Chris Gayle: "ಬಾಲಿವುಡ್ ನನ್ನನ್ನು ಕೈ ಬೀಸಿ ಕರೆಯುತ್ತಿದೆ" ಕ್ರಿಸ್ ಗೇಲ್.. ಹಿಂದಿ ಸಿನಿಮಾಗೆ ಯೂನಿವರ್ಸಲ್ ಬಾಸ್ ಎಂಟ್ರಿ?
ವೆಸ್ಟ್ ಇಂಡೀಸ್‌ನ ಸ್ಪೋಟಕ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಯಾರಿಗೆ ಗೊತ್ತಿಲ್ಲ. ಅದರಲ್ಲೂ ಐಪಿಎಲ್ ಶುರುವಾದಾಗಿನಿಂದ ಕ್ರಿಸ್ ಗೇಲ್ ಸಿಕ್ಕಾಪಟ್ಟೆ ಪಾಪುಲರ್ ಆಗಿದ್ದಾರೆ. ವೆಸ್ಟ್ ಇಂಡೀಸ್‌ಗಿಂತಲೂ ಹೆಚ್ಚಾಗಿ ಭಾರತದಲ್ಲಿಯೇ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.
ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆರಂಭಿಕ ಆಟಗಾರನಾಗಿ ಜನಪ್ರಿಯತೆಯನ್ನು ಗಳಿಸಿದ್ದರು. ಹಾಗಂತ ಕೇವಲ ಕ್ರಿಕೆಟ್ ಆಟಗಾರನಾಗಿ ಅಷ್ಟೇ ಅಲ್ಲ. ಕ್ರಿಕೆಟ್ ಮೈದಾನದಲ್ಲಿ ಎಂಟರ್‌ಟೈನರ್ ಆಗಿಯೂ ಪ್ರೇಕ್ಷಕರಿಗೆ ಮಿಂಚಿದ್ದರು.

ಕಳೆದ ಎರಡು ವರ್ಷಗಳಿಂದ ಕ್ರಿಸ್ ಗೇಲ್ ಕ್ರಿಕೆಟ್‌ನಿಂದ ದೂರವಿದ್ದಾರೆ. ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಹಾಗಂತ ಸುಮ್ಮನೆ ಕೂತಿಲ್ಲ. ತನ್ನ ಹೊಸ ಪ್ರತಿಭೆಯನ್ನು ಜಗತ್ತಿಗೆ ತೋರಿಸುವುದಕ್ಕೆ ಮುಂದಾಗಿದ್ದಾರೆ. ಸದ್ಯ ಕ್ರಿಸ್ ಗೇಲ್ ಹೊಸ ಮ್ಯೂಸಿಕ್ ಅಲ್ಬಮ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಗ್ರ್ಯಾಮಿಗೆ ಕ್ರಿಸ್ ಗೇಲ್ ಮ್ಯೂಸಿಕ್ ಅಲ್ಬಮ್ ಎಂಟ್ರಿ
ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಕ್ರಿಸ್ ಗೇಲ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ತನ್ನ ಸಂಗೀತ ಪ್ರತಿಭೆಯನ್ನು ಇಡೀ ಜಗತ್ತಿಗೆ ತೋರಿಸುವುದಕ್ಕೆ ಹೊರಟಿದ್ದಾರೆ. ಕ್ರಿಸ್ ಗೇಲ್ ಹೊಸ ಅಲ್ಬಮ್ 'ಟ್ರಾಪಿಕಲ್ ಹೌಸ್ - ಕ್ರೂಸಸ್ ಟು ಜಮೈಕಾ' ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. 2024 ಗ್ರ್ಯಾಮಿ ಅವಾರ್ಡ್‌ಗೆ 'ಟ್ರಾಪಿಕಲ್ ಹೌಸ್ - ಕ್ರೂಸಸ್ ಟು ಜಮೈಕಾ' ಮ್ಯೂಸಿಕ್ ಅಲ್ಬಮ್ ಅನ್ನು ಕಳುಹಿಸಿಕೊಡಲಾಗಿದೆ. ಈ ಬಗ್ಗೆನೇ ಈಗ ಸುದ್ದಿಯಾಗುತ್ತಿದೆ. ಈ ಮಧ್ಯೆ ಕ್ರಿಸ್ ಗೇಲ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಅಂತಾನೂ ಸುದ್ದಿಯಾಗುತ್ತಿದೆ.
"ಬಾಲಿವುಡ್ ಕೈ ಬೀಸಿ ಕರೆಯುತ್ತಿದೆ"
ಕ್ರಿಸ್ ಗೇಲ್ ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ ಸಂಗೀತದ ಕಡೆ ವಾಲಿದ್ದರು. ಈ ವೇಳೆ ಮ್ಯೂಸಿಕ್‌ನಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಸದ್ಯ ಅವರ ಮ್ಯೂಸಿಕಲ್ ಆಲ್ಬಮ್ ಸದ್ದು ಮಾಡುತ್ತಿದೆ. ಇದೇ ವೇಳೆ ಬಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ಸುಳಿವು ನೀಡಿದ್ದಾರೆ. "ಬಾಲಿವುಡ್ ನನ್ನನ್ನು ಕೈ ಬೀಸಿ ಕರೆಯುತ್ತಿದೆ. ಇತ್ತೀಚೆಗೆ ನಾನು ಬಾಲಿವುಡ್ ಚಿತ್ರರಂಗಕ್ಕೆ ತುಂಬಾನೇ ಹತ್ತಿರವಾಗಿದ್ದೇನೆ." ಎಂದು ಇಂಡಿಯಾ ಟುಡೇಗೆ ಕ್ರಿಸ್ ಗೇಲ್ ಹೇಳಿಕೆ ಕೊಟ್ಟಿದ್ದಾರೆ.

ಜಾಹೀರಾತಿನಲ್ಲೂ ಕ್ರಿಸ್ ಗೇಲ್ ನಟನೆ
ಬಾಲಿವುಡ್ ನನ್ನನ್ನು ಕೈ ಬೀಸಿ ಕರೆಯುತ್ತಿದೆ ಎಂದು ಹೇಳುವ ಮೂಲಕ ಹಿಂದಿ ಚಿತ್ರರಂಗಕ್ಕೆ ಯಾವಾಗ ಬೇಕಾದರೂ ಎಂಟ್ರಿಕೊಡಬಹುದು ಎಂಬ ಸುಳಿವನ್ನು ನೀಡಿದ್ದಾರೆ. ಈ ಮಧ್ಯೆ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಬಾಲಿವುಡ್ ನಟನ ಜೊತೆ ಜಾಹೀರಾತಿನಲ್ಲೂ ನಟಿಸಿದ್ದಾರೆ. ಭಾರತದಲ್ಲಿ ಕ್ರಿಸ್ ಗೇಲ್‌ಗೆ ಅತೀ ಹೆಚ್ಚು ಅಭಿಮಾನಿಗಳು ಇರುವುದರಿಂದ ಸಿನಿಮಾಗೆ ಯಾವಾಗ ಬೇಕಾದರೂ ಎಂಟ್ರಿ ಕೊಡುವ ಸಾಧ್ಯತೆಯಿದೆ.
ಕ್ರಿಸ್ ಗೇಲ್‌ಗೆ 'ಭಾರತ' ಎರಡನೇ ಮನೆ
ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ಮೂಲದವರೇ ಆಗಿದ್ದರೂ, ಭಾರತದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇದೆ. ಹೀಗಾಗಿ ಕ್ರಿಕೆಟ್‌ನಿಂದ ದೂರವಿದ್ದರೂ, ಭಾರತದೊಂದಿಗಿನ ನಂಟನ್ನು ಬಿಟ್ಟಿಲ್ಲ. ಐಪಿಎಲ್ ಫ್ರಾಂಚೈಸಿ ಆರ್‌ಸಿಬಿಯಿಂದಲೇ ಸುಮಾರು 3 ಸಾವಿರ ರನ್ ಗಳಿಸಿರೋ ಕ್ರಿಸ್ ಗೇಲ್ ಈಗ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುವುದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











