ಈಗ ನಿಮ್ಮ ವರ್ಕೌಟ್ ವಿಡಿಯೋ ಎಲ್ಲ ಬೇಕಾ? 'ಸ್ಟಾರ್'ಗಳಿಗೆ ಛಡಿಯೇಟು ಕೊಟ್ಟ ನಿರ್ದೇಶಕಿ: ವಿಡಿಯೋ
ಚಿತ್ರೀಕರಣವಿಲ್ಲ, ಸಿನಿಮಾ ಬಿಡುಗಡೆ ಇಲ್ಲ, ಇತರೆ ಕಾರ್ಯಕ್ರಮಗಳೂ ಇಲ್ಲ. ದೇಶವೇ ಲಾಕ್‌ಡೌನ್ ಆಗಿದೆ. ಹೀಗಿರುವಾಗ ಸೆಲೆಬ್ರಿಟಿಗಳು ಏನು ಮಾಡುತ್ತಿದ್ದಾರೆ? ಒಂದಷ್ಟು ಜನರು ಮನೆಯವರೊಂದಿಗೆ ಹರಟುವ, ಆಡುತ್ತಾ ಕಾಲ ಕಳೆಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಅನೇಕ ಸೆಲೆಬ್ರಿಟಿಗಳು ಮನೆಯಲ್ಲಿ ಕಸ ಗುಡಿಸುವ, ಪಾತ್ರೆ ತೊಳೆಯುವ ವಿಡಿಯೋಗಳನ್ನು ಹಾಕಿಕೊಂಡು ಪೋಸ್ ನೀಡುತ್ತಿದ್ದಾರೆ.
ಕತ್ರಿನಾ ಕೈಫ್, ಅಲಿಯಾ ಭಟ್, ಅನಿಲ್ ಕಪೂರ್, ರಕೂಲ್ ಪ್ರೀತ್ ಸಿಂಗ್, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ನಿರಂತರವಾಗಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ತೀವ್ರ ಕಸರತ್ತು ಮಾಡುವ ವರ್ಕೌಟ್ ವಿಡಿಯೋಗಳನ್ನು ಕೂಡ ಶೇರ್ ಮಾಡುತ್ತಿದ್ದಾರೆ. ಅಂತಹವರಿಗೆ ಖ್ಯಾತ ನಿರ್ದೇಶಕಿ ಫರಾಹ್ ಖಾನ್ ತಪರಾಕಿ ನೀಡಿದ್ದಾರೆ.

ಈಗ ಇದೆಲ್ಲಾ ಬೇಕಾ?
ಕೊರೊನಾ ವೈರಸ್ ಭೀತಿಯ ನಡುವೆ ಮನೆಯಲ್ಲಿಯೇ ಇದ್ದು ವರ್ಕೌಟ್ ಮಾಡುವ ಫೋಟೊ ಹಾಗೂ ವಿಡಿಯೋಗಳನ್ನು ಹಾಕುವ ಸೆಲೆಬ್ರಿಟಿಗಳನ್ನು ನಿರ್ದೇಶಕಿ ಫರಾಹ್ ಖಾನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಡೀ ದೇಶ ಸಂಕಷ್ಟದಲ್ಲಿ ಇರುವಾಗ ಇದೆಲ್ಲಾ ಬೇಕಾ? ಎಂದು ಕಿಡಿಕಾರಿದ್ದಾರೆ.

ಫರಾಹ್ ಖಾನ್ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿರುವ ಫರಾಹ್, ತಮ್ಮ ವಿಡಿಯೋಕ್ಕೆ 'ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಹಿತಾಸಕ್ತಿಯ ದೃಷ್ಟಿಯಿಂದ' ಎಂಬ ಸಮಜಾಯಿಷಿ ನೀಡಿದ್ದಾರೆ. ಎಲ್ಲರೂ ವಿಡಿಯೋ ಮಾಡುತ್ತಿದ್ದಾರೆ. ಈ ಕಾರಣಕ್ಕೆ ನಾನೂ ವಿಡಿಯೋ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ವಿಡಿಯೋ ಮಾಡುವುದನ್ನು ನಿಲ್ಲಿಸಿ
ಎಲ್ಲ ಸೆಲೆಬ್ರಿಟಿಗಳಿಗೂ ಮತ್ತು 'ಸ್ಟಾರ್'ಗಳಿಗೂ ನನ್ನ ವಿನಮ್ರ ಕೋರಿಕೆ, ದಯವಿಟ್ಟು ನಿಮ್ಮ ವರ್ಕೌಟ್ ವಿಡಿಯೋಗಳನ್ನು ಮಾಡುವುದನ್ನು ಹಾಗೂ ಅವುಗಳನ್ನು ನಮ್ಮ ಮೇಲೆ ಬಾಂಬ್ ರೀತಿ ಎಸೆಯುವುದನ್ನು ನಿಲ್ಲಿಸಿ ಎಂದು ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.

ನೀವೆಲ್ಲ ವಿಶೇಷ ವ್ಯಕ್ತಿಗಳೆಂದು ಗೊತ್ತು
'ನೀವೆಲ್ಲರೂ ವಿಶೇಷ ವ್ಯಕ್ತಿಗಳು ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈಗ ಜಾಗತಿಕ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಫಿಗರ್‌ಗಳನ್ನು ನೋಡಿಕೊಳ್ಳುವುದರ ಹೊರತಾಗಿ ನಿಮಗೆ ಬೇರೆ ಚಿಂತೆ ಇಲ್ಲ ಎನ್ನುವುದು ಗೊತ್ತು. ಆದರೆ ನಮ್ಮಲ್ಲಿ ಕೆಲವರಿಗೆ, ಅನೇಕರಿಗೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹಳ ಕಳವಳಗಳಿವೆ' ಎಂದು ಚಾಟಿ ಬೀಸಿದ್ದಾರೆ.


Click it and Unblock the Notifications











