"ಆರೋಗ್ಯ ಹದಗೆಡಿಸುವ ಬಿಸ್ಕೆಟ್ ಜಾಹೀರಾತಿನಲ್ಲಿ ನಟಿಸಬೇಡಿ": ಅಮಿತಾಬ್‌ಗೆ ವೈದ್ಯರಿಂದ ಮತ್ತೊಂದು ಪತ್ರ!
ಸೆಲೆಬ್ರೆಟಿಗಳು ಹಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಆಹಾರಕ್ಕೆ ಸಂಬಂಧಪಟ್ಟ ಜಾಹೀರಾತುಗಳೇ ಅಧಿಕ. ಬಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕೂಡ ತಿನಿಸುಗಳಿಗೆ ಸಂಬಂಧಿಸಿದ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಬಿಸ್ಕೆಟ್ ಜಾಹೀರಾತು ಕೂಡ ಒಂದು.
ಈ ಸಂಬಂಧ ಸ್ವತಂತ್ರ ವೈದ್ಯಕೀಯ ತಜ್ಞರು, ಮಕ್ಕಳ ವೈದ್ಯರು ಹಾಗೂ ಪೌಷ್ಠಿಕ ತಜ್ಞರು ಅಮಿತಾಬ್ ಬಚ್ಚನ್‌ಗೆ ಅನಾರೋಗ್ಯಕರ ಬಿಸ್ಕೆಟ್ ಜಾಹೀರಾತಿನಲ್ಲಿ ನಟಿಸದೆ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಸ್ವತಂತ್ರ ವೈದ್ಯಕೀಯ ತಜ್ಞರು, ಮಕ್ಕಳ ಡಾಕ್ಟರ್ ಹಾಗೂ ಪೌಷ್ಠಿಕ ತಜ್ಞರ ನ್ಯೂಟ್ರಿಷನ್ ಅಡ್ವೋಕಸಿ ಇನ್ ಪಬ್ಲಿಕ್ ಇಂಟರೆಸ್ಟ್ ಇಂಡಿಯಾ ಸಂಸ್ಥೆ ಬಾಲಿವುಡ್ ಬಿಗ್ ಬಿಗೆ ಪತ್ರದ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

ಬಿಸ್ಕೆಟ್ ಜಾಹೀರಾತಿನಲ್ಲಿ ನಟಿಸದಂತೆ ಪತ್ರ
ಅಮಿತಾಬ್ ಬಚ್ಚನ್ ಬಿಸ್ಕೆಟ್ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಹೀಗಾಗಿ NAPi ಸಂಸ್ಥೆ ಎರಡನೇ ಬಾರಿಗೆ ಪತ್ರವನ್ನು ಬರೆದಿದ್ದಾರೆ. ಬಿಸ್ಕೆಟ್ ಜಾಹೀರಾತಿನಲ್ಲಿ ನಟಿಸಬೇಡಿ. ಇವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಅಲ್ಟ್ರಾ ಪ್ರೋಸೆಸ್ಡ್ ಆಹಾರವನ್ನೂ ಸಹ ಭವಿಷ್ಯದಲ್ಲಿ ಪ್ರಚಾರ ಮಾಡಬೇಡಿ ಎಂದು ಆ ಪತ್ರದಲ್ಲಿ ಹೇಳಿದ್ದಾರೆ.

ಬಿಗ್ ಬಿಗೆ ಪತ್ರದಲ್ಲಿ ಏನಿದೆ?
ಡಿಸೆಂಬರ್ 28ರಂದು 'ಬ್ರಿಟಾನಿಯ ಮಿಲ್ಕ್ ನಿಕಿಸ್' ಉತ್ಪನ್ನವನ್ನು ಪ್ರಮೋಟ್ ಮಾಡುತ್ತಿರುವ ಸಲುವಾಗಿ ಇದೇ ತಂಡ ಮೊದಲನೇ ಬಾರಿಗೆ ಪತ್ರವನ್ನು ಬರೆದು ಮನವಿಯನ್ನು ಮಾಡಿಕೊಂಡಿತ್ತು. ಈಗ ಮತ್ತೊಂದು ಪತ್ರವನ್ನು ಬರೆದಿದೆ. "NAPi ನಿಮ್ಮ ಬಳಿ ಮನವಿ ಮಾಡಿಕೊಳ್ಳುವುದೇನೆಂದರೆ, ಮುಂದಿನ ದಿನಗಳಲ್ಲಿಇವುಗಳನ್ನೂ ತಿರಸ್ಕರಿಸಿ. ಅಲ್ಟ್ರಾ ಪ್ರೋಸಸ್ಟ್ ಆಹಾರದ ಉತ್ಪನ್ನ ಅಥವಾ ಕೊಬ್ಬು/ಸಕ್ಕರೆ ಮತ್ತು ಉಪ್ಪು ಇರುವ ಉತ್ಪನ್ನದ ಜಾಹೀರಾತುಗಳಲ್ಲಿ ನಟಿಸಬೇಡಿ" ಎಂದು ಜನವರಿ 11ರಂದು ಮತ್ತೊಂದು ಪತ್ರವನ್ನು ಬರೆದಿದೆ.

ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳಿ
ಇಷ್ಟೇ ಅಲ್ಲದೆ, ಅಲ್ಟ್ರಾ ಪ್ರೊಸೆಸ್ಡ್ ಆಹಾರ ಉತ್ಪನ್ನಗಳು ಏಕೆ ಹಾನಿಕಾರಕ ಅನ್ನೋ ಮಾಹಿತಿಯನ್ನು ಪತ್ರದಲ್ಲಿ ಲಗತ್ತಿಸಲಾಗಿದೆ. "ಸರಳವಾಗಿ ಹೇಳುವುದಾದರೆ, ಶೇ.10ಕ್ಕಿಂತ ಹೆಚ್ಚು ಸಕ್ಕರೆ ಅಥವಾ ಸ್ಯಾಚುರೇಟೆಡ್ ಕೊಬ್ಬು ಇರುವ ಆಹಾರ ಉತ್ಪನ್ನ HFSS ಎಂದು ಪರಿಗಣಿಸಲಾಗುತ್ತೆ. ವ್ಯಕ್ತಿಯ ಆರೋಗ್ಯಕ್ಕೆ ಹಾನಿಕಾರಕ ಎನಿಸುವ ಉತ್ಪನ್ನದ ಜಾಹೀರಾತಿನಲ್ಲಿ ನಟಿಸಬೇಕಾ? ಬೇಡ್ವಾ? ಅನ್ನೋ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳಿ" ಎಂದು ಪತ್ರದಲ್ಲಿ ಬರೆಯಲಾಗಿದೆ.

ಬಿಗ್ ಬಿ ಕೈ ಬಿಟ್ಟ ಜಾಹೀರಾತುಗಳ್ಯಾವುವು?
ಅಮಿತಾಬ್ ಬಚ್ಚನ್ ಈಗಾಗಲೇ ಎರಡು ಮೂರು ರಾಷ್ಟಮಟ್ಟದ ಜಾಹೀರಾತುಗಳನ್ನು ಕೈ ಬಿಟ್ಟಿದ್ದಾರೆ.2014ರಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋ ಕಾರಣಕ್ಕೆ ಪೆಪ್ಸಿ ತಂಪು ಪಾನೀಯ ಜಾಹೀರಾತಿನಿಂದ ಹಿಂದೆ ಸರಿದಿದ್ದರು. ಹಾಗೇ 2018ರಲ್ಲಿ ಹಾರ್ಲಿಕ್ಸ್ ಜಾಹೀರಾತಿನಲ್ಲಿ ನಟಿಸುವುದಕ್ಕೂ ಬ್ರೇಕ್ ಹಾಕಿದ್ದರು.


Click it and Unblock the Notifications











