Adipurush Loss: ಬಾಕ್ಸಾಫೀಸ್‌ನಲ್ಲಿ 'ಆದಿಪುರುಷ್'ಗೆ ಆದ ನಷ್ಟ ಎಷ್ಟು? ಬಾಲಿವುಡ್‌ನಲ್ಲಿ ಏನಿದು ಸುದ್ದಿ?
'ಆದಿಪುರುಷ್' ಸಿನಿಮಾ ಈ ಮಟ್ಟಿಗೆ ಸದ್ದು ಮಾಡಬಹುದು ಅನ್ನೋ ಚಿಕ್ಕ ನಿರೀಕ್ಷೆನೂ ಇರಲಿಲ್ಲ. ಟಿ ಸೀರಿಸ್ ಸಂಸ್ಥೆಯ ನಿರ್ಮಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕುಸಿದಿದೆ. ಕಲೆಕ್ಷನ್ ಏನಂದ್ರೆ ಏನೂ ಇಲ್ಲ.
'ಆದಿಪುರುಷ್' ರಿಲೀಸ್ ಆದ ಕ್ಷಣದಿಂದಲೇ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಹರಿದಾಡಿದ್ದವು. ಪ್ರಭಾಸ್ ಅಂತಹ ಪ್ಯಾನ್ ಇಂಡಿಯಾ ಸ್ಟಾರ್ ಇದ್ದಿದ್ದಕ್ಕೆ ಸಿನಿಮಾ ಒಂದು ವಾರದ ಮಟ್ಟಿಗೆ ಥಿಯೇಟರ್‌ನಲ್ಲಿ ಒಂದಿಷ್ಟು ಕಲೆಕ್ಷನ್ ಮಾಡಿತ್ತು.

ಮೊದಲ ಮೂರು ದಿನ ಈ ಸಿನಿಮಾ ಕಲೆಕ್ಷನ್ ಮಾಡಿದ್ದು ಬಿಟ್ಟರೆ, ಉಳಿದ ದಿನಗಳಲ್ಲಿ ಕಲೆಕ್ಷನ್ ಅಷ್ಟಕ್ಕೆ ಅಷ್ಟೇ. ಸದ್ಯ 'ಆದಿಪುರುಷ್' ಸಿನಿಮಾದಿಂದ ನಿರ್ಮಾಪಕರು ದೊಡ್ಡ ನಷ್ಟದಲ್ಲಿದ್ದಾರೆ ಅನ್ನೋ ಮಾತು ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಹಾಗಿದ್ರೆ, ಈ ಸಿನಿಮಾದಿಂದ ನಿರ್ಮಾಪಕರು ಕಳೆದುಕೊಂಡಿದ್ದೆಷ್ಟು? ಬಾಲಿವುಡ್ ಮಂದಿ ಕೊಡ್ತಿರೋ ಲೆಕ್ಕವೇನು?
'ಆದಿಪುರುಷ್' ಬಾಕ್ಸಾಫೀಸ್ ದುರಂತ
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸಿನಿಮಾ ಅಂದ್ಮೇಲೆ ಓಪನಿಂಗ್ ಜೋರಾಗೇ ಇರುತ್ತೆ. 'ಆದಿಪುರುಷ್' ಕೂಡ ಮೊದಲ ಮೂರು ದಿನ ಉತ್ತಮ ಗಳಿಕೆಯನ್ನೇ ಮಾಡಿತ್ತು. ಆದರೆ, ಸಿನಿಮಾ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದರಿಂದ ನಾಲ್ಕನೇ ದಿನದಿಂದ ಬಾಕ್ಸಾಫೀಸ್‌ನಲ್ಲಿ ಕುಸಿತ ಕಂಡಿತ್ತು.

ಓಂ ರಾವುತ್ ನಿರ್ದೇಶಿಸಿದ ಈ ಸಿನಿಮಾ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು. ದೇಶದ ಹಲವೆಡೆ ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ಕೇಸ್ ಕೂಡ ಹಾಕಲಾಯ್ತು. ಹೀಗಾಗಿ ನಾಲ್ಕನೇ ದಿನದಿಂದ ಜನರು ಚಿತ್ರಮಂದಿರಕ್ಕೆ ಬರೋದನ್ನು ಕಡಿಮೆ ಮಾಡಿದ್ದರು. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್ಸ್ 'ಆದಿಪುರುಷ್' ಸಿನಿಮಾವನ್ನು 'ಬಾಕ್ಸಾಫೀಸ್ ದುರಂತ' ಎಂದು ಹೇಳುತ್ತಿದ್ದಾರೆ.
'ಆದಿಪುರುಷ್' ಕಲೆಕ್ಷನ್ ಎಷ್ಟು?
'ಆದಿಪುರುಷ್' ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ 407 ಕೋಟಿ ರೂ. (gross) ಎಂದು ಹೇಳಲಾಗುತ್ತಿದೆ. ಅದೇ ಭಾರತದ ಕಲೆಕ್ಷನ್ 291 ಕೋಟಿ ರೂ. ಎಂದು ಹೇಳಲಾಗುತ್ತಿದೆ. 450 ರಿಂದ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರೋ ಈ ಸಿನಿಮಾ 14ನೇ ದಿನಕ್ಕೆ 500 ಕೋಟಿ ರೂ. ದಾಟ ಬೇಕಿತ್ತು. ಆಗ ನಿರ್ಮಾಪಕರಿಗೆ ಲಾಭದ ಸಮೀಪದಲ್ಲಿ ಇರುತ್ತಿದ್ದರು.
ಇತ್ತ 14ನೇ ದಿನ 'ಆದಿಪುರುಷ್' ಕಲೆಕ್ಷನ್ ಒಂದು ಕೋಟಿಗಿಂತ ಕಡಿಮೆ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾ 90 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಈ ವಾರವಷ್ಟೇ ತೆರೆಕಂಡ 'ಸತ್ಯ ಪ್ರೇಮ್ ಕಿ ಕಥಾ' ಮೊದಲ ದಿನವೇ 9 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ 'ಆದಿಪುರುಷ್' ನೋಡುವುದಕ್ಕೆ ಜನ ಆಸಕ್ತಿ ತೋರುತ್ತಿಲ್ಲ. ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ನಿಂದ ಹೊರ ಹೋಗುವುದು ಖಚಿತ.
'ಆದಿಪುರುಷ್' ನಿರ್ಮಾಪಕರಿಗಾದ ನಷ್ಟವೆಷ್ಟು?
ಶ್ರೀರಾಮನ ಅವತಾರವೆತ್ತಿದ್ದ ಪ್ರಭಾಸ್ ಛಾಯೆ ವಿವಾದದ ಮುಂದೆ ಕೆಲಸ ಮಾಡಿಲ್ಲ. ಬಾಲಿವುಡ್ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಆದಿಪುರುಷ್' ಸಿನಿಮಾದಿಂದ ನಿರ್ಮಾಪಕರಿಗೆ ಸುಮಾರು 200 ಕೋಟಿ ರೂ. ಅಧಿಕ ನಷ್ಟ ಆಗಿದೆ. ಈ ಮೂಲಕ ನಿರ್ಮಾಪಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಕೂಡ ದೊಡ್ಡ ಬ್ಯುಸಿನೆಸ್ ಮಾಡಿರುವ ಬಗ್ಗೆ ವರದಿಯಾಗಿಲ್ಲ. ಹೀಗಾಗಿ 'ಆದಿಪುರುಷ್' ಸಿನಿಮಾದಿಂದ ಟಿ ಸೀರಿಸ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಿದೆ. 200 ಕೋಟಿ ರೂ.ಯಷ್ಟು ನಷ್ಟದಿಂದ ಮುಂದೆ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕೋ ಬಗ್ಗೆ ಸಿನಿಮಾ ಮಂದಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











