ವಿದ್ಯಾರ್ಥಿ ಪ್ರಾಣವನ್ನು ಬಲಿ ಪಡೆದ ಖ್ಯಾತ ನಟಿ, ಹಿಟ್ ಆಂಡ್ ರನ್ ಕೇಸ್‌ನಲ್ಲಿ ಬಂಧಿಸಿದ ಪೊಲೀಸರು
ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ. ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ.
ಇದಕ್ಕೆ ''ನಂದಿನಿ ಕಶ್ಯಪ್'' ಸದ್ಯದ ಉದಾಹರಣೆ. ಹೌದು, ನಂದಿನಿ ಕಶ್ಯಪ್.. ಅಸ್ಸಾಂ ಅಂದಗಾತಿ. ಅಸ್ಸಾಂನ ಚಿತ್ರರಂಗದಲ್ಲಿ ಹೆಸರು ಮಾಡಿರುವ ತನ್ನದೇ ಅಭಿಮಾನಿ ಬಳಗವನ್ನು ಕೂಡ ಹೊಂದಿರುವ ನಂದಿನಿ ಕಶ್ಯಪ್ ಇತ್ತೀಚೆಗೆ ''ರುದ್ರ'' ಚಿತ್ರದಲ್ಲಿ ಆಕ್ಟ್ ಮಾಡಿದ್ದರು. ಕಳೆದ ಜೂನ್ 27ರಂದು ತೆರೆಗೆ ಬಂದ ಈ ಚಿತ್ರ ಈ ವರ್ಷ ಅಸ್ಸಾಂನಲ್ಲಿ ಬಂದ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದು. ಈಗಲೂ ಕೂಡ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇಂಥಾ ನಂದಿನಿ ಕಶ್ಯಪ್ ಕಳೆದ ಜುಲೈ 25ರಂದು ಕಂಠಪೂರ್ತಿ ಕುಡಿದು ಸುಮಾರು 120 ಕೀಲೋ ಮೀಟರ್ ವೇಗದಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ. ಸಮಿಯುಲ್ ಹಕ್ ಅವರ ಪ್ರಾಣವನ್ನು ಬಲಿ ಪಡೆದಿದ್ದಾರೆ. ಆ ನಂತರ ನರಳುತ್ತಿದ್ದ ಸಮಿಯುಲ್‌ಗೆ ಯಾವುದೇ ಸಹಾಯವನ್ನು ಮಾಡದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಆದರೆ ಸಮಿಯುಲ್ ಜೊತೆ ಕೆಲಸ ಮಾಡುತ್ತಿದ್ದವರು ಇದೇ ಸಮಯದಲ್ಲಿ ನಂದಿನಿ ಕಶ್ಯಪ್ ಅವರ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ಧಾರೆ. ಈ ಸಮಯದಲ್ಲಿ ತನ್ನ ಕಹಿಲಿಪಾರ್‌ದಲ್ಲಿರುವ ಅಪಾರ್ಟ್‌ಮೆಂಟ್‌ಗೆ ತೆರಳಿದ ನಂದಿನಿ ಕಶ್ಯಪ್ ತಮ್ಮ ಕಾರನ್ನು ಮರೆ ಮಾಚುವ ಪ್ರಯತ್ನ ಮಾಡಿದ್ದಾರೆ. ಆಗ ಅಲ್ಲಿ ಹಕ್ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೋಗಿ ಪ್ರಶ್ನೆ ಮಾಡಿದಾಗ ನಂದಿನಿ ಕಶ್ಯಪ್ ಅವರ ಜೊತೆ ಗಲಾಟೆಯನ್ನು ಕೂಡ ಮಾಡಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಆದರೂ ಕೂಡ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಯೋಚನೆ ಮಾಡಿದ್ದರು. ಆ ನಂತರ ಕಾರನ್ನು ಜಪ್ತಿ ಮಾಡಿಕೊಂಡು ಜಾಮೀನು ನೀಡಬಹುದಾದ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಂದಿನಿ ಅವರನ್ನು ಬಂಧಿಸದೇ ಮನೆಗೆ ಕಳುಹಿಸಿದ್ದರು.
ಆದರೆ. ಇದು ಸೋಶಿಯಲ್ ಮೀಡಿಯಾ ಕಾಲ. ಜನರ ಆಕ್ರೋಶ ಭುಗಿಲೇಳಲು ಕೆಲವೇ ಕ್ಷಣಗಳು ಮಾತ್ರ ಸಾಕು. ಇದಕ್ಕೆ ಕೈಗನ್ನಡಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಕಶ್ಯಪ್ ಅವರ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಅಸ್ಸಾಂನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಲು ಶುರುವಾಗಿತ್ತು. ದೊಡ್ಡವರಿಗೊಂದು ನ್ಯಾಯ.. ಬಡವರಿಗೊಂದು ನ್ಯಾಯ.. ಎಂದೆಲ್ಲ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು.
ಈ ಹಿನ್ನೆಲೆ ಇದೀಗ ನಂದಿನಿಯನ್ನು ದಿಸ್ಪುರ್ ಪೋಲಿಸರು ಬಂಧಿಸಿದ್ದಾರೆ. ಈ ಕುರಿತು ''NDTV''ಗೆ ಮಾಹಿತಿಯನ್ನು ನೀಡಿರುವ ಗುವಾಹಟಿ ಪೊಲೀಸ್‌ನ ಡಿಸಿಪಿ (ಸಂಚಾರ) ಜಯಂತ ಸಾರಥಿ ಬೋರಾ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿನಿ ಅವರನ್ನು ಬಂಧಿಸಲಾಗಿದ್ದು ಅವರ ಮೇಲೆ ಮೊದಲು ದಾಖಲಿಸಲಾಗಿದ್ದ ಸೆಕ್ಷನ್‌ಗಳನ್ನು ಬದಲಿಸಲಾಗಿದೆ ಎಂದು ಹೇಳಿದ್ಧಾರೆ. ಸ್ಥಳಿಯ ನ್ಯಾಯಾಲಯದ ಮುಂದೆ ಅವರನ್ನು ಹಾಜರು ಪಡಿಸಲಾಗುತ್ತೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ಧಾರೆ.
ಅಂದ್ಹಾಗೇ 22 ವರ್ಷದ ಸಮಿಯುಲ್ ಹಕ್ ನಲ್ಬರಿ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ತನ್ನ ವಿದ್ಯಾಭ್ಯಾಸದ ಖರ್ಚುಗಳನ್ನು ಕೂಡ ನೋಡಿಕೊಳ್ಳುತ್ತಿದ್ದ ಸಮಿಯುಲ್ ಹಕ್ ಗುವಾಹಟಿ ಮುನ್ಸಿಪಲ್ ಕಾರ್ಪೊರೇಷನ್ (ಜಿಎಂಸಿ) ನಲ್ಲಿ ಅರೆಕಾಲಿಕ ಕೆಲಸವನ್ನು ಮಾಡುತ್ತಿದ್ದರು.
ಹೀಗೆ ಕೆಲಸ ಮಾಡಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಈ ಅಪಘಾತ ನಡೆದಿದ್ದು ಅಪಘಾತದಲ್ಲಿ ಸಮಿಯುಲ್ ಹಕ್ ತಲೆಗೆ ತೀವ್ರವಾದ ಗಾಯವಾಗಿತ್ತು. ಎರಡೂ ಕಾಲು, ತೊಡೆ ಮತ್ತು ತೋಳಿನ ಮೂಳೆಗಳು ಮುರಿದಿದ್ದವು. ಗಂಭೀರವಾದ ಗಾಯಗಳಾಗಿದ್ದವು. ಅಪಘಾತ ನಡೆದ ತಕ್ಷಣ ಅವರನ್ನು ಗುವಾಹಟಿಯ ವೈದ್ಯಕೀಯ ಕಾಲೇಜ್‌ಗೆ ಸೇರಿಸಲಾಗಿತ್ತು. ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ { ಜುಲೈ 29 } ನಿಧನರಾದರು ಎಂದು ಅವರ ಕುಟುಂಬಸ್ಥರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ನ್ಯಾಯಕ್ಕಾಗಿ ಅಂಗಲಾಚಿರುವ ಸಮಿಯುಲ್ ಹಕ್ ಅವರ ತಾಯಿ ವಿಶೇಷ ಚಿಕಿತ್ಸೆಯನ್ನು ನೀಡುವಷ್ಟು ನಾವು ಶಕ್ತರಾಗಿರಲಿಲ್ಲ. ವೈದ್ಯಕೀಯ ವೆಚ್ಚವನ್ನು ಭರಿಸುವ ಭರವಸೆ ನೀಡಿದ್ದ ನಂದಿನಿ ಕಶ್ಯಪ್ ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ. ನನ್ನ ಮಗ ಜೀವನ್ಮರಣದ ಹೋರಾಟ ಮಾಡುತ್ತಿದ್ದರು ಕೂಡ ಕೊನೆ ಪಕ್ಷ ನೋಡಲು ಕೂಡ ಬರಲಿಲ್ಲ ಎಂದು ಹೇಳಿರುವ ಹಕ್ ಅವರ ತಾಯಿ ನ್ಯಾಯಕ್ಕಾಗಿ ಕಣ್ಣೀರು ಹಾಕಿದ್ದಾರೆ ಎಂದು ''livemint'' ವರದಿಯನ್ನು ಮಾಡಿದೆ.


Click it and Unblock the Notifications











