ಬಾಲಿವುಡ್‌ನ ಹಿರಿಯ ನಟ ಇಮ್ತಿಯಾಜ್ ಖಾನ್ ನಿಧನ
'ಯಾದೋಂನ್ ಕಿ ಬಾರಾತ್ ಚಿತ್ರದ ಮೂಲಕ ಹೆಸರು ಗಳಿಸಿದ್ದ ಬಾಲಿವುಡ್ ನಟ ಇಮ್ತಿಯಾಜ್ ಖಾನ್ (77) ಮುಂಬೈನಲ್ಲಿ ಭಾನುವಾರ ನಿಧನರಾದರು. ಬಾಲಿವುಡ್‌ನ ಲೆಜೆಂಡ್‌ಗಳಲ್ಲಿ ಒಬ್ಬರಾದ ಹಿರಿಯ ನಟ ಅಮ್ಜದ್ ಖಾನ್ ಅವರ ಸಹೋದರರಾಗಿದ್ದ ಇಮ್ತಿಯಾಜ್, 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.
ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನದ ಪೇಶಾವರದಲ್ಲಿ ಇಮ್ತಿಯಾಜ್ ಜನಿಸಿದ್ದರು. ಅವರ ಕುಟುಂಬ ಭಾರತದಲ್ಲಿ ಉಳಿದುಕೊಳ್ಳಲು ಬಯಸಿದ್ದರಿಂದ ಅವರು ಬಾಲಿವುಡ್ ಪ್ರವೇಶಿಸಲು ಸಾಧ್ಯವಾಯಿತು. ಇಮ್ತಿಯಾಜ್ ಖಾನ್ ಅವರ ಪತ್ನಿ ಕೃತಿಕಾ ದೇಸಾಯಿ ಕೂಡ ಸಿನಿಮಾ ಮತ್ತು ಧಾರಾವಾಹಿಗಳಿಂದ ಜನಪ್ರಿಯರಾಗಿದ್ದಾರೆ.
ಫಿರೋಜ್ ಖಾನ್ ಅವರ ಧರ್ಮಾತ್ಮ, ದಯಾವನ್, ಕೇಶ್ ರಾಮ್ಸೇ ಅವರ ದಕ್ ಬಾಂಗ್ಲಾ, ಆರ್‌ಜಿ ಠಾಕೆರ್ ನಿರ್ದೇಶನದ ಮಹಾ ಬದ್ಮಾಶ್, ಹಲ್ ಚಲ್, ಪ್ಯಾರಾ ದೋಸ್ತ್, ಬಂಟಿ ಔರ್ ಬಬ್ಲಿ, ಚೋರ್ ಪೊಲೀಸ್, ಶೇರ್ ಬಜಾರ್ ಮುಂತಾದ ಸಿನಿಮಾಗಳಲ್ಲಿ ಇಮ್ತಿಯಾಜ್ ನಟಿಸಿದ್ದರು.

ಇಮ್ತಿಯಾಜ್ ಸಹೋದರ ಅಮ್ದಜ್, ಶೋಲೆಯ ಗಬ್ಬರ್ ಪಾತ್ರದಿಂದ ಹೆಸರು ಗಳಿಸಿದ್ದರು. ಅವರ ಪತ್ನಿ ಕೃತಿಕಾ ಮೇರೆ ಅಂಗ್ನೆ ಮೇ, ಶಕ್ತಿ-ಅಸ್ತಿತ್ವ ಕೆ ಎಹ್ಸಾನ್ ಕಿ, ಉತ್ತರಣ್, ಕುಂಕುಮ್ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ದಂಪತಿಗೆ ಆಯೇಷಾ ಖಾನ್ ಎಂಬ ಮಗಳಿದ್ದಾರೆ.


Click it and Unblock the Notifications











