ಬಾಲಿವುಡ್ ಸಿನಿಮಾಗಳಿಗೆ ನಿರಂತರ ಸೋಲು: ಮರಾಠ ಮಂದಿರ್‌ನಲ್ಲಿ ಟಿಕೆಟ್ ದರ ತಗ್ಗಿಸಿದ ಮಾಲೀಕ!
ಕೋವಿಡ್ ಬಳಿಕ ಭಾರತದ ಅತೀ ಶ್ರೀಮಂತ ಚಿತ್ರರಂಗ ಬಾಲಿವುಡ್ ನೆಲಕ್ಕಚ್ಚಿದೆ. ಸೂಪರ್‌ಸ್ಟಾರ್ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಅದೆಷ್ಟೇ ಪ್ರಚಾರ ಮಾಡಿದ್ರೂ, ಅದೆಷ್ಟೇ ಗಿಮಿಕ್ ಮಾಡಿದ್ರೂ, ಸಿನಿಮಾಗಳು ಮಾತ್ರ ಗೆಲ್ಲುತ್ತಿಲ್ಲ.
ಒಂದರ ಹಿಂದೊಂದು ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುತ್ತಿವೆ. ಇದರಿಂದ ಬೇಸತ್ತ ಮುಂಬೈನ ಪ್ರತಿಷ್ಠಿತ ಚಿತ್ರಮಂದಿರ 'ಮರಾಠ ಮಂದಿರ್' ಹಾಗೂ 'ಜಿ 7' ಟಿಕೆಟ್ ದರವನ್ನು ಕಡಿತಗೊಳಿಸಲು ತೀರ್ಮಾನಿಸಿದ್ದಾರೆ.

ಮುಂಬೈ ಪ್ರತಿಷ್ಠಿತ ಥಿಯೇಟರ್‌ಗಳಲ್ಲಿ ಟಿಕೆಟ್ ಬೆಲೆ ಕಡಿತ
ಮುಂಬೈನ ಪ್ರತಿಷ್ಠಿತ ಸಿಂಗಲ್ ಸ್ಕ್ರೀನ್ ಮರಾಠ ಮಂದಿರ್ ಹಾಗೂ ಮಲ್ಟಿಪ್ಲೆಕ್ಸ್ ಜಿ 7. ಈ ಎರಡೂ ಕಡೆಗಳಲ್ಲಿ ರಿಲೀಸ್ ಆದ ಬಾಲಿವುಡ್ ಸಿನಿಮಾಗಳು ದಾಖಲೆ ಬರೆದಿವೆ. ಇದೇ ಮರಾಠ ಮಂದಿರ್‌ನಲ್ಲಿ ಶಾರುಖ್ ಖಾನ್ ಹಾಗೂ ಕಾಜೊಲ್ ನಟಿಸಿದ 'ಡಿಡಿಎಲ್‌ಜೆ' ಸುಮಾರು 27 ವರ್ಷದಿಂದ ಪ್ರದರ್ಶನ ಕಂಡಿದೆ. ಆದರೆ, ಇತ್ತೀಚೆಗೆ ಬಾಲಿವುಡ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವಲ್ಲಿ ಸೋತಿವೆ. ಇದರಿಂದ ಬೇಸತ್ತಿರೋ ಈ ಚಿತ್ರಮಂದಿರಗಳ ಮಾಲೀಕ ಮನೋಜ್ ದೇಸಾಯಿ ಟಿಕೆಟ್ ಬೆಲೆಯನ್ನು ಕಡಿತಗೊಳಿಸಲು ತೀರ್ಮಾನಿಸಿದ್ದಾರೆ.

ಈ ಥಿಯೇಟರ್‌ಗಳಲ್ಲಿ ಟಿಕೆಟ್ ಬೆಲೆ ಎಷ್ಟು?
ಕಳೆದ ದೀಪಾವಳಿ ಹಬ್ಬಕ್ಕಷ್ಟೇ ಟಿಕೆಟ್ ಬೆಲೆಯನ್ನು ಏರಿಕೆ ಮಾಡಿದ್ದರು. ಜಿ 7 ಥಿಯೇಟರ್‌ನ ಟಿಕೆಟ್ ಬೆಲೆಯನ್ನು 140 ರೂ. ಹಾಗೂ ಮರಾಠ ಮಂದಿರ್ ಚಿತ್ರಮಂದಿರದ ಟಿಕೆಟ್ ಬೆಲೆಯನ್ನು170 ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ, ಮೂರು ವಾರಗಳ ಬಳಿಕ ಇದೇ ಚಿತ್ರಮಂದಿರದ ಮಾಲೀಕ ಟಿಕೆಟ್ ಬೆಲೆಯನ್ನು 130 ರೂ. ಹಾಗೂ 150 ರೂ.ಗಳಿಗೆ ಇಳಿಕೆ ಮಾಡಿದ್ದಾರೆ. ನೆವೆಂಬರ್ 20ರಿಂದಲೇ ಈ ಬೆಲೆ ಜಾರಿಗೆ ಬರುತ್ತೆ ಎಂದು ಹೇಳಿದ್ದಾರೆ.

'ನಮ್ಮ ಬಾಲಿವುಡ್ ಸಿನಿಮಾ ಓಡುತ್ತಿಲ್ಲ'
" ಈ ವಿಷಯವನ್ನುಹೇಳಲು ನನಗೆ ಬೇಸರವಾಗುತ್ತಿದೆ. ಬಾಲಿವುಡ್ ಸಿನಿಮಾಗಳು ಓಡುತ್ತಿಲ್ಲ. ದಕ್ಷಿಣ ಭಾರತದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಬ್ಯುಸಿನೆಸ್ ಮಾಡುತ್ತಿವೆ. RRR, ಪುಷ್ಪ, ಕೆಜಿಎಫ್, ಇತ್ತೀಚೆಗೆ ಕಾಂತಾರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಬ್ಯುಸಿನೆಸ್ ಮಾಡಿದೆ. ಪ್ರಕಾಶ್ ಮೆಹ್ರಾ, ಯಶ್ ಚೋಪ್ರಾ, ಮನ್‌ಮೋನ್ ದೇಸಾಯಿ ಸೇರಿದಂತೆ ಎಲ್ಲರೂ ಒಳ್ಳೆ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದರು. ಈಗ ಅಂತಹ ಒಂದೇ ಒಂದು ಸಿನಿಮಾ ಬರುತ್ತಿಲ್ಲ. ಈ ಕಾರಣಕ್ಕೆ ಟಿಕೆಟ್ ಬೆಲೆಯನ್ನು ಕಡಿತಗೊಳಿಸಿದ್ದೇವೆ." ಎಂದು ಮನೋಜ್ ದೇಸಾಯಿ ಹೇಳಿದ್ದಾರೆ.

ಹೊಸ ಭರವಸೆ ನೀಡಿದ 'ಊಂಚಾಯಿ'
ಅಮಿತಾಬ್ ಬಚ್ಚನ್, ಅನುಪಮ್ ಖೇರ್, ಬೊಮನ್ ಇರಾನಿ ನಟಿಸಿದ 'ಊಂಚಾಯಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಬ್ಯುಸಿನೆಸ್ ಮಾಡುತ್ತಿದೆ. ಆದರೆ, ಇದಕ್ಕೂ ಮುನ್ನ ತೆರೆಕಂಡ ರಾಮ್ ಸೇತು, ಥ್ಯಾಂಕ್ ಗಾಡ್, ಲಾಲ್ ಸಿಂಗ್ ಚಡ್ಡ, ರಕ್ಷಾ ಬಂಧನ್, ವಿಕ್ರಂ ವೇದ, ಹೀರೊಪಂತಿ 2 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಹೀಗಾಗಿ ಥಿಯೇಟರ್ ಮಾಲೀಕರಿಗೆ ಬಾಲಿವುಡ್ ಸಿನಿಮಾಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಹೀಗಾಗಿ ಟಿಕೆಟ್ ಬೆಲೆಯನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ.


Click it and Unblock the Notifications











