Ratan Tata|ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದ ರತನ್ ಟಾಟಾ; ನಿರ್ಮಿಸಿದ ಏಕೈಕ ಸಿನಿಮಾಗೆ ಹೀನಾಯ ಸೋಲು.. ಯಾವುದದು?
ಭಾರತದ ಉದ್ಯಮ ವಲಯದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ್ದ ಟಾಟಾ ಗ್ರೂಪ್‌ನ ರತನ್ ಟಾಟಾ ನಿಧನರಾಗಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರತನ್ ಟಾಟಾ ಎರಡು ದಿನಗಳಿಂದ ಹಿಂದೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ರಕ್ತದೊತ್ತಡದ ಸಮಸ್ಯೆ ಎದುರಾಗಿದ್ದರಿಂದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ರತನ್ ಟಾಟಾ ಆಸ್ಪತ್ರೆಗೆ ದಾಖಲಾದಲೇ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಅವರೇ ಬರೆದಿದ್ದ ಪತ್ರದಲ್ಲಿ ರೆಗ್ಯೂಲರ್ ಮೆಡಿಕಲ್ ತಪಾಸಣೆಗೆ ಬಂದಿದ್ದಾಗಿ ಹೇಳಿದ್ದರು. ಇದು ಸಮಾಧಾನ ತಂದಿತ್ತು. ಆದರೆ, ನಿನ್ನೆ (ಅಕ್ಟೋಬರ್ 9) ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಇಡೀ ದೇಶ ದು:ಖದಲ್ಲಿ ಮುಳುಗುವಂತೆ ಮಾಡಿದೆ.

ರತನ್ ಟಾಟಾ ಭಾರತದ ಕಂಡ ಅತ್ಯಂತ ಗೌರವಾನ್ವಿತ ಉದ್ಯಮಿ. ಬಡವರ ಪಾಲಿಗೆ ರತನ್ ಟಾಟಾ ಬಂಧುವಾಗಿದ್ದರು. ಕೇವಲ ಉದ್ಯಮಿಯಲ್ಲದೆ, ಸಮಾಜಮುಖಿ ಕೆಲಸಗಳಿಂದಲೂ ಗುರುತಿಸಿಕೊಂಡಿದ್ದರು. ಅದೆಷ್ಟೋ ದೊಡ್ಡ ಉದ್ಯಮ ಹೊಂದಿದ್ದರೂ, ಅವರ ಸರಳ ವ್ಯಕ್ತಿವೇ ಅಪಾರ ಅಭಿಮಾನಿಗಳನ್ನು ಹುಟ್ಟಾಕಿತ್ತು. ರತನ್ ಟಾಟಾ ಕೈ ಹಾಕದ ಉದ್ಯಮವೇ ಇರಲಿಲ್ಲ. ವಿಮಾನ ಉದ್ಯಮ, ಆಟೋಮೋಟಿವ್, ಪವರ್, ಸ್ಟೀಲ್, ಹೋಟೆಲ್‌ಗಳು, ಐಟಿ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಲ್ಲೂ ಯಶಸ್ಸು ಕಂಡಿದ್ದರು.
ರತನ್ ಟಾಟಾ ಸಿನಿಮಾ ಕ್ಷೇತ್ರದಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮುಂದಾಗಿದ್ದರು. ಆದರೆ, ಸಿನಿಮಾ ಬಿಟ್ಟು ರತನ್ ಟಾಟಾ ಬೇರೆ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸನ್ನು ಕಂಡಿದ್ದರು. ರತನ್ ಟಾಟಾ ಒಂದೇ ಒಂದು ಸಿನಿಮಾಗೆ ಬಂಡವಾಳ ಹೂಡಿದ್ದರು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಅಂದಿನಿಂದ ಮತ್ತೆ ಸಿನಿಮಾ ನಿರ್ಮಾಣದ ಕಡೆಗೆ ಮುಖವೇ ಹಾಕಲಿಲ್ಲ.
ರತನ್ ಟಾಟಾ ಸಿನಿಮಾ ಕ್ಷೇತ್ರದಲ್ಲೂ ಹಣ ಹೂಡಿಕೆ ಮಾಡುವುದಕ್ಕೆ ಮುಂದೆ ಬಂದಿದ್ದರು. ಅಮಿತಾಭ್ ಬಚ್ಚನ್, ಬಿಪಾಶಾ ಬಾಸು ಹಾಗೂ ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಏತ್ಬಾರ್' ಅನ್ನುವ ಬಾಲಿವುಡ್ ಸಿನಿಮಾವನ್ನು ಸಹ ನಿರ್ಮಾಣ ಮಾಡಿದ್ದರು. ಈ ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ 'ಏತ್ಬಾರ್' 2004ರಲ್ಲಿ ತೆರೆಕಂಡಿತ್ತು. 1996ರಲ್ಲಿ ತೆರೆಕಂಡಿದ್ದ ಹಾಲಿವುಡ್ ಸಿನಿಮಾ 'ಫಿಯರ್'ದಿಂದ ಪ್ರೇರಣೆ ಪಡೆದು ವಿಕ್ರಮ್ ಭಟ್ ನಿರ್ದೇಶನ ಮಾಡಿದ್ದರು.
ಬಾಲಿವುಡ್‌ನ ನಿರ್ಮಾಪಕ ಜಿತಿನ್ ಕುಮಾರ್ ಎಂಬುವವರೊಂದಿಗೆ ಸೇರಿ ರತನ್ ಟಾಟಾ ಸಿನಿಮಾ ನಿರ್ಮಾಣ ಮಾಡಿದ್ದರು. ಆಗಿನ ಕಾಲಕ್ಕೆ ಈ ಸಿನಿಮಾದ ಬಜೆಟ್ 9.50 ಕೋಟಿ ರೂಪಾಯಿ ದಾಟಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸುಮಾರು 8 ಕೋಟಿ ರೂಪಾಯಿಯನ್ನಷ್ಟೇ ಕಲೆ ಹಾಕಿತ್ತು. 2004ರಲ್ಲಿ ಹೀನಾಯವಾಗಿ ಸೋಲು ಕಂಡ ಸಿನಿಮಾ ಪಟ್ಟಿಯಲ್ಲಿ ಈ ಸಿನಿಮಾ ಸೇರಿಕೊಂಡಿತ್ತು.
ಮೊದಲ ಸಿನಿಮಾವೇ ಬಿಗ್ ಫ್ಲಾಪ್ ಅಂತ ಸಾಬೀತಾಗಿದ್ದರಿಂದ ರತನ್ ಟಾಟಾ ಮತ್ತೊಂದು ಪ್ರಾಜೆಕ್ಟ್ ಕೈ ಹಾಕಲಿಲ್ಲ. ಸಿನಿಮಾರಂಗದಿಂದ ದೂರವೇ ಉಳಿದು ಬಿಟ್ಟರು. ಒಂದು ವೇಳೆ 'ಏತ್ಬಾರ್' ಸಿನಿಮಾ ಹಿಟ್ ಆಗಿದ್ದರೆ, ಬಹುಶ: ಸಿನಿಮಾ ಕ್ಷೇತ್ರದಲ್ಲೂ ಒಂದು ಪ್ರೊಡಕ್ಷನ್ ಹೌಸ್ ನಿರ್ಮಾಣ ಆಗುತ್ತಿತ್ತೋ ಏನೋ? ಆದರೆ, ದುರಾದೃಷ್ಟ ರತನ್ ಟಾಟಾ ಅವರ ಚೊಚ್ಚಲ ಸಿನಿಮಾವೇ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿತ್ತು.


Click it and Unblock the Notifications











