ನ್ಯಾಯಾಂಗ ನಿಂದನೆ ಪ್ರಕರಣ: ದೆಹಲಿ ಹೈಕೋರ್ಟ್ ಮುಂದೆ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ದೆಹಲಿ ಕೋರ್ಟ್ ಆದೇಶದಂತೆ ಇಂದು (ಏಪ್ರಿಲ್ 10) ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಒರಿಸ್ಸಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ವಿರುದ್ಧ ಟ್ವೀಟ್ ಮಾಡಿದ್ದಕ್ಕೆ ಕ್ಷಮೆಯಾಚಿಸುವಂತೆ ದೆಹಲಿ ಕೋರ್ಟ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಆದೇಶ ನೀಡಿದೆ.
2018ರಲ್ಲಿ ನ್ಯಾಯಮೂರ್ತಿ ಎಸ್ ಮುರಳೀಧರ್ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು. ಆ ವೇಳೆ ಭೀಮಾ ಕೋರೆಗಾವ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಗೌತಮ್ ನವಲಕ ಅವರಿಗೆ ಜಾಮೀನು ಮಂಜೂರು ಮಾಡಿದ್ದರು. ಅದನ್ನು ವಿರೋಧಿಸಿ ವಿವೇಕ್ ಅಗ್ನಿ ಹೋತ್ರಿ ಟ್ವೀಟ್ ಮಾಡಿದ್ದರು. ನ್ಯಾಯಾಂಗ ನಿಂದನೆ ಹಿನ್ನೆಲೆ ಆ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದರು. ಅದರ ಹೊರತಾಗಿಯೂ ಮಾರ್ಚ್ 16, 2023ರಂದು ಕೋರ್ಟ್‌ಗೆ ಹಾಜರಾಗುವಂತೆ ಆದೇಶ ನೀಡಿತ್ತು.

ಕೋರ್ಟ್ ಆದೇಶ ನೀಡಿದ ಹೊರತಾಗಿಯೂ ವಿವೇಕ್ ಅಗ್ನಿಹೋತ್ರಿ ಹಾಜರಾಗಿರಲಿಲ್ಲ. ಆ ಬಳಿಕ ನ್ಯಾಯಾಲಯ ಹೇಳಿಕೆಯೊಂದನ್ನು ರಿಲೀಸ್ ಮಾಡಿತ್ತು. " ನ್ಯಾಯಾಂಗ ನಿಂದನೆ ಮಾಡಿರುವುದರಿಂದ ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಳಿಕೊಂಡಿದ್ದೆವು. ಅವರು ವೈಯಕ್ತಿಕವಾಗಿ ಪಶ್ಚತಾಪ ವ್ಯಕ್ತಪಡಿಸಲು ಏನು ಸಮಸ್ಯೆ? ಪಶ್ಚಾತಾಪವನ್ನು ಒಂದು ಪತ್ರದ ಮೂಲಕ ವ್ಯಕ್ತಪಡಿಸಲು ಸಾಧ್ಯವಿಲ್ಲ." ಎಂದು ಕೇಳಿತ್ತು. ಹೀಗಾಗಿ ದೆಹಲಿ ಕೋರ್ಟ್ ಆದೇಶದ ಮೇರೆಗೆ ಇಂದು (ಏಪ್ರಿಲ್ 10)ರಂದು ವಿವೇಕ್ ಅಗ್ನಿಹೋತ್ರಿ ಹಾಜರಾಗಬೇಕಿದೆ.
ಭೀಮಾ ಕೊರೇಗಾವ್ ಹಿಂಸಾಚಾರ ಪ್ರಕರಣದಲ್ಲಿ ಗೌತಮ್ ನವಲಕ ನೀಡಲಾಗಿದ್ದ ಗೃಹಬಂಧನವನ್ನು ತೆರೆವುಗೊಳಿಸಲು ಅಂದು ದೆಹಲಿ ಹೈಕೋರ್ಟ್‌ನ ನ್ಯಾಯಾಮೂರ್ತಿಯಾಗಿದ್ದ ಎಸ್ ಮುರಳೀಧರ್ ಆದೇಶ ನೀಡಿದ್ದರು. ಈ ಪ್ರಕರಣ ಸಂಬಂಧ ವಿವೇಕ್ ಅಗ್ನಿಹೋತ್ರಿ ನ್ಯಾಯಮೂರ್ತಿ ಎಸ್ ಮುರಳೀಧರ್ ವಿರುದ್ಧ ಪಕ್ಷಪಾತದ ಮಾಡಿರುವ ಆರೋಪ ಮಾಡಿದ್ದರು.

ನ್ಯಾಯಮೂರ್ತಿ ಎಸ್ ಮುರಳೀಧರ್ ಅವರ ಪತ್ನಿ ಉಶಾ ರಾಮನಾಥನ್ ಭೀಮಾ ಕೊರೇಗಾವ್ ಪ್ರಕರಣದ ಆರೋಪಿ ಗೌತಮ್ ನವಲಕ ಅವರ ಸ್ನೇಹಿತ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಎಸ್ ಮುರಳೀಧರ್ 2006ರಿಂದ 2020ರವರೆ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಓರಿಸ್ಸಾ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ.


Click it and Unblock the Notifications











