'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಬಗ್ಗೆ ಕೇಳಿದಾಗಲೂ ಮೌನಿಯಾಗಿದ್ದ ಮಾಜಿ ಪ್ರಧಾನಿ; ನಗುವಿನಲ್ಲೇ ಇತ್ತು ಉತ್ತರ!
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. 2004ರಿಂದ 2014ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮನಮೋಹನ್ ಸಿಂಗ್ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು (ಡಿಸೆಂಬರ್ 26) ರಾತ್ರಿ 8 ಗಂಟೆ ಸುಮಾರಿಗೆ ದಿಢೀರನೇ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಮ್ಸ್ ವೈದ್ಯರ ಶತ ಪ್ರಯತ್ನದ ಹೊರತಾಗಿಯೂ ಮನಮೋಹನ್ ಸಿಂಗ್ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ರಾತ್ರಿ ಸುಮಾರು 9.51ರ ಸುಮಾರಿಗೆ ಮನಮೋಹನ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ.

ಮನಮೋಹನ್ ಸಿಂಗ್ ಭಾರತದ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರು. ಆರ್ಥಿಕ ತಜ್ಞರೂ ಕೂಡ ಆಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಆಡಳಿತಾವಧಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದರು. ಆದರೂ, ಮನಮೋಹನ್ ಸಿಂಗ್ ಅವರನ್ನು ಟೀಕೆ ಮಾಡುವವರಿಗೇನು ಕಮ್ಮಿಯಿಲ್ಲ. ಅವರ ಮೌನವನ್ನು, ಮೃದು ಸ್ವಭಾವ ಸಾಕಷ್ಟು ಬಾರಿ ಟೀಕೆಗೆ ಗುರಿಯಾಗಿತ್ತು.
ರಾಜಕೀಯ ದಿಗ್ಗಜ ಮನಮೋಹನ್ ಸಿಂಗ್ ಅವರು ಎರಡು ಪ್ರಧಾನಿಯಾಗಿದ್ದನ್ನೂ ಟೀಕಿಸುವವರಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ನೆರಳು ಎಂದು ಜರಿದಿದ್ದೂ ಇದೆ. 2019ರಲ್ಲಿ ಬಾಲಿವುಡ್‌ನಲ್ಲಿ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಅನ್ನುವ ಸಿನಿಮಾ ಕೂಡ ನಿರ್ಮಿಸಿ ಬಿಡುಗಡೆ ಮಾಡಲಾಗಿದೆ. ಮನಮೋಹನ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ನಟಿಸಿದ್ದರು.
'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಈ ಸಿನಿಮಾ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಮಾಜಿ ಪ್ರಧಾನಿಗಳ ಬಳಿಕ ಪ್ರತಿಕ್ರಿಯೆ ಕೇಳುವುದಕ್ಕೆ ಪತ್ರಕರ್ತರು ಮುಂದಾಗಿದ್ದರು. ಆದರೆ, ಮನಮೋಹನ್ ಸಿಂಗ್ ಆ ಕ್ಷಣ ಪ್ರತಿಕ್ರಿಯೆ ನೀಡದ ಮೌನಕ್ಕೆ ಶರಣಾಗಿದ್ದರು. ಚಿಕ್ಕದೊಂದು ನಗೆಯನ್ನು ಬೀರಿ ಅಲ್ಲಿಂದ ತೆರಳಿದ್ದರು. ಆ ವಿಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವಿರೋಧ ಪಕ್ಷದವರು ಮನಮೋಹನ್ ಸಿಂಗ್ ಅವರನ್ನು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದಾರೆಂದು ಟೀಕೆ ಮಾಡುತ್ತಲೇ ಇದ್ದರು. ಆದರೆ, ಅದೆಲ್ಲದಕ್ಕೂ ತಲೆಯನ್ನು ಕೆಡಿಸಿಕೊಳ್ಳದ ಮನಮೋಹನ್ ಸಿಂಗ್ ಎರಡು ಅವಧಿಗೆ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ಪ್ರಧಾನಿ ಪಟ್ಟದಿಂದ ಕೆಳಗೆ ಇಳಿದ ಬಳಿಕ ರಾಜಕಾರಣದಲ್ಲಿ ಹೆಚ್ಚು ಆಕ್ಟಿವ್ ಆಗಿರಲಿಲ್ಲ. ಆಕಸ್ಮಿಕ ಪ್ರಧಾನಿ ಅನ್ನೋ ಟೀಕೆ ಅವರಿಗೆ ಹೊಸದೇನು ಆಗಿರಲಿಲ್ಲ. ಹಾಗೇ ಸಿನಿಮಾ ಬಗ್ಗೆನೂ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.
ಅದೇ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ದೇಶಾದ್ಯಂತ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ ವಿರೋಧ ವ್ಯಕ್ತವಾಗಿತ್ತು. ಕೆಲವೆಡೆ ಪ್ರತಿಭಟನೆಗಳು ನಡೆದವು. ಹೀಗಿದ್ದರೂ ಮಾಜಿ ಪ್ರಧಾನಿ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ಮಾಧ್ಯಮ ಪ್ರತಿಕ್ರಿಯೆ ಪಡೆಯುವುದಕ್ಕೆ ಪ್ರಯತ್ನಿಸಿದಾಗಲೂ ಕಿರುನಗೆ ಬೀರಿ ಉತ್ತರ ಕೊಡದೆ ತೆರಳಿದ್ದರು. ಸಭ್ಯತೆ, ಶಿಸ್ತು, ಮುಂದಾಲೋಚನೆಯಿಂದಲೇ ಜನಮೆಚ್ಚುಗೆ ಪಡೆದಿದ್ದ ಮನಮೋಹನ್ ಸಿಂಗ್ ಇನ್ನು ನೆನೆಪು ಮಾತ್ರ.


Click it and Unblock the Notifications











