ಕೇವಲ 1.4 ಲಕ್ಷಕ್ಕೆ ಬಾಲಿವುಡ್ ಲೆಜೆಂಟ್ ದಿಲೀಪ್ ಕುಮಾರ್ ಖರೀದಿಸಿದ್ದ ಮನೆ ಎಷ್ಟು ಕೋಟಿಗೆ ಸೇಲ್ ಆಯ್ತು ಗೊತ್ತೇ?
ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ತಮ್ಮ ಪತ್ನಿ ಸಾಯಿರಾ ಬಾನು ಜೊತೆ ವಾಸವಿದ್ದ ಮುಂಬೈನ ಪ್ರತಿಷ್ಟಿತ ಏರಿಯಾದಲ್ಲಿರುವ ಮೂರು ಅಂತಸ್ತಿನ ಕಟ್ಟಡ ಇದೀಗ ಮಾರಾಟವಾಗಿದೆ. ಬರೋಬ್ಬರಿ 155 ಕೋಟಿ ರೂಪಾಯಿಗೆ ಮಾರಾಟವಾದ ಈ ಬಿಲ್ಡಿಂಗ್ ತನ್ನ ಭಾರೀ ಮೊತ್ತದಿಂದ ಅನೇಕರ ಹುಬ್ಬೇರಿಸುವಂತೆ ಮಾಡಿದೆ. 2021ರಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಸಾವಿನ ನಂತರ ಅವರ ಪತ್ನಿ ನಟಿ ಸಾಯಿರಾ ಬಾನು ಇಲ್ಲಿ ವಾಸವಾಗಿದ್ದರು.
ಕಳೆದ ವರ್ಷ ಅಂದರೆ 2023ರಲ್ಲಿ ದಿಲೀಪ್ ಕುಮಾರ್ ವಾಸವಿದ್ದ ಬಂಗಲೆಯನ್ನು ಖಾಸಗಿ ಬಿಲ್ಡರ್ ಅಶರ್ ಗ್ರೂಪ್ ಗೆ ನವೀಕರಣ ಮಾಡಲು ನೀಡಲಾಗಿತ್ತು. ಮೂರು ಅಂತಸ್ತಿನ ಈ ಮನೆಯನ್ನು ಕೆಡವಿ ಅನೇಕ ಐಶಾರಾಮಿ ಅಪಾರ್ಟ್ಮೆಂಟ್ಗಳ ದೊಡ್ಡ ಕಟ್ಟಡವನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಆ ಕಟ್ಟಡದ ಕೆಳ ಅಂತಸ್ತಿನಲ್ಲಿ ದಿಲೀಪ್ ಕುಮಾರ್ ಸ್ಮರಣೆಯಲ್ಲಿ ಅವರ ಬದುಕಿನ ಕುರಿತಾದ ವಿಶಿಷ್ಟ ಮ್ಯೂಸಿಯಂ ಒಂದನ್ನು ಮಾಡಲು ನಿರ್ಧರಿಸಲಾಗಿತ್ತು.

ಮುಂಬೈನ ಪ್ರತಿಷ್ಟಿತ ಐಶಾರಾಮಿ ಏರಿಯಾ ಪಾಲಿ ಹಿಲ್ ನಲ್ಲಿ ಸೀ ಫೇಸಿಂಗ್ ಇರುವ ಈ ಮನೆ 9, 10 ಮತ್ತು 11ನೇ ಅಂತಸ್ತಿನ ತನಕ ಹರಡಿಕೊಂಡಿದೆ. ಈ ಕಟ್ಟಡವನ್ನು ರೀ ಡೆವಲಪ್ ಮಾಡುವ ಉದ್ದೇಶದಿಂದ ಬರೋಬ್ಬರಿ 155 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ಕಟ್ಟಡ ಒಟ್ಟಾರೆಯಾಗಿ 9257.21 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈಗ ಮಾರಾಟವಾದ ಬೆಲೆಯನ್ನು ಲೆಕ್ಕ ಹಾಕಿದರೆ ಒಂದು ಚದರ ಅಡಿ ಜಾಗ 1.62 ಲಕ್ಷ ರೂಪಾಯಿಗೆ ಮಾರಾಟವಾದಂತಾಗಿದೆ. ಈ ಮಾರಾಟ ವಹಿವಾಟಿಗೆ ಕೊಂಡವರು 9.30 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ 1966ರಲ್ಲಿ ನಟಿ ಸಾಯಿರಾ ಬಾನುರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರ ಕೊನೆಯುಸಿರಿನವರಗೆ ಪತ್ನಿಯ ಜೊತೆ ಇದೇ ಮನೆಯಲ್ಲಿ ವಾಸವಿದ್ದರು. ಈ ದಂಪತಿಗೆ ಮಕ್ಕಳಿಲ್ಲ. ಆದರೆ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಇವರನ್ನು ತಮ್ಮ ಸ್ವಂತ ಕುಟುಂಬದ ರೀತಿ ನಡೆಸಿಕೊಳ್ಳುತ್ತಿದ್ದರು. ಈ ದಂಪತಿ ಕೂಡಾ ಶಾರುಖ್‌ನನ್ನು ತಮ್ಮ ಮಗನಂತೆಯೇ ಕಾಣುತ್ತಿದ್ದರು. ದಿಲೀಪ್ ಕುಮಾರ್ ಅನೇಕ ಬಾರಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗೆಲ್ಲಾ ಶಾರುಖ್ ಖಾನ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಇವರ ಮನೆಗೂ ಅನೇಕ ಬಾರಿ ಭೇಟಿಯಾಗುತ್ತಿದ್ದರು.

ಈ ಮನೆಯನ್ನು ದಿಲೀಪ್ ಕುಮಾರ್ 1953ರಲ್ಲಿ ಕೇವಲ 1.4 ಲಕ್ಷ ರೂಪಾಯಿಗೆ ಕೊಂಡುಕೊಂಡಿದ್ದರಂತೆ. ಮೊಹಮ್ಮದ್ ಲತೀಫ್ ಎನ್ನುವವರಿಂದ ದಿಲೀಪ್ ಕುಮಾರ್ ಈ ಮನೆಯನ್ನು ಕೊಂಡುಕೊಂಡಿದ್ದರು. ಮೂಲತಃ ಪಾಕಿಸ್ತಾನದ ಪೇಶಾವರದವರಾದ ದಿಲೀಪ್ ಕುಮಾರ್ ತಮ್ಮ ಕುಟುಂಬದೊಂದಿಗೆ 1930ರಲ್ಲಿ ಮುಂಬೈಗೆ ವಲಸೆ ಬಂದಿದ್ದರು. ಪಾಕಿಸ್ತಾನದಲ್ಲಿರುವ ಅವರ ಕುಟುಂಬದ ಮೂಲ ಮನೆಯನ್ನು ಅಲ್ಲಿನ ಸರ್ಕಾರ ಕೂಡಾ ಪಾರಂಪರಿಕ ಕಟ್ಟಡ ಎಂದು ಘೋಷಿಸಿದ್ದು ಅದನ್ನೊಂದು ವಸ್ತು ಸಂಗ್ರಹಾಲಯವಾಗಿ ಬದಲಾಯಿಸಿದೆ.


Click it and Unblock the Notifications











