Govinda Divorce:37 ವರ್ಷಗಳ ದಾಂಪತ್ಯಕ್ಕೆ ಬಾಲಿವುಡ್ ನಟ ಗೋವಿಂದ ಅಂತ್ಯ? ಮ್ಯಾನೇಜರ್ ಹೇಳಿದ್ದೇನು?
ಬಾಲಿವುಡ್‌ನ ಮತ್ತೊಂದು ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ನಟಿ ಗೋವಿಂದ ಹಾಗೂ ಪತ್ನಿ ಸುನಿತಾ ಅಹುಜಾ ಇಬ್ಬರೂ ತಮ್ಮ 37 ವರ್ಷ ವೈವಾಹಿಕ ಜೀವನಕ್ಕೆ ಅಂತ್ಯ ಹಾಡುವುದಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪತ್ನಿ ಸುನಿತಾ ಅಹುಜಾ ಅವರಿಂದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಆಗಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಸುದ್ದಿ.
ಬಾಲಿವುಡ್ ಜನಪ್ರಿಯ ನಟ ಗೋವಿಂದ ಸಿನಿಮಾ ಬಳಿಕ ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕೆಲಸದ ನಿಮಿತ್ತ ಹೆಚ್ಚಾಗಿ ಕುಟುಂಬದಿಂದ ದೂರವೇ ಉಳಿದಿದ್ದರು. ಅಲ್ಲದೆ ಕಳೆದ ಕೆಲವು ದಿನಗಳಿಂದ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಅದೆಲ್ಲವೂ ಇಬ್ಬರ ವಿಚ್ಛೇದನಕ್ಕೆ ಪುಷ್ಠಿ ನೀಡಿದಂತಿದೆ.

ಗೋವಿಂದ ಹಾಗೂ ಸುನಿತಾ ಅಹುಜಾ ಅವರ ನಡುವೆ ಕೆಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ. ಇಬ್ಬರ ಲೈಫ್ ಸ್ಟೈಲ್ ಬದಲಾಗಿದ್ದು, ಗೋವಿಂದ ಕುಟುಂಬದಿಂದ ದೂರವೇ ಉಳಿದುಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹಾಗೇ ಸಂದರ್ಶನವೊಂದರಲ್ಲಿ ಸುನಿತಾ ಅಹುಜಾ ತಮ್ಮ ಪತಿ ಪ್ರತ್ಯೇಕವಾಗಿ ವಾಸ ಮಾಡುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಕೆಲವು ದಿನಗಳ ಹಿಂದೆ ಸುನಿತಾ ಅಹುಜಾ ಸಂದರ್ಶನವೊಂದನ್ನು ನೀಡಿದ್ದರು. ಹಿಂದಿ ರಶ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ದಾಂಪತ್ಯದ ಬಗ್ಗೆ ಹೇಳಿಕೊಂಡಿದ್ದರು. "ನಮ್ಮ ಬಳಿಕ ಎರಡು ಮನೆಗಳಿವೆ. ನಮ್ಮ ಅಪಾರ್ಟ್‌ಮೆಂಟ್ ಎದುರು ಬಂಗಲೆಯಿದೆ. ಗೋವಿಂದಾಗೆ ಮಾತಾಡುವುದಕ್ಕೆ ಹೆಚ್ಚು ಇಷ್ಟ ಹೀಗಾಗಿ ಅವರು 10 ಜನರನ್ನು ಗುಡ್ಡೆ ಹಾಕಿಕೊಂಡು ಮಾತಾಡುತ್ತಾ ಇರುತ್ತಾರೆ. ಇತ್ತ ನಾನು, ನನ್ನ ಮಗ ಹಾಗೂ ನನ್ನ ಮಗಳು ಒಟ್ಟಿಗೆ ಇದ್ದೇವೆ. ನಾವಿಬ್ಬರೂ ಅಪರೂಪಕ್ಕೆಂದು ಮಾತಾಡುತ್ತೇವೆ. ಮಾತನಾಡುವುದಕ್ಕೆ ಹೆಚ್ಚು ಎನರ್ಜಿಯನ್ನು ಕಳೆಯುವುದು ನನಗೆ ಇಷ್ಟವಿಲ್ಲ." ಎಂದು ಸುನಿತಾ ಅಹುಜಾ ಹೇಳಿದ್ದರು.
ಇದೇ ಸಂದರ್ಶನದಲ್ಲಿ ಸುನಿತಾ ಮುಂದಿನ ಜನ್ಮದಲ್ಲಿ ನಿನ್ನಂಥ ಗಂಡ ಬೇಡ ಎಂದಿದ್ದರು. "ನಾನು ಗೋವಿಂದಗೆ ಹೇಳಿದ್ದೇನೆ. ಮುಂದಿನ ಜನ್ಮದಲ್ಲಿ ನೀನು ಗಂಡನಾಗಿ ಬರಬೇಡ ಎಂದಿದ್ದೇನೆ. ಅವರು ಹಾಲಿಡೇಗೆ ಹೋಗುವುದಿಲ್ಲ. ಆದರೆ, ನನಗೆ ಗಂಡನೊಂದಿಗೆ ಹೊರಗೆ ಹೋಗಬೇಕು. ರಸ್ತೆಯಲ್ಲಿ ನಿಂತು ಪಾನಿ ಪುರಿ ತಿನ್ನಬೇಕು ಅನ್ನೋ ಆಸೆ. ಅವರು ಕೆಲಸಕ್ಕೆ ಹೆಚ್ಚು ಸಮಯವನ್ನು ಮೀಸಲಿಡುತ್ತಾರೆ. ನಾವು ಸಿನಿಮಾ ನೋಡುವುದಕ್ಕೆ ಹೋದ ನೆನೆಪುಗಳೇ ಇಲ್ಲ" ಎಂದು ಆ ಸಂದರ್ಶನದಲ್ಲಿ ಹೇಳಿದ್ದರು.
ಈಗ ವಿಚ್ಛೇದನಕ್ಕೆ ಮುಂದಾಗಿರುವುದು ಇದೇ ಕಾರಣಕ್ಕೆ ಇರಬಹುದು ಎಂಬ ಚರ್ಚೆ ಶುರುವಾಗಿದೆ. ಇವರಿಬ್ಬರ ವಿಚ್ಚೇದನದ ಬಗ್ಗೆ ಗೋವಿಂದ ಅವರ ಮ್ಯಾನೇಜರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಇಬ್ಬರ ನಡುವೆ ಸಮಸ್ಯೆಯಿದೆ. ಅದನ್ನು ಬಗೆ ಹರಿಸುವುದಕ್ಕೆ ಗೋವಿಂದ ಪ್ರಯತ್ನ ಪಡುತ್ತಿರುವುದಾಗಿ ಮ್ಯಾನೇಜರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆದರೆ, ವಿಚ್ಛೇದನದ ಬಗ್ಗೆ ಇಬ್ಬರೂ ಇನ್ನೂ ಅಧಿಕೃತವಾಗಿ ಹೇಳಿಕೆಯನ್ನು ಕೊಟ್ಟಿಲ್ಲ.
ಇನ್ನು ಗೋವಿಂದ ಮರಾಠಿ ನಟಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಾರೆ ಅನ್ನುವ ಸುದ್ದಿನೂ ಹರಿದಾಡುತ್ತಿದೆ. ಆದರೆ, ಆ ನಟಿಯ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಇದೇ ವಿಷಯಕ್ಕೆ ರೊಚ್ಚಿಗೆದ್ದಿರುವ ಸುನಿತಾ ಅಹುಜಾ ವಿಚ್ಛೇದನ ನೀಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಗೋವಿಂದಾ-ಸುನಿತಾ ಇಬ್ಬರೂ 1987 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸುಮಾರು 37 ವರ್ಷಗಳ ಬಳಿಕ ಸುನಿಯಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಇವರಿಗೆ ಟೀನಾ ಎಂಬ ಮಗ ಹಾಗೂ ಯಶವರ್ಧನ್ ಅಹುಜಾ ಎಂಬ ಪುತ್ರ ಇದ್ದಾನೆ. ಸದ್ಯ ಈ ಸುದ್ದಿ ಬಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ.


Click it and Unblock the Notifications











