"ಐಶ್ವರ್ಯಾ ರೈ ಮದ್ವೆ ಆದ್ರೆ ಪವಿತ್ರವಾದ ಮಕ್ಕಳು ಹುಟ್ಟಬೇಕಂದ್ರೆ ಹೇಗೆ?": ಕೊನೆಗೂ ಕ್ಷಮೆ ಕೇಳಿದ ಮಾಜಿ ಪಾಕ್ ಕ್ರಿಕೆಟಿಗ
ಮಾಜಿ ಪಾಕಿಸ್ತಾನದ ಕ್ರಿಕೆಟಿಗ ಸುಮ್ನೆ ಇರಲಾದೆ ಇರುವೆ ಬಿಟ್ಕೊಂಡಿದ್ದ. ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್‌ನಿಂದ ಪಾಕಿಸ್ತಾನ ಹೀನಾಯವಾಗಿ ಸೋತು ಹೊರಬಿದ್ದಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ತಂಡದ ವಿರುದ್ಧ ಸೋತು ಮನೆಗೆ ತೆರಳಿದೆ. ಲೀಗ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನದ ವಿರುದ್ಧ ಮಾಜಿ ಪಾಕ್ ಕ್ರಿಕೆಟಿಗ ಅಬ್ದುಲ್ ರಜಾಕ್ ತಿರುಗಿಬಿದ್ದಿದ್ದರು.
ಮಾದ್ಯಮದ ಮುಂದೆ ಪಾಕಿಸ್ತಾನ ತಂಡ ಪರ್ಫಾಮೆನ್ಸ್ ಹಾಗೂ ಕೋಚಿಂಗ್ ಬಗ್ಗೆ ಮಾತಾಡುವ ಸಂದರ್ಭದಲ್ಲಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ತಂಡವನ್ನು ದೂಷಿಸುವ ಭರಾಟೆಯಲ್ಲಿ ಐಶ್ವರ್ಯಾ ರೈ ಹೆಸರನ್ನು ತಂದಿದ್ದರು. ಅಬ್ದುಲ್ ರಜಾಕ್ ಈ ಹೇಳಿಕೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪಾಕಿಸ್ತಾನದ ಕ್ರಿಕೆಟ್ ದಿಗ್ಗಜರೇ ಐಶ್ವರ್ಯಾ ರೈ ಹೆಸರನ್ನು ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಬ್ದುಲ್ ರಜಾಕ್ ಅನ್ನು ಜಾಡಿಸುವುದಕ್ಕೆ ಶುರುಮಾಡುತ್ತಿದ್ದಂತೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
ಐಶ್ವರ್ಯಾಗೆ ಕ್ಷಮೆ ಕೇಳಿದ ರಜಾಕ್
ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾಜಿ ಪಾಕ್ ಕ್ರಿಕೆಟಿಗ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. 27 ಸೆಕೆಂಡ್‌ಗಳ ವಿಡಿಯೋದಲ್ಲಿ ರಜಾಕ್ ತನ್ನ ಉದ್ದೇಶ ಏನಾಗಿತ್ತು? ಯಾಕೆ ಐಶ್ವರ್ಯಾ ರೈ ಬಚ್ಚನ್ ಹೆಸರು ಪ್ರಸ್ತಾಪ ಮಾಡಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ವಿಡಿಯೋದಲ್ಲಿ "ನಾನು ಅಬ್ದುಲ್ ರಜಾಕ್.. ನಿನ್ನೆ ಪತ್ರಿಕಾ ಗೋಷ್ಠಿಯ ವೇಳೆ ನಾನು ಕ್ರಿಕೆಟ್ ಕೋಚಿಂಗ್ ಹಾಗೂ ಅದರ ಉದ್ದೇಶಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆ ವೇಳೆ ಬಾಯಿ ತಪ್ಪಿ ಐಶ್ವರ್ಯಾ ರೈ ಹೆಸರನ್ನು ತೆಗೆದುಕೊಂಡಿದ್ದೇನೆ. ವೈಯಕ್ತಿಕವಾಗಿ ನಾನು ಕ್ಷಮೆಯಾಚಿಸುತ್ತೇನೆ. ನನಗೆ ಅವರನ್ನು ನೋವು ಮಾಡುವ ಉದ್ದೇಶವಿರಲಿಲ್ಲ. ನಾನು ಬೇರೆ ಉದಾಹರಣೆಗಳನ್ನು ನೀಡಬಹುದಿತ್ತು. ಆದರೆ, ಅಚಾತುರ್ಯವಾಗಿ ಅವರ ಹೆಸರನ್ನು ಬಳಸಿದ್ದೇನೆ" ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.
ಐಶ್ವರ್ಯಾ ರೈ ಬಗ್ಗೆ ರಜಾಕ್ ಹೇಳಿದ್ದಿದ್ದೇನು?
ಪತ್ರಿಕಾ ಗೋಷ್ಠಿಯಲ್ಲಿ ಅಬ್ದುಲ್ ರಜಾಕ್ ಪಾಕಿಸ್ತಾನ್ ಕ್ರಿಕೆಟ್ ತಂಡದ ಆಟವನ್ನು ಟೀಕೆ ಮಾಡಿದ್ದರು. ಈ ವೇಳೆ " ನಾನು ಇಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಉದ್ದೇಶವನ್ನು ಉಲ್ಲೇಖ ಮಾಡುತ್ತಿದ್ದೇನೆ. ನಾನು ಆಟ ಆಡುವಾಗ ನನಗೆ ನನ್ನ ಕ್ಯಾಪ್ಟನ್ ಯೂನಿಸ್ ಖಾನ್ ಉದ್ದೇಶದ ಬಗ್ಗೆ ಅರಿವಿತ್ತು. ಅದು ನನಗೆ ಶಕ್ತಿ ಮತ್ತು ಆತ್ಮವಿಶ್ವಾಸ ಬರುತ್ತಿತ್ತು. ಆ ದೇವರು ಕೂಡ ಸಹಾಯ ಮಾಡುತ್ತಿದ್ದ. ಪಾಕಿಸ್ತಾನಿ ಕ್ರಿಕೆಟ್‌ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದೆ." ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ " ನನ್ನ ಅಭಿಪ್ರಾಯ ಏನಂದ್ರ, ನಮಗೆ ಆಟಗಾರರ ಉತ್ತಮಗೊಳಿಸುವ ಯಾವುದೇ ಉದ್ದೇಶವಿಲ್ಲ. ನಾನು ಐಶ್ವರ್ಯಾ ರೈ ಅನ್ನು ಮದುವೆ ಆದರೆ, ಅದರಿಂದ ನನಗೆ ಪವಿತ್ರವಾದ ಮತ್ತು ನೈತಿಕತೆ ಇರುವ ಮಕ್ಕಳು ಹುಟ್ಟುತ್ತಾರೆ ಎಂದು ನಂಬಿಕೊಂಡರೆ, ಎಂದಿಗೂ ಸಾಧ್ಯವಾಗುವುದಿಲ್ಲ." ಎಂದು ಹೇಳಿದ್ದರು ಇದೇ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಶೊಹೇಬ್ ಆಖ್ತರ್‌ರಿಂದಲೂ ವಿರೋಧ
ಮತ್ತೊಬ್ಬ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೊಹೇಬ್ ಅಖ್ತರ್ ಕೂಡ ಆಕ್ರೋಶ ಹೊರಹಾಕಿದ್ದರು. ಅಬ್ದುಲ್ ರಜಾಕ್ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ತನ್ನ ಮಾಜಿ ಟೀಮ್ ಮೇಟ್ ಮಹಿಳೆಯೊಬ್ಬರ ಬಗ್ಗೆ ಹೀಗೆ ಮಾತಾಡಿದ್ದು ಸರಿಯಲ್ಲ ಎಂದಿದ್ದಾರೆ.
" ರಜಾಕ್ ಮಾಡಿದ ಅಸಂಬದ್ಧ ಹಾಸ್ಯ ಅಥವಾ ಹೋಲಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾವುದೇ ಮಹಿಳೆಯನ್ನು ಹೀಗೆ ಅಗೌರವ ಕೊಡುವುದು ಸರಿಯಲ್ಲ. ಅವರ ಜೊತೆ ಕೂತವರು ಚಪ್ಪಾಳೆ ಮತ್ತು ನಗುವುದನ್ನು ಬಿಟ್ಟು ತಮ್ಮ ಧ್ವನಿಯನ್ನು ಎತ್ತಬೇಕಿತ್ತು." ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ ಸೋಶಿಯಲ್ ಮೀಡಿಯಾದಲ್ಲಿಯೂ ಅಬ್ದುಲ್ ರಜಾಕ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಐಶ್ವರ್ಯಾ ರೈ ಹೆಸರನ್ನು ತೆಗೆದುಕೊಂಡಿದ್ದಕ್ಕೆ ವಿರೋಧಿಸಿದ್ದಾರೆ. ಈ ಕಾರಣಕ್ಕೆ ರಜಾಕ್ ತಕ್ಷಣವೇ ಐಶ್ವರ್ಯಾ ರೈಗೆ ಕ್ಷಮೆಯಾಚಿಸಿದ್ದಾರೆ.


Click it and Unblock the Notifications











