ಯಶ್ ಮತ್ತೊಂದು ಸಿನಿಮಾ 2024 ಏಪ್ರಿಲ್‌ನಲ್ಲಿ ಶುರು; ರಣ್‌ಬೀರ್, ಸಾಯಿ ಪಲ್ಲವಿನೂ ರೆಡಿ?
ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ರಾಮಾಯಣ ಸಿನಿಮಾ ಮಾಡುವುದು ಪ್ರತಿಷ್ಠೆಯಾಗಿದೆ. ಅತ್ಯಂತ ಶ್ರದ್ಧೆಯಿಂದ ಈ ಸಿನಿಮಾವನ್ನು ಮಾಡುವುದಕ್ಕೆ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ 'ಆದಿಪುರುಷ್' ಸಿನಿಮಾ ಮಾಡಿ, ಪ್ರಭಾಸ್ ಹಾಗೂ ನಿರ್ದೇಶಕ ಓಂ ರಾವತ್ ಜನರ ಟೀಕೆಗೆ ಗುರಿಯಾಗಿದ್ದರು.
ಆದ್ರೀಗ ಮತ್ತೊಬ್ಬ ಬಾಲಿವುಡ್ ನಿರ್ದೇಶಕ 'ರಾಮಾಯಣ' ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. 'ದಂಗಲ್' ಅಂತಹ ರೆಕಾರ್ಡ್ ಬ್ರೇಕಿಂಗ್ ಸಿನಿಮಾ ನಿರ್ದೇಶಿಸಿರುವ ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣ ಪಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹದ್ದೊಂದು ಸುದ್ದಿ ಬಾಲಿವುಡ್‌ನಲ್ಲಿ ಹಲವು ದಿನಗಳಿಂದ ಓಡಾಡುತ್ತಿದೆ. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪ್ರಾಜೆಕ್ಟ್ ಬಗ್ಗೆ ಇಡೀ ಭಾರತವೇ ಎದುರು ನೋಡುತ್ತಿದೆ.
ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಬಗ್ಗೆ ಸುದ್ದೇ ಇರಲಿಲ್ಲ. 'ರಾಮಾಯಣ' ಸಿನಿಮಾ ಯಾವ ಹಂತದಲ್ಲಿದೆ? ಯಾವಾಗ ಶೂಟಿಂಗ್ ಶುರುವಾಗುತ್ತೆ? ಯಾರೆಲ್ಲಾ ನಟಿಸುತ್ತಾರೆ? ಅನ್ನೋ ಬಗ್ಗೆ ಇನ್ನೂ ಅಧಿಕೃತವಾಗಿ ನಿತೀಶ್ ತಿವಾರಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಆದ್ರೀಗ ರಣ್‌ಬೀರ್ ಕಪೂರ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದು, 'ರಾಮಾಯಣ' 2024ರ ಬೇಸಿಗೆಯಲ್ಲಿ ಶುರುವಾಗಲಿದೆ ಎಂದು ಟ್ವೀಟ್ (ಎಕ್ಸ್) ಮಾಡಿದ್ದಾನೆ. ಆ ಟ್ವೀಟ್‌ಗೆ ಮಹತ್ವ ಕೊಡುವುದಕ್ಕೆ ಕಾರಣವೂ ಇದೆ.

ಅಕ್ಷಯ್ ಚತುರ್ವೇದಿ ಅನ್ನೋ ವ್ಯಕ್ತಿ ತನ್ನ ಎಕ್ಸ್ ಖಾತೆಯಲ್ಲಿ 'ರಾಮಾಯಣ' ಸಿನಿಮಾ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಏರ್‌ಪೋರ್ಟ್‌ನಲ್ಲಿ ರಣ್‌ಬೀರ್ ಕಪೂರ್ ಜೊತೆ ಮಾತಿಗೆ ಅವಕಾಶ ಸಿಕ್ಕಿತ್ತು. ಆ ವೇಳೆ 'ರಾಮಾಯಣ' ಸಿನಿಮಾ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದ್ದು, ಎಲ್ಲವನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಕ್ಷಯ್ ಚತುರ್ವೇದಿ ಟ್ವೀಟ್ (ಎಕ್ಸ್) ಪ್ರಕಾರ, ರಾಮಾಯಣ ಸಿನಿಮಾ 2024ರ ಏಪ್ರಿಲ್, ಮೇ ಹೊತ್ತಿಗೆ ಆರಂಭ ಆಗಲಿದೆ ಎಂದಿದ್ದಾರೆ. "ಏರ್‌ಪೋರ್ಟ್‌ನಲ್ಲಿ ಇಮಿಗ್ರೇಷನ್ ವೇಳೆ ನಾನು, ರಣ್‌ಬೀರ್ ಕಪೂರ್ ಜೊತೆ ಸರದಿಯಲ್ಲಿ ನಿಂತಿದ್ದೆ. ಈ ವೇಳೆ ಅನಿಮಲ್ ಹಾಗೂ ಮುಂದಿನ ಕ್ರೇಜಿ ಪ್ರಾಜೆಕ್ಟ್ ಬಗ್ಗೆ ಮಾತಾಡುತ್ತಿದ್ದೆವು. ರಾಮಾಯಣ 2024 ಬೇಸಿಗೆಯಿಂದ ಶುರುವಾಗುತ್ತೆ ಎಂದು ಅವರೇ ಹೇಳಿದ್ರು" ಎಂದು ಅಕ್ಷಯ್ ಟ್ವೀಟ್ (ಎಕ್ಸ್) ಮಾಡಿದ್ದಾರೆ.
ಇದೇ ವೇಳೆ ಹೆಚ್ಚಿನದ್ದು ಏನನ್ನೂ ಹೇಳಲಾರೆ, ಸ್ಟಾರ್ ಕಾಸ್ಟ್ ಅಂತೂ ಕ್ರೇಜಿಯಾಗಿದೆ ಎಂದು ಹೇಳಿದ್ದಾರೆ. ಪಿಂಕ್ ವಿಲ್ಲಾ ವರದಿ ಪ್ರಕಾರ, 'ರಾಮಾಯಣ' ಸಿನಿಮಾದ ಬ್ಲ್ಯೂ ಪ್ರಿಂಟ್ ಈಗಾಗಲೇ ರೆಡಿಯಾಗಿದೆ. ವಿಎಫ್‌ಎಕ್ಸ್ ಅನ್ನು ಆಸ್ಕರ್ ಗೆದ್ದ ಸಂಸ್ಥೆ ಸಿದ್ಧಪಡಿಸುತ್ತಿದೆ. ಹೀಗಾಗಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಕಾಂಬಿನೇಷನ್‌ನ ಈ ಸಿನಿಮಾ ಕ್ರೇಜಿಯಾಗಿದ್ದು, ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.


Click it and Unblock the Notifications











