ಸೈಫ್ ಅಲಿ ಖಾನ್‌ಗೆ ಇರಿದ ದುಷ್ಕರ್ಮಿ ಆ 33 ನಿಮಿಷ ಎಲ್ಲಿದ್ದ? ಅಷ್ಟು ಸುಲಭಕ್ಕೆ ತಪ್ಪಿಸಿಕೊಂಡಿದ್ದೇಕೆ?
ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಮುಂಬೈ ನಗರಿಯನ್ನು ಆತಂಕಕ್ಕೆ ತಳ್ಳಿತ್ತು. ಇಂತಹ ಟೈಟ್ ಸೆಕ್ಯೂರಿಟಿ ಇರುವ ಸೆಲೆಬ್ರಿಟಿಗಳ ಮನೆಗಳೇ ಸೇಫ್ ಇಲ್ಲ. ಇನ್ನು ಸಾಮಾನ್ಯ ಜನರ ಕಥೆಯೇನು? ಅಂತ ಸಿನಿಮಾ ತಾರೆಯರು ಹಾಗೂ ರಾಜಕೀಯ ಮುಖಂಡರು ಆತಂಕವನ್ನು ವ್ಯಕ್ತಪಡಿಸಿದ್ದರು. ಸೈಫ್ ಬೇಗ ಗುಣಮುಖರಾಗುವಂತೆ ಹಾರೈಸಿದ್ದರು.
ಈ ಘಟನೆ ನಡೆದ ಬೆನ್ನಲ್ಲೇ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದವನ ಮೇಲೆ ಅನುಮಾನಗಳು ಮೂಡಿದ್ದವು. ನಿಜಕ್ಕೂ ಕಳ್ಳತನ ಮಾಡುವುದಕ್ಕೆ ಬಂದಿದ್ದನೇ? ಅಥವಾ ಆತನ ಉದ್ದೇಶ ಬೇರೆ ಏನಾದರೂ ಇತ್ತಾ? ಅನ್ನೋ ಪ್ರಶ್ನೆ ಹಲವರಲ್ಲಿ ಹುಟ್ಟಿಕೊಂಡಿತ್ತು. ಮುಂಬೈ ಪೊಲೀಸರು ಕೂಡ ಹಲವು ಆಯಾಮಗಳಲ್ಲಿ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.

ಇತ್ತೀಚೆಗೆ ಪೊಲೀಸರು ಆರೋಪಿಯ ಸೈಫ್ ಮನೆಯಿಂದ ಹೊರ ಹೋಗುತ್ತಿರುವ ದೃಶ್ಯವನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಈಗ ತಪ್ಪಿಸಿಕೊಂಡಿರುವ ಆರೋಪಿಯ ಗುರುತನ್ನು ಅನಾವರಣ ಮಾಡಲಾಗಿದೆ. ಆದರೆ, ಸಿಸಿಟಿವಿಯಲ್ಲಿ ಆತ ಹೊರ ಹೋಗುತ್ತಿರುವ ದೃಶ್ಯ ಸೆರೆಯಾದ ಸಮಯ ಅಚ್ಚರಿಯನ್ನು ಮೂಡಿಸಿದೆ. ಬಾಲಿವುಡ್ ನಟನಿಗೆ ಚಾಕುವಿನಿಂದ ಇರಿದ ಆರೋಪಿ 33 ನಿಮಿಷಗಳ ಬಳಿಕ ಆಚೆ ಹೋಗುತ್ತಾನೆ. ಹಾಗಿದ್ದರೆ ಅಷ್ಟು ನಿಮಿಷ ಎಲ್ಲಿದ್ದ? ಅನ್ನೋ ಪ್ರಶ್ನೆ ಮೂಡಿದೆ.
ಸೈಫ್ ಅಲಿ ಖಾನ್ ಸುಮಾರು ಗುರುವಾರ (ಜನವರಿ 16) ಬೆಳಗಾಗುವುದಕ್ಕೂ ಮುನ್ನ 2.30ಕ್ಕೆ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವೈದ್ಯ ಡಾ.ನಿತಿನ್ ಡಾನ್ಗೆ ಹೇಳಿದ್ದರು. ಅಂದರೆ, ದುಷ್ಕರ್ಮಿ ಸೈಫ್ ಅಲಿ ಖಾನ್‌ಗೆ ಸುಮಾರು 1.30ಕ್ಕೆ 2 ಗಂಟೆಯೊಳಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಊಹಿಸಬಹುದು ( ಸಮಯ ಇನ್ನೂ ನಿಖರವಾಗಿ ಗೊತ್ತಿಲ್ಲ). ಎರಡು ಗಂಟೆ ಸುಮಾರಿಗೆ ಸೈಫ್ ಅಲಿ ಖಾನ್ ಅನ್ನು ಅವರ ಅಪಾರ್ಟ್‌ಮೆಂಟ್‌ನಿಂದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದಿತ್ತು.
ಪೊಲೀಸರು ರಿಲೀಸ್ ಮಾಡಿರುವ ಆರೋಪಿ ಸರಿ ಸುಮಾರು 2 ಗಂಟೆ 33 ನಿಮಿಷಕ್ಕೆ ಸೈಫ್ ಅಲಿ ಖಾನ್ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳನ್ನು ಇಳಿಯುತ್ತಿರುವ ದೃಶ್ಯ ಸೆರೆಯಾಗಿದೆ. ಹಾಗಿದ್ದರೆ 2 ಗಂಟೆಯಿಂದ 2 ಗಂಟೆ 33 ನಿಮಿಷಗಳವರೆಗೂ ಎಲ್ಲಿದ್ದ? ಮನೆಯೊಳಗೆ ಇದ್ದನೇ? ಅದು ಹೇಗೆ ಸಾಧ್ಯ? ಅನ್ನೋ ಅನುಮಾನ ಮಾಡಿದ್ದೂ ಅದಕ್ಕೀಗ ಉತ್ತರ ಸಿಕ್ಕಿದೆ.
ಕಳೆದ ಕೆಲವು ದಿನಗಳಿಂದ ಸೈಫ್ ಅಲಿ ಖಾನ್ ಮನೆಯಲ್ಲಿ ಫ್ಲೋರಿಂಗ್ ಕೆಲಸ ನಡೆಯುತ್ತಿತ್ತು. ಆ ಕೆಲಸ ಮಾಡುವುದಕ್ಕೆ ಮೂರು ಮಂದಿ ಕಾರ್ಮಿಕರು ಬಂದಿದ್ದರು ಎನ್ನಲಾಗಿದೆ. ಕೆಲಸ ಮುಗಿಸಿದವರಲ್ಲಿ ಒಬ್ಬ ಅಲ್ಲಿಂದ ಹೊರಗೆ ಹೋಗಿರಲಿಲ್ಲ. ಅವರ ಮನೆಯಲ್ಲಿಯೇ ಅಡಗಿ ಕುಳಿತುಕೊಂಡಿದ್ದ ಎನ್ನಲಾಗಿದೆ. ಸಿಸಿಟಿವಿಯಲ್ಲಿರುವ ವ್ಯಕ್ತಿನೂ ಅವನೇ, ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದವನೂ ಅವನೇ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದ ಘಟನೆ ಬಾಲಿವುಡ್ ಮಂದಿಯ ಎದೆ ನಡುಗಿಸಿದೆ. ಇಷ್ಟೊಂದು ಸೆಕ್ಯೂರಿಟಿ ಇದ್ದರೂ ಚಾಕುವಿನಿಂದ ಇರಿದಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಆರು ಕಡೆ ತಿವಿದಿರುವ ದುಷ್ಕರ್ಮಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶೀಘ್ರದಲ್ಲಿಯೇ ಆತನನ್ನು ಬಂಧಿಸುವ ಭರವಸೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಆತಂಕದ ವಾತಾವರಣವಿದೆ.


Click it and Unblock the Notifications










