ಸಹೋದರಿ ಅನಿಶಾ ಜೊತೆ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ದೀಪಿಕಾ ಪಡುಕೋಣೆ: ವಿಡಿಯೋ ವೈರಲ್
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೃತಿಕ್ ರೋಷನ್ ಜೊತೆ ನಟಿಸುತ್ತಿರುವ 'ಫೈಟರ್' ಸಿನಿಮಾ ಬಿಡುಗಡೆ ಬೆನ್ನಲ್ಲೇ ದೀಪಿಕಾ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತಮ್ಮ ಸಹೋದರಿಯೊಂದಿಗೆ ತಿರುಮಲ ಬೆಟ್ಟ ಏರುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಗುರುವಾರ (ಡಿಸೆಂಬರ್ 14) ರಾತ್ರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಕ್ಕೆ ಬಂದಿದ್ದರು. ಈ ವೇಳೆ ಸೆರೆ ಹಿಡಿದ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದೀಪಿಕಾ ಪಡುಕೋಣೆ ಗುರುವಾರ (ಡಿಸೆಂಬರ್ 14) ರಾತ್ರಿ ಅಲಿಪಿರಿಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಬೆಟ್ಟ ಹತ್ತಿ ದೇವಸ್ಥಾನಕ್ಕೆ ತಲುಪಿದ್ದಾರೆ. ಅಲ್ಲಿನ ರಾಧೆ ಶ್ಯಾಮ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದು, ವಿಐಪಿ ಪಾಸ್ ಪಡೆದು, ಇಂದು (ಡಿಸೆಂಬರ್ 15) ಬೆಳಗ್ಗೆ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ದೀಪಿಕಾ ದೈವ ಭಕ್ತರು ಕೂಡ ಆಗಿರುವುದಿಂದ ಆಗಾಗ ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ದೀಪಿಕಾ ಪಡುಕೋಣೆ ನಟಿಸಿರುವ 'ಫೈಟರ್' ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಹೃತಿಕ್ ರೋಷನ್ ಜೊತೆ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದು, ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಗಳಿಸಿಕೊಂಡಿದೆ.
'ಫೈಟರ್' ಸಿನಿಮಾದ "ಶೇರ್ ಕುಲ್ ಗಯೇ.." ಹಾಡು ಇದೇ ಡಿಸೆಂಬರ್ 15ರಂದು ಬಿಡುಗಡೆಯಾಗಲಿದೆ. ಇದು 'ಫೈಟರ್' ಸಿನಿಮಾದ ಮೊದಲ ಹಾಡು. ಈ ಪಾರ್ಟಿ ಸಾಂಗ್‌ನಲ್ಲಿ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆಯ ಸಖತ್ ಡ್ಯಾನ್ಸ್ ಅನ್ನು ನಿರೀಕ್ಷೆ ಮಾಡಲಾಗಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಟೀಸರ್ ಯೂಟ್ಯೂಬ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು.
2023, ದೀಪಿಕಾ ಪಡುಕೋಣೆಗೆ ಸೂಪರ್ ಸಕ್ಸಸ್ ಸಿಕ್ಕಿದೆ. ಶಾರುಖ್ ಖಾನ್ ಜೊತೆ ನಟಿಸಿದ 'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿತ್ತು. ಶಾರುಖ್ ಜೊತೆ ನಟಿಸಿದ ಮತ್ತೊಂದು ಸಿನಿಮಾ 'ಜವಾನ್' ಕೂಡ ಗಲ್ಲಾಪಟ್ಟೆಗೆಯಲ್ಲಿ ಸದ್ದು ಮಾಡಿದೆ. ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ದೀಪಿಕಾ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಿರುವ 'ಫೈಟರ್' ಸಿನಿಮಾ 2024, ಜನವರಿ 25ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮಿನಾಲ್ ರಾಥೋಡ್ ಉರ್ಫ್ ಮಿನ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೃತಿಕ್, ದೀಪಿಕಾ ಜೊತೆಗೆ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಓಬೆರಾಯ್, ತಲತ್ ಅಜೀಜ್, ಸಂಜೀದಾ ಶೇಕ್ ಸೇರಿದಂತೆ ಬಾಲಿವುಡ್‌ನ ಪ್ರಮುಖ ನಟರು ಕಾಣಿಸಿಕೊಂಡಿದ್ದಾರೆ.
2024ರಲ್ಲಿ ದೀಪಿಕಾ ಪಡುಕೋಣೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ ಹಾಗೂ ದೀಪಿಕಾ ಕಾಂಬಿನೇಷನ್‌ನಲ್ಲಿ ಬರ್ತಿರೋ 'ಕಲ್ಕಿ 2898 ಎಡಿ' ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಕಡೆ ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿರುವ 'ಸಿಂಗಂ ಅಗೈನ್' ಸಿನಿಮಾದ ಚಿತ್ರೀಕರಣ ಕೂಡ ಜೋರಾಗಿ ನಡೆಯುತ್ತಿದೆ.


Click it and Unblock the Notifications










