'ಅಜರ್' ಡೈಲಾಗ್ ಟೀಸರ್ ಸೂಪರ್ ಗುರೂ!
ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಜೀವನ ಆಧಾರಿತ ಚಿತ್ರ 'ಅಜರ್' ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ನಟ ಇಮ್ರಾನ್ ಹಶ್ಮಿ ಅವರು ಈಗ ಚಿತ್ರದ ಮೊದಲ ಟೀಸರ್ ಸೋಮವಾರ ಬಿಡುಗಡೆ ಮಾಡಿದ್ದಾರೆ.
ನಟ ಇಮ್ರಾನ್ ಹಶ್ಮಿ ಅವರು ನಾಯಕನಾಗಿ ಅಜರುದ್ದೀನ್ ಸ್ಟೈಲಿನಲ್ಲಿ ವಾಕ್ ಮಾಡುತ್ತಿರುವ ಚಿತ್ರ ನೋಡಿ ಥ್ರಿಲ್ ಆಗಿದ್ದ ಅಭಿಮಾನಿಗಳು ಈಗ ಟೀಸರ್ ನಲ್ಲಿ ಪಂಚಿಂಗ್ ಡೈಲಾಗ್ ವೊಂದನ್ನು ಕೇಳಿಸಿಕೊಳ್ಳುತ್ತಾರೆ. ಒಂದೇ ಝಲಕ್ ನಲ್ಲಿ ಚಿತ್ರದ ಆಶಯವನ್ನು ತೆರೆಡಿಡುವ ಪ್ರಯತ್ನ ಮಾಡಲಾಗಿದೆ. [ಅಜರ್ ಲುಕ್ ನಲ್ಲಿ ಇಮ್ರಾನ್ ಹಶ್ಮಿ ಮಿಂಚಿಂಗ್]
ಮೊಹಮ್ಮದ್ ಅಜರುದ್ದೀನ್ ಅವರ ಕ್ರಿಕೆಟ್ ಜೀವನದ ಏಳು ಬೀಳು, ವೃತ್ತಿ ಬದುಕು ಹಾಗೂ ವೈಯಕ್ತಿಕ ಜೀವನದ ನಡುವಿನ ಸಂಘರ್ಷಗಳನ್ನು ತೆರೆಯ ಮೇಲೆ ತರಲು ನಿರ್ದೇಶಕ ಟೋನಿ ಡಿಸೋಜಾ ಯತ್ನಿಸುತ್ತಿದ್ದಾರೆ.

ಪೆವಿಲಿಯನ್ ನಿಂದ ಪಿಚ್ ಕಡೆಗೆ ನಡೆದು ಬರುತ್ತಿರುವ ಅಜರುದ್ದೀನ್ ಚಿತ್ರದ ಪೋಸ್ಟರ್ ಭಾಗವೇ ಟೀಸರ್ ನಲ್ಲಿ ಮುಂದುವರೆದಿದೆ. ಕೈಗವಸು ಹಾಕಿಕೊಂಡು ಪೆವಿಲಿಯನ್ ನಿಂದ ಬರುವ ಅಜರುದ್ದೀನ್ ಅವರು ಹೇಳುವ ಡೈಲಾಗ್ ಈ ರೀತಿ ಅರ್ಥ ನೀಡುತ್ತದೆ.
'ನಾನು ಮೂರು ವಿಷಯಗಳಿಗೆ ಫೇಮಸ್ ... ದೇವರನ್ನು ನಂಬುತ್ತೇನೆ, ನನಗೆ ವೈವಾಹಿಕ ಜೀವನದಲ್ಲಿ ನಂಬಿಕೆ ಇದೆ...ನನ್ನ ಹೆಸರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಕಾಣಿಸಿಕೊಂಡಿದೆ.'
ಈ ರೀತಿ ಜನಪ್ರಿಯ ಆಟಗಾರನಾಗಿದ್ದ 'ಅಜರ್' ವೈಯಕ್ತಿಕ ಬದುಕಿನಂತೆ ವೃತ್ತಿ ಬದುಕಿನಲ್ಲಿ ಅನೇಕ ಬಿರುಗಾಳಿ ಬೀಸಿತು, ಮದುವೆ, ಮಕ್ಕಳು, ಎರಡನೇ ಅಫೇರ್, ಮಗನ ಮರಣ, ಮ್ಯಾಚ್ ಫಿಕ್ಸಿಂಗ್, ರಾಜಕೀಯಕ್ಕೆ ಎಂಟ್ರಿ ಎಲ್ಲವೂ ವರ್ಣಮಯ ಬದುಕಿನ ಪುಟಗಳನ್ನು ತೆರೆದಿಡುತ್ತದೆ.

ಅಥ್ಲೀಟ್ ಪಾನ್ ಸಿಂಗ್ ತೋಮರ್, ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಆಧಾರಿಸಿದ ಭಾಗ್ ಮಿಲ್ಕಾ ಭಾಗ್, ಬಾಕ್ಸರ್ ಮೇರಿ ಕೋಮ್ ಚಿತ್ರ, ಧ್ಯಾನ್‌ಚಂದ್, ಮಹೇಂದ್ರ ಸಿಂಗ್ ಧೋನಿ ಕುರಿತ ಚಿತ್ರಗಳ ಪಟ್ಟಿಗೆ ಅಜರ್ ಹೊಸದಾಗಿ ಸೇರ್ಪಡೆಯಾಗುತ್ತಿದೆ.ಅಜರುದ್ದೀನ್ ಅವರಂತೆ ಕಾಣಲು ಇಮ್ರಾನ್ ಹಶ್ಮಿ ಸಾಕಷ್ಟು ತಯಾರಿ ನಡೆಸಿದ್ದಾರೆ.
ಪ್ರಾಚಿ ದೇಸಾಯಿ ಅವರು ಅಜರ್ ಪತ್ನಿ ನೌರೀನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಜಾಕ್ವಲೀನ್ ಫರ್ನಾಂಡೀಸ್ ಅವರು ಸಂಗೀತಾ ಬಿಜಲಾನಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಭಾರಿ ಕುತೂಹಲ ಕೆರಳಿಸಿದೆ.


Click it and Unblock the Notifications











