ಅಮೆರಿಕದಲ್ಲಿ ಪ್ರಭಾಸ್ ಮುಂದೆ ಶಾರುಖ್ ಆಟ ನಡೀತಿಲ್ಲ: ಅಡ್ವಾನ್ಸ್ ಬುಕಿಂಗ್‌ನಲ್ಲಿ 'ಸಲಾರ್'ಗೆ ಮುನ್ನಡೆ!
ಶಾರುಖ್ ಖಾನ್ ತಮ್ಮ ಕರಿಯರ್‌ನಲ್ಲಿ ಇಂತಹ ಅದೆಷ್ಟೋ ಕ್ಲ್ಯಾಶ್‌ಗಳನ್ನು ನೋಡಿದ್ದಾರೆ. ಕೆಲವು ಬಾರಿ ಬಾಕ್ಸಾಫೀಸ್ ಫೈಟ್‌ನಲ್ಲಿ ಸಿಕ್ಕಾಪಟ್ಟೆ ಸೋತಿದ್ದಾರೆ. ಮತ್ತೆ ಕೆಲವೊಮ್ಮೆ ಗೆದ್ದು ಸೇಡು ತೀರಿಸಿಕೊಂಡಿದ್ದಾರೆ. ಈ ಬಾರಿನೂ ಹಾಗೇ ಆಗುತ್ತಾ? ಪ್ರಶಾಂತ್ ನೀಲ್‌ಗೆ ಟಕ್ಕರ್ ಕೊಡುತ್ತಾರಾ? ಅನ್ನೋದನ್ನು ಕಿಂಗ್ ಖಾನ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.
ಶಾರುಖ್ ಖಾನ್ 'ಜೀರೊ' ರಿಲೀಸ್ ಆದಾಗ, ಪ್ರಶಾಂತ್ ನೀಲ್ 'ಕೆಜಿಎಫ್' ಸಿನಿಮಾ ರಿಲೀಸ್ ಮಾಡಿದ್ದರು. ಆ ವೇಳೆ 'ಜೀರೊ' ಮುಂದೆ 'ಕೆಜಿಎಫ್' ಗೆದ್ದು ಬೀಗಿತ್ತು. ಈಗ ಮತ್ತೆ ಶಾರುಖ್‌ಗೆ ಪ್ರಶಾಂತ್ ನೀಲ್ ಟಕ್ಕರ್ ಕೊಡುವುದಕ್ಕೆ ಹೊರಟಿದ್ದಾರೆ. ಅದಕ್ಕೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಭಾರತದಲ್ಲಿ ಅಲ್ಲ.

ಅಮೆರಿಕದಲ್ಲಿ ಈಗಾಗಲೇ ಶಾರುಖ್ ಖಾನ್ 'ಡಂಕಿ' ಹಾಗೂ ಪ್ರಭಾಸ್ 'ಸಲಾರ್' ಸಿನಿಮಾಗಳಿಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಅನಿವಾಸಿ ಭಾರತೀಯ ಒಲುವು ಪ್ರಭಾಸ್ ಮೇಲೆ ಇದೆಯೇ ಹೊರತು ಶಾರುಖ್ ಖಾನ್ ಮೇಲೆ ಇಲ್ಲ. ಸದ್ಯಕ್ಕೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಕೊಟ್ಟಿರೋ ಅಡ್ವಾನ್ಸ್ ಬುಕಿಂಗ್ ಲೆಕ್ಕಾಚಾರ ಹೀಗಿದೆ.
ಶಾರುಖ್ ಖಾನ್ 'ಡಂಕಿ' ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಅದೇ ಪ್ರಭಾಸ್ ಸಿನಿಮಾ 'ಸಲಾರ್' ಒಂದು ದಿನ ತಡವಾಗಿ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ. ಈ ಎರಡೂ ಸಿನಿಮಾಗಳೂ ಒಂದು ದಿನದ ಅಂತರದಲ್ಲಿ ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಫೈಟ್ ನೆಕ್ಸ್ಟ್ ಲೆವೆಲ್‌ನಲ್ಲಿ ಇರುತ್ತೆ. ಸದ್ಯಕ್ಕೀಗ ಅಮೆರಿಕದಲ್ಲಿ 'ಸಲಾರ್'ಗೆ ಹೆಚ್ಚು ಟಿಕೆಟ್ ಸೇಲ್ ಆಗಿದೆ. 'ಡಂಕಿ' ತುಂಬಾನೇ ಹಿಂದೆ ಬಿದ್ದಿದೆ ಎನ್ನಲಾಗುತ್ತಿದೆ.
'ಡಂಕಿ' ಬಿಡುಗಡೆಗೆ ಇನ್ನು 16 ದಿನ ಬಾಕಿ ಉಳಿದಿರುವಾಗಲೇ ಜರ್ಮನಿಯಲ್ಲಿ ಪ್ರೀಮಿಯರ್‌ಗೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಸದ್ಯ ಈ ಶೋಗಳಿಗೆ ಮಾತ್ರ ಟಿಕೆಟ್ ಬುಕಿಂಗ್ ಆಗುತ್ತಿದೆ. ಆದರೆ, 'ಸಲಾರ್' ವಿಷಯ ಬೇರೆನೇ ಇದೆ. ಅಮೆರಿಕದಲ್ಲಿ 'ಸಲಾರ್' ಸಿನಿಮಾ ಅಡ್ವಾನ್ಸ್ ಬುಕಿಂಗ್ ಅದ್ಭುತವಾಗಿದೆಯೆಂದು ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ.

'ಸಲಾರ್' ಅಮೆರಿಕದ ಸುಮಾರು 300 ಸ್ಥಳಗಳಲ್ಲಿ 1000ಕ್ಕೂ ಅಧಿಕ ಶೋಗಳನ್ನು ನೀಡಲಾಗಿದೆ. ರಿಲೀಸ್‌ಗೆ 17 ದಿನಗಳು ಇರುವಾಗಲೇ ಈ ಸಿನಿಮಾ 15 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಈ ಮೂಲಕ 4 ಲಕ್ಷದ 20 ಸಾವಿರ ಡಾಲರ್ ಹಣ ಕಲೆಕ್ಷನ್ ಆಗಿದೆ. ಟಿಕೆಟ್‌ಗಳ ಖರೀದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಸಿನಿಮಾ ವಿತರಕ ವೆಂಕಿ ಟ್ವೀಟ್ (X) ಮೂಲಕ ಮಾಹಿತಿ ನೀಡಿದ್ದಾರೆ.
ಶಾರುಖ್ ಖಾನ್ ಸಿನಿಮಾ 'ಡಂಕಿ' ಟಿಕೆಟ್‌ಗಳ ಖರೀದಿ ನಿಧಾನಗತಿಯಲ್ಲಿದೆ. ವಿತರಕ ವೆಂಕಿ ಪ್ರಕಾರ, ಸುಮಾರು 120 ಸ್ಥಳಗಳಲ್ಲಿ ಸುಮಾರು 350 ಶೋಗಳನ್ನು ಹಾಕಲಾಗಿದೆ. ಇಲ್ಲಿವರೆಗೂ ಕೇವಲ 30 ಟಿಕೆಟ್‌ಗಳು ಖರೀದಿಯಾಗಿವೆ ಎನ್ನಲಾಗಿದೆ. ಈ ಮೂಲಕ ಕೇವಲ 400 ಡಾಲರ್ ಹಣವನ್ನಷ್ಟೇ ಗಳಿಕೆ ಮಾಡಿದೆ ಎಂದು ವಿತರಕ ವೆಂಕಿ ಟ್ವೀಟ್ ಮಾಡಿದ್ದಾರೆ. ಸದ್ಯ ಅಮೆರಿಕದಲ್ಲಿ 'ಡಂಕಿ'ಗಿಂತ 'ಸಲಾರ್' ಶೇ.109 ಪಟ್ಟು ಹೆಚ್ಚು ಟಿಕೆಟ್ ಸೇಲ್ ಆಗಿದ್ದು, ಇನ್ನು 15 ದಿನಗಳಲ್ಲಿ ಏನಾದರೂ ಚಮತ್ಕಾರ ಮಾಡುತ್ತಾರಾ? ನೋಡಬೇಕಿದೆ.


Click it and Unblock the Notifications











