿದ್ದ ಒಬ್ಬ ಸೆಕ್ಯೂರಿಟಿ ಬಳಿ ಸಹಾಯ ಕೇಳಿದೆ. ನನ್ನ ಉದ್ದೇಶ ನಿಮ್ಮನ್ನೂ ಗಾಬರಿ ಪಡಿಸುವುದಾಗಿರಲಿಲ್ಲ. ಈ ಮೂಲಕ ನಾನು ಅವರಲ್ಲಿ ಕ್ಷಮೆ ಕೇಳುತ್ತೇನೆ" ಎಂದೂ ಬರೆದಿದ್ದಾರೆ.
"ಮುಂದೆಂದಾದರೂ ನೀವು ಭೇಟಿಯಾದರೆ, ನಾವು ಖಂಡಿತಾ ಒಂದು ಫೋಟೋ ತೆಗೆದುಕೊಳ್ಳೋಣ. ಈ ಬಾರಿ ದಯವಿಟ್ಟು ಕ್ಷಮಿಸಿ. ಎಷ್ಟೇ ನಾರ್ಮಲ್ ಆಗಿರಲು ಪ್ರಯತ್ನಿಸಿದರೂ ಕೆಲವೊಮ್ಮೆ ನಾನು ಸೋಲುತ್ತೇನೆ" ಎಂದು ರವೀನಾ ತಮ್ಮ ಮನಸ್ಸಿನ ಮಾತನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ನಡೆದ ಘಟನೆ ಏನು?
ಜೂನ್ ತಿಂಗಳಲ್ಲಿ ರವೀನಾ ಟಂಡನ್ ಮತ್ತು ಆಕೆಯ ಕಾರಿನ ಡ್ರೈವರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂವರು ಮಹಿಳೆಯರು ಗಲಾಟೆ ಮಾಡಿದ್ದರು. ರವೀನಾ ತಮ್ಮ ಕಾರಿನಲ್ಲಿ ಮುಂಬೈನ ತಮ್ಮ ಫ್ಲಾಟಿನ ಒಳಗೆ ಹೋಗುತ್ತಿದ್ದಾಗ ಅಲ್ಲಿದ್ದ ಮೂವರು ಮಹಿಳೆಯರಲ್ಲಿ ಒಬ್ಬರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಆ ಮಹಿಳೆಯರು ಆಪಾದಿಸಿದ್ದರು. ಡ್ರೈವರ್ ಮತ್ತು ಆ ಮಹಿಳೆಯರ ನಡುವೆ ಮಾತಿನ ಚಕಮಕಿ ಜೋರಾಗಿದ್ದು, ನಂತರ ರವೀನಾ ಕೂಡಾ ಕಾರಿನಿಂದ ಇಳಿದು ಬಂದು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಿದ್ದಾರೆ. ಆದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗಿ ರವೀನಾ ತಮ್ಮ ಮೇಲೆ ಹಲ್ಲೆ ಮಾಡಲು ಬಂದಿದ್ದರು ಎಂದು ಇಬ್ಬರು ಮಹಿಳೆಯರು ನೇರವಾಗಿ ಆರೋಪಿಸಿದ್ದರು.
ಆದರೆ ನಂತರ ಅಲ್ಲಿದ್ದ ಸಿಸಿ ಕ್ಯಾಮೆರಾ ನಿಜ ವಿಚಾರವನ್ನು ಬಯಲು ಮಾಡಿತ್ತು. ಆ ಮಹಿಳೆಯರು ರವೀನಾ ಟಂಡನ್ ವಾಸವಿದ್ದ ಕಟ್ಟಡದೊಳಗೆ ಅತಿಕ್ರಮಣ ಪ್ರವೇಶ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಖುದ್ದು ಪೊಲೀಸರೇ ಹೇಳಿದ್ದರು. ವಿಡಿಯೋದಲ್ಲಿ ನಟಿಯ ಕಾರು ಯಾವ ಮಹಿಳೆಗೂ ತಾಕಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿತ್ತು. ರವೀನಾ ಟಂಡನ್ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರೂ ತಿಳಿಸಿದ್ದರು.
ಒಟ್ಟಿನಲ್ಲಿ ಆ ಘಟನೆ ರವೀನಾ ಟಂಡನ್ ಮನಸ್ಸಿನ ಮೇಲೆ ಘಾಸಿ ಮಾಡಿದೆ. ಈ ಕಾರಣದಿಂದಲೇ ಲಂಡನ್‌ನಲ್ಲಿ ತಾನು ಹಾಗೆ ನಡೆದುಕೊಳ್ಳುವಂತಾಯ್ತು ಎಂದು 'ಕೆಜಿಎಫ್ 2' ನಟಿ ರವೀನಾ ಟಂಡನ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











