ಹಾಲಿವುಡ್ ನೋಡಿ ಕಲಿಬೇಕು ಎಂದ ಅಕ್ಷಯ್‌ಗೆ 'ಕಾಂತಾರ', 'ಕೆಜಿಎಫ್ 2' ನೋಡಿ ಎಂದ ಫ್ಯಾನ್ಸ್!
ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. 'ಹೇರಾ ಪೇರಿ 3' ಸಿನಿಮಾದಿಂದ ಹೊರ ನಡೆದಿದ್ದು ಸಿನಿಮಾ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಮಧ್ಯೆ ಸಾಲು ಸಾಲು ಸೋಲು ಕಾಣುವ ಮೂಲಕ ನಿರಾಸೆಯನ್ನು ಮೂಡಿಸಿದ್ದಾರೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಬಾಲಿವುಡ್ ಸಿನಿಮಾಗಳ ಸೋಲಿನ ಬಗ್ಗೆ ಓಪನ್ ಆಗಿ ಮಾತಾಡಿದ್ದರು. "ಬಾಲಿವುಡ್ ಇಂಡಸ್ಟ್ರಿ ಹಾಲಿವುಡ್ ಸಿನಿಮಾ ನೋಡಿ ಕಲಿಯಬೇಕು" ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಅಭಿಮಾನಿಗಳು ದಕ್ಷಿಣ ಭಾರತ ಸಿನಿಮಾಗಳನ್ನು ನೋಡಿ ಎಂದು ಸಲಹೆ ನೀಡಿದ್ದಾರೆ.
ವರ್ಷಕ್ಕೆ ನಾಲ್ಕೈದು ಸಿನಿಮಾದಲ್ಲಿ ನಟಿಸುವ ಅಕ್ಷಯ್ ಕುಮಾರ್ ಕೂಡ ಸೋಲಿಗೆ ಸಿಲುಕಿದ್ದಾರೆ. ಇವರ ಸಿನಿಮಾಗಳು ಕೂಡ ಒಂದರ ಹಿಂದೊಂದು ಸೋಲುಂಡಿವೆ. ಈ ಮಧ್ಯೆ ಹಾಲಿವುಡ್ ಸಿನಿಮಾಗಳ ಬಗ್ಗೆ ಮಾತಾಡಿದ್ದು ಸಿನಿಪ್ರಿಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

'ಹಾಲಿವುಡ್ ಸಿನಿಮಾ ನೋಡಿ ಕಲಿಯಬೇಕಿದೆ'
ಹಿಂದಿ ಪ್ರೇಕ್ಷಕರು ಬಾಲಿವುಡ್ ಸಿನಿಮಾಗಳ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ. ಬಾಲಿವುಡ್ ಫಿಲ್ಮ್ ಮೇಕರ್ಸ್ ತಮ್ಮ ಐಡಿಯಾಗಳನ್ನು ಹೊಸದಾಗಿ ಸೃಷ್ಟಿಸಬೇಕಿದೆ. ಮಾಸ್ ಆಡಿಯನ್ಸ್ ಅನ್ನು ರಂಜಿಸಲು ಮೆಗಾ ಸಿನಿಮಾಗಳನ್ನು ಮಾಡಬೇಕಿದೆ ಎಂದು ಹಾಲಿವುಡ್‌ನ ಮಾರ್ವೆಲ್ಸ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. " ಹಾಲಿವುಡ್ ಅನ್ನು ಒಮ್ಮೆ ನೋಡಿ. ಅವರು ಎಂತಹ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಬಂದು ಮಾರ್ವಲ್ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ." ಎಂದು ಹಾಲಿವುಡ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.

'ಆಡಿಯನ್ಸ್‌ಗೆ ಸಿನಿಮಾ ಕಥೆ ಬೇಕು'
" ಪ್ರೇಕ್ಷಕರು ಸಿನಿಮಾವನ್ನು ನೋಡಿ ಎಂಜಾಯ್ ಮಾಡಲು ಬಯಸುತ್ತಾರೆ. ಅವರಿಗೆ ಸಿನಿಮಾದಲ್ಲಿ ಕಥೆ ಹಾಗೂ ಅದ್ಬುತ ಎನಿಸುವ ಅಂಶಗಳಿರಬೇಕು. ಅವರು ಸುಮ್ಮನೆ ಹಣ ಕೊಟ್ಟು ಸಿನಿಮಾ ನೋಡಲ್ಲ. ಕೊಟ್ಟ ಹಣಕ್ಕೆ ಬೆಲೆ ಕಟ್ಟುತ್ತಾರೆ." ಎಂದು ಅಕ್ಷಯ್ ಕುಮಾರ್ ಹಾಲಿವುಡ್ ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಈ ಹೇಳಿಕೆ ನೀಡಿದ್ದರು. ಆದರೆ, ಅಭಿಮಾನಿಗಳಿಗೆ ಹಾಲಿವುಡ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದ್ದು ಹಿಡಿಸಿಲ್ಲ.

'ಕಾಂತಾರ, ಕೆಜಿಎಫ್ 2, RRR ನೋಡಿ'
ಅಕ್ಷಯ್ ಕುಮಾರ್ ಹಾಲಿವುಡ್ ಸಿನಿಮಾಗಳನ್ನು ನೋಡಿ ಬಾಲಿವುಡ್ ಮಂದಿ ಸಿನಿಮಾ ಮಾಡುವುದನ್ನು ಕಲಿಯಬೇಕಿದೆ ಅಂತ ಹೇಳಿದ್ದು ಇಷ್ಟ ಆಗಿಲ್ಲ. ಹಾಲಿವುಡ್ ಸಿನಿಮಾ ಬದಲು ದಕ್ಷಿಣ ಭಾರತದ ಪ್ರಾದೇಶಿಕ ಸಿನಿಮಾಗಳನ್ನು ನೋಡಿ ಕಲಿಯಿರಿ. ಕಾಂತಾರ, ಕೆಜಿಎಫ್ 2, RRR, 'ಕಾರ್ತಿಕೇಯ 2' ಅಂತಹ ಸಿನಿಮಾಗಳನ್ನು ನೋಡಿ ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಬಿಟ್ಟಿ ಸಲಹೆ ನೀಡಿದ್ದಾರೆ. ಈ ಸಿನಿಮಾಗಳು ಗ್ರ್ಯಾಂಡ್ ಪಬ್ಲಿಸಿಟಿ ಮಾಡಿಲ್ಲ. ಮೌತ್ ಪಬ್ಲಿಸಿಟಿನೇ ಅದ್ಭುತಗಳನ್ನು ಸೃಷ್ಟಿಸಿದೆ ಎನ್ನುತ್ತಿದ್ದಾರೆ.

ಅಕ್ಷಯ್ ಸಿನಿಮಾಗಳಿಗೆ ಸೋಲು
ಅಕ್ಷಯ್ ಕುಮಾರ್ ವರ್ಷವಿಡೀ ಸಿನಿಮಾ ಮಾಡುತ್ತಾರೆ ಅನ್ನೋದು ಗೊತ್ತೇ ಇದೆ. ವರ್ಷಕ್ಕೆ ಕಮ್ಮಿ ಅಂದರೂ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತವೆ. 2022ರಲ್ಲೂ ನಾಲ್ಕು ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆಗಿವೆ. 'ಸಾಮ್ರಾಟ್ ಪೃಥ್ವಿರಾಜ್', 'ರಕ್ಷಾ ಬಂಧನ್', 'ಬಚ್ಚನ್ ಪಾಂಡೆ' ಹಾಗೂ ಇತ್ತೀಚೆಗೆ ರಿಲೀಸ್ ಆಗಿದ್ದ 'ರಾಮ್ ಸೇತು' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ. ಈ ಹಿನ್ನೆಲೆಯಲ್ಲಿಯೇ ಹಾಲಿವುಡ್ ಸಿನಿಮಾ ಬಗ್ಗೆ ಮಾತಾಡಿ ಮತ್ತೆ ಪೇಚಿಗೆ ಸಿಲುಕಿಕೊಂಡಿದ್ದಾರೆ.


Click it and Unblock the Notifications











