'ಧುರಂಧರ್ 2' ನೋಡಿ ಮೆಚ್ಚಿಕೊಂಡರೇ ಶಾರುಖ್? ಸೋಶಿಯಲ್ ಮೀಡಿಯಾ ಪೋಸ್ಟ್‌ನ ಅಸಲಿಯತ್ತೇನು?
ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್ ಸಿನಿಮಾ 'ಧುರಂಧರ್: ದಿ ರಿವೇಂಜ್' (Dhurandhar 2) ಭಾರತದಾದ್ಯಂತ ಸಂಚಲನವನ್ನು ಸೃಷ್ಟಿಸುತ್ತಿದೆ. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಈ ಸಿನಿಮಾ ನೋಡಿದವರು ನಿರ್ದೇಶಕ ಆದಿತ್ಯ ಧರ್ ಹಾಗೂ ರಣ್‌ವೀರ್ ಸಿಂಗ್ ಇಬ್ಬರನ್ನು ಹಾಡಿ ಹೊಗಳುತ್ತಿದ್ದಾರೆ. ಇವರಷ್ಟೇ ಅಲ್ಲ, ಸೆಲೆಬ್ರೆಟಿಗಳು ಕೂಡ 'ಧುರಂಧರ್ 2' ಸಿನಿಮಾ ನೋಡಿ ಕಳೆದೇ ಹೋಗಿದ್ದಾರೆ.
ಬಾಲಿವುಡ್, ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ನಟರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲು ಅರ್ಜುನ್, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು, ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ 'ಧುರಂಧರ್ 2' ಸಿನಿಮಾವನ್ನು ಹಾಡಿಹೊಗಳಿದ್ದರು. ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣುದೇಸಾಯಿ ಕೂಡ ಪ್ರತಿಕ್ರಿಯೆ ನೀಡಿದ್ದರು. ಇದೇ ಬೆನ್ನಲ್ಲೇ ಈಗ ಶಾರುಖ್ ಖಾನ್ ಕೂಡ 'ಧುರಂಧರ್ 2' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಈಗಾಗಲೇ ಶಾರುಖ್ ಖಾನ್ ಮೆಚ್ಚಿಕೊಂಡಿರುವ ಪೋಸ್ಟ್ ಅನ್ನು ಶೇರ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲಿ ಶಾರುಖ್ 'ಧುರಂಧರ್ 2' ನಟ ರಣ್‌ವೀರ್ ಸಿಂಗ್, ಆದಿತ್ಯ ಧರ್ ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಪೋಸ್ಟ್ ಅನ್ನು ನೋಡಿ ಕೊನೆಗೂ ಶಾರುಖ್ ಖಾನ್ ಸಿನಿಮಾ ಬಗ್ಗೆ ಮಾತಾಡಿದ್ದಾರೆಂದು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಸಲಿಗೆ ಈ ಪೋಸ್ಟ್‌ನ ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.
'ಧುರಂಧರ್ 2'ಗೆ ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಬೆನ್ನಲ್ಲೇ ಶಾರುಖ್ ಖಾನ್ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿದೆ. ಇದರಲ್ಲಿ ಶಾರುಖ್ ಖಾನ್ 'ಧುರಂಧರ್ 2' ಅನ್ನು "ಈ ಸಿನಿಮಾ ಹೆಮ್ಮ ಹಾಗೂ ಪವರ್‌ನಿಂದ ಕೂಡಿದೆ" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ನಿರ್ದೇಶಕ ಆದಿತ್ಯ ಧರ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಆದರೆ, ಶಾರುಖ್ ಖಾನ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅದು ಶಾರುಖ್ ಮಾಡಿದ ಪೋಸ್ಟ್ ಅಲ್ಲ. ಅದು ಫೇಕ್ ಪೋಸ್ಟ್ ಎಂದು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಶಾರುಖ್ ಖಾನ್ ಅವರ ಯಾವುದೇ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪೋಸ್ಟ್ ಶೇರ್ ಆಗಿಲ್ಲ. ಹೀಗಾಗಿ ಕೆಲ ನೆಟ್ಟಿಗರು ಗೊಂದಲಕ್ಕೆ ಬಿದ್ದಿದ್ದಾರೆ. ಈ ಪೋಸ್ಟ್ ಎಲ್ಲಿಂದ ಬಂತು ಅಂತ ತಲೆ ಕೆಡಿಸಿಕೊಂಡಿದ್ದಾರೆ.

ಅಸಲಿಗೆ ಈ ಪೋಸ್ಟ್‌ನಲ್ಲಿ ಏನಿದೆ ಅಂತ ನೋಡುವುದಾರೇ, "ಈಗ ತಾನೇ ಧುರಂಧರ್ 2 ಸಿನಿಮಾವನ್ನು ನೋಡಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ನಿಮ್ಮೊಂದಿಗೆ ಉಳಿದುಕೊಳ್ಳುತ್ತೆ. ಈ ಸಿನಿಮಾ ಹೆಮ್ಮೆ ಹಾಗೂ ಪವರ್‌ನಿಂದ ಕೂಡಿದೆ. ಪ್ರತಿಯೊಂದು ಸನ್ನಿವೇಶವು ನೇರವಾಗಿ ನಿಮ್ಮ ಹೃದಯಕ್ಕೆ ನಾಟುತ್ತದೆ. ಅದ್ಭುತ ನಟನೆ, ದುಬಾರಿ ಮೊತ್ತ ಹಾಗೂ ಕತೆ ಹೇಳುವ ವಿವಾದನ ಪ್ರತಿಯೊಂದು ಹಂತದಲ್ಲಿಯೂ ನಿಮ್ಮನ್ನು ಕಾಡುತ್ತದೆ. ರಣ್‌ವೀರ್ ಸಿಂಗ್, ಅರ್ಜುನ್ ರಾಮ್‌ಪಾಲ್ ಎಮೋಷನ್, ಇಡೀ ತಂಡಕ್ಕೆ ನನ್ನ ಬಿಗ್ ಲವ್. ಮುಂದೊಂದು ದಿನ ಆದಿತ್ಯ ಧರ್ ನನಗೆ ಸಿನಿಮಾವನ್ನು ಆಫರ್ ಮಾಡುತ್ತಾರೆಂದು ಭಾವಿಸಿದ್ದೇನೆ. ಅವರೊಂದಿಗೆ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ" ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.
ಈ ಪೋಸ್ಟ್ ಎಕ್ಸ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಅಖಾಡಕ್ಕೆ ಇಳಿದು. ಫೇಕ್ ಪೋಸ್ಟ್ ಆಗಿದ್ದು, ಶಾರುಖ್ ಖಾನ್ ಇಂತಹ ಯಾವುದೇ ಪೋಸ್ಟ್ ಅನ್ನು ಮಾಡಿಲ್ಲ ಎಂದು ಕಾಮೆಂಟ್‌ಗಳನ್ನು ಹಾಕಿದ್ದಾರೆ. ಶಾರುಖ್ ಖಾನ್ ಇದೂವರೆಗೂ ಸಾರ್ವಜನಿಕವಾಗಿ 'ಧುರಂಧರ್ 2' ಸಿನಿಮಾ ಬಗ್ಗೆ ಹೇಳಿಕೆಗಳನ್ನು ಕೊಟ್ಟಿಲ್ಲ. ಆದರೆ, ಈ ಸಿನಿಮಾವನ್ನು ನೋಡಿದ್ದಾರಾ? ಎನ್ನುವ ಬಗ್ಗೆನೂ ಗೊತ್ತಿಲ್ಲ.


Click it and Unblock the Notifications















