'ಕೌನ್ ಬನೇಗಾ ಕರೋಡ್‌ಪತಿ' 17ರ ಒಂದು ಎಪಿಸೋಡ್‌ಗೆ ಅಮಿತಾಭ್ ಬಚ್ಚನ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?
ಭಾರತ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 17 ಇನ್ನೇನು ಶೀಘ್ರದಲ್ಲಿಯೇ ಆರಂಭ ಆಗುತ್ತಿದೆ. ಈ ಬಾರಿ ಕೂಡ ಈ ಶೋ ಅನ್ನು ಬಾಲಿವುಡ್‌ನ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ನಿರೂಪಣೆ ಮಾಡುತ್ತಿದ್ದಾರೆ. ಬಿಗ್ ಬಿ ಮುಂದೆ ಹಾಟ್ ಸೀಟ್ ಮುಂದೆ ಕೂತು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವುದೇ ಒಂದು ಥ್ರಿಲ್ಲಿಂಗ್ ಅನುಭವ. ಈಗ ಮತ್ತೆ 17ನೇ ಸೀಸನ್‌ನಲ್ಲಿ ಈ ಕ್ವಿಜ್ ಶೋ ಆರಂಭ ಆಗುತ್ತಿದೆ. ಈ ಬೆನ್ನಲ್ಲೇ ಅಮಿತಾಭ್ ಬಚ್ಚನ್ ಪಡೆಯುತ್ತಿರುವ ಸಂಭಾವನೆ ಬಗ್ಗೆ ಚರ್ಚೆ ಎದ್ದಿದೆ.
'ಕೌನ್ ಬನೇಗಾ ಕರೋಡ್‌ಪತಿ' 17 ಕ್ವಿಜ್ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 11ರಂದು ಬಿಗ್ ಬಿ ಈ ಶೋ ಅನ್ನು ನಡೆಸಿಕೊಡುತ್ತಾರೆ. ಈ ಶೋ ನೋಡುವುದಕ್ಕೆ ಅವರದ್ದೇ ಫ್ಯಾನ್ ಬೇಸ್ ಹಲವು ದಿನಗಳಿಂದ ಕಾದು ಕೂತಿತ್ತು. ಕೊನೆಗೂ ಆ ಅಭಿಮಾನಿ ಬಳಗಕ್ಕೆ ಒಂದೊಳ್ಳೆ ಸುದ್ದಿಯಂತೂ ಸಿಕ್ಕಿದೆ. ಆದರೆ, ಪ್ರತಿ ಬಾರಿ ಈ ಶೋ ಆರಂಭ ಆಗುತ್ತಿದ್ದಂತೆ ಅಮಿತಾಭ್ ಬಚ್ಚನ್ ಎಷ್ಟು ಸಂಭಾವನೆ ಪಡೆಯಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಹುಟ್ಟಿಕೊಳ್ಳುತ್ತೆ.

ಅಷ್ಟಕ್ಕೂ ಈ ಕುತೂಹಲಕ್ಕೆ ಒಂದು ಕಾರಣವಿದೆ. ಅಮಿತಾಭ್ ಬಚ್ಚನ್ ತನ್ನ ಕಂಪನಿಯೊಂದನ್ನು ಕಟ್ಟಿಕೊಂಡು ನಷ್ಟ ಅನುಭವಿಸಿದ್ದರು. ಆ ವೇಳೆ ಇನ್ನೇನು ಬೀದಿಗೆ ಬಂದೇ ಬಿಟ್ಟರು ಎಂದೇ ಭಾವಿಸಲಾಗಿತ್ತು. ಆಗ ಮತ್ತೆ ಅಮಿತಾಭ್ ಫೀನಿಕ್ಸ್‌ನಂತೆ ಎದ್ದು ನಿಂತಿದ್ದರು. ಇಂತಹ ಸಂಕಷ್ಟದಿಂದ ಪಾರಾಗಿದ್ದಕ್ಕೆ ಕಾರಣವೇ 'ಕೌನ್ ಬನೇಗಾ ಕರೋಡ್‌ಪತಿ' ಶೋ. ಇದು ಕೊಟ್ಟ ಜನಪ್ರಿಯತೆ ಬಿಗ್ ಬಿಯನ್ನು ಸಾಲದ ಸುಳಿಯಿಂದ ಹೊರತೆಗೆದುಕೊಂಡು ಬಂದಿತ್ತು.
ಹೀಗಾಗಿ 'ಕೌನ್ ಬನೇಗಾ ಕರೋಡ್‌ಪತಿ' ಶೋ ಅನ್ನು ಅಮಿತಾಭ್ ಬಚ್ಚನ್ ಮರೆಯುವ ಹಾಗಿಲ್ಲ. ಪ್ರತಿಯೊಂದು ಸೀಸನ್ ಆರಂಭ ಆಗುತ್ತಿದ್ದಂತೆ ಅಮಿತಾಭ್ ಬಚ್ಚನ್ ಸಂಭಾವನೆ ಕೂಡ ಅಷ್ಟೇ ಹೆಚ್ಚಾಗುತ್ತಾ ಹೋಗುತ್ತೆ. ಈ ವೇಳೆ ಅವರ ಅಭಿಮಾನಿಗಳು ಬಿಗ್ ಬಿ ಪಡೆದಿರುವ ಸಂಭಾವನೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದು ಅಮಿತಾಭ್ ಫ್ಯಾನ್ಸ್‌ಗೆ ಪ್ರತಿಷ್ಠೆ ಕೂಡ ಹೌದು.
'ಕೌನ್ ಬನೇಗಾ ಕರೋಡ್‌ಪತಿ' ಕ್ವಿಜ್ ಶೋ ಅನ್ನು ಅಮಿತಾಭ್ ಬಚ್ಚನ್ 2000ನೇ ಇಸವಿಯಿಂದ ಆರಂಭಿಸಿದ್ದರು. ಅಂದಿನಿಂದ 'ಕೌನ್ ಬನೇಗಾ ಕರೋಡ್‌ಪತಿ' ಅವರ ಬದುಕಿನ ಒಂದು ಭಾಗವಾಗಿಯೇ ಹೋಗಿದೆ. ಅಮಿತಾಭ್ ಬಚ್ಚನ್ ಅಂದರೆ, 'ಕೌನ್ ಬನೇಗಾ ಕರೋಡ್‌ಪತಿ' ಎನ್ನುವ ಹಾಗಾಗಿದೆ. ಸೋನಿ ಚಾನೆಲ್‌ನಲ್ಲಿ ಆಗಸ್ಟ್ 11 ರಿಂದ ಗ್ರ್ಯಾಂಡ್ ಆಗಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಕಾರ್ಯಕ್ರಮದ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಈ ಗ್ಯಾಪ್‌ನಲ್ಲಿಯೇ ಅಮಿತಾಭ್ ಬಚ್ಚನ್ ಅವರ ಸಂಭಾವನೆಯ ಬಗ್ಗೆನೂ ವದಂತಿಗಳು ಹರಿದಾಡುತ್ತಿವೆ. ಅಮಿತಾಭ್ ಸಂಭಾವನೆ ಪಡೆದಿರುವ ಬಗ್ಗೆ ಸುದ್ದಿಗಳ ಸದ್ದು ಮಾಡುತ್ತಿವೆ. ಮೂಲಗಳ ಪ್ರಕಾರ, ಪ್ರತಿ ಎಪಿಸೋಡ್‌ಗೆ ಬರೋಬ್ಬರೊ 5 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅಮಿತಾಭ್ ಬಚ್ಚನ್ ಆಗಲಿ, ವಾಹಿನಿಯಾಗಲಿ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. 'ಕೌನ್ ಬನೇಗಾ ಕರೋಡ್‌ಪತಿ' 17 ಪ್ರೋಮೋ ರಿಲೀಸ್ ಆಗಿದ್ದರಿಂದ ಇನ್ನುಷ್ಟು ಕುತೂಹಲ ಹೆಚ್ಚಾಗಿದೆ.
ಅಮಿತಾಭ್ ಬಚ್ಚನ್ ಜೂನ್ 3 ರಂದು ಈ ರಿಯಾಲಿಟಿ ಶೋನ 25ನೇ ವರ್ಷದ ಸಂಭ್ರಮದ ಬಗ್ಗೆ ಮಾತಾಡಿದ್ದರು. "ಇಂದು ಅಂದರೆ, ಜುಲೈ 3, 2025.. ನಾನು ಈ ವರ್ಷದ ಕೆಬಿಸಿ 17ನೇ ಸೀಸನ್‌ನ ಸಿದ್ಧತೆಯಲ್ಲಿ ತೊಡಗಿಸಿದ್ದೇನೆ. ಕೆಬಿಸಿ ತಂಡವು ನನಗೆ ಮಾಹಿತಿ ಹಂಚಿಕೊಂಡಂತೆ ಜುಲೈ 3,2000 ರಂದು ಮೊದಲ ಪ್ರಸಾರ ಮಾಡಲಾಗಿತ್ತು. ಅಂದರೆ 'ಕೌನ್ ಬನೇಗಾ ಕರೋಡ್‌ಪತಿ' 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ" ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದರು. ಬಿಗ್ ಬಿಯ ವಿಶಿಷ್ಟ ಧ್ವನಿ ಹಾಗೂ ಪ್ರಶ್ನೆಗಳನ್ನು ಕೇಳುವ ಶೈಲಿಯು ಈ ಕಾರ್ಯಕ್ರಮದ ಹೈಲೈಟ್.


Click it and Unblock the Notifications











