ಶಾರುಖ್ ಖಾನ್ ತದ್ರೂಪಿ ವ್ಯಕ್ತಿ ಚಿತ್ರರಂಗದಲ್ಲಿ ಸಂಪಾದಿಸುವುದೆಷ್ಟು ಗೊತ್ತೇ?
ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿಯ ಬದಲು ಅವರ ಡ್ಯೂಪ್‌ಗಳನ್ನು ಬಳಸುವುದನ್ನು ನೋಡಿರುತ್ತೀರಿ. ಸಾಮಾನ್ಯವಾಗಿ ಸಾಹಸ ದೃಶ್ಯಗಳಲ್ಲಿ ಡ್ಯೂಪ್‌ಗಳನ್ನು ಬಳಸುತ್ತಾರೆ. ನಾಯಕನಂತೆಯೇ ದೇಹಾಕಾರ ಹೊಂದಿರುವವರನ್ನು ಬಳಸಿಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಾಯಕರೇ ಡ್ಯೂಪ್ ಇಲ್ಲದೆ ನಟಿಸುತ್ತಾರೆ. ತಂತ್ರಜ್ಞಾನ ಅವರ ಪಾಲಿಗೆ ವರವಾಗಿ ಪರಿಣಮಿಸಿದೆ.
Recommended Video
ಆದರೆ, ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವವರಿಗೆ ಹೆಚ್ಚು ಸಮಸ್ಯೆಯೇ ಇಲ್ಲ. ಏಕೆಂದರೆ ಅವರಿಗೆ ಮತ್ತೊಬ್ಬ ಶಾರುಖ್ ಖಾನ್ ಆಗಾಗ್ಗೆ ಸಹಾಯಕ್ಕೆ ಬರುತ್ತಿರುತ್ತಾರೆ! ಸೆಲೆಬ್ರಿಟಿಗಳನ್ನೇ ಹೋಲುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಅವರು ಆ ನಟರ ಅಭಿಮಾನಿಯೂ ಆಗಿರುತ್ತಾರೆ. ನಟ ಬದಲಿಸುವ ಗೆಟಪ್‌ಗೆ ತಕ್ಕಂತೆ ತಮ್ಮ ವೇಷವನ್ನೂ ಬದಲಿಸಿಕೊಳ್ಳುತ್ತಾರೆ. ಪ್ರಶಾಂತ್ ವಾಲ್ದೆ ಅಂತಹವರಲ್ಲಿ ಒಬ್ಬರು. ಮುಂದೆ ಓದಿ...

ಶಾರುಖ್ ಖಾನ್ ಹೋಲಿಕೆ
ಪ್ರಶಾಂತ್ ವಾಲ್ದೆ ಎಂಬ ವ್ಯಕ್ತಿ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ಹಾಗೆಯೇ ಅವರೆಂದರೆ ಬಾಲಿವುಡ್ ನಿರ್ದೇಶಕರಿಗೂ ಅಚ್ಚುಮೆಚ್ಚು. ಏಕೆಂದರೆ ಪ್ರಶಾಂತ್, ನೋಡಲು ಶಾರುಖ್ ಅವರಂತೆಯೇ ಕಾಣಿಸುತ್ತಾರೆ. ಅವರು ಶಾರುಖ್ ಹೌದೇ ಅಲ್ಲವೇ ಎಂದು ಖಾತರಿಪಡಿಸಿಕೊಳ್ಳುವುದು ಬಹಳ ಕಷ್ಟ. ಹೀಗೆ ಶಾರುಖ್ ರೀತಿ ಇರುವುದು ಅವರಿಗೆ ವರವಾಗಿಯೇ ಪರಿಣಮಿಸಿದೆ.

ಶಾರುಖ್ ಸಿನಿಮಾಗಳಲ್ಲಿ ಕೆಲಸ
ಶಾರುಖ್ ಅವರ ತದ್ರೂಪು ಹೋಲಿಕೆ ಅವರಿಗೆ ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ಅವಕಾಶ ನೀಡಿದೆ. ಚೆನ್ನೈ ಎಕ್ಸ್‌ಪ್ರೆಸ್, ಓಂ ಶಾಂತಿ ಓಂ, ಡಾನ್ 2, ಫ್ಯಾನ್, ರಬ್ ನೆ ಬನಾದಿ ಜೋಡಿ, ರಯೀಸ್, ಡಿಯರ್ ಜಿಂದಗಿ ಸೇರಿದಂತೆ ಶಾರುಖ್ ನಟಿಸಿರುವ ಅನೇಕ ಚಿತ್ರಗಳಲ್ಲಿ ಪ್ರಶಾಂತ್ ಕೂಡ ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ.

ದೃಶ್ಯಗಳನ್ನೂ ಚಿತ್ರೀಕರಿಸುವುದಿದೆ
ಶಾರುಖ್ ಖಾನ್ ಜತೆಗೆ ಸಿನಿಮಾ ಮಾಡುವಾಗ ನಿರ್ದೇಶಕರು ಪ್ರಶಾಂತ್ ಅವರಿಗೂ ಬುಲಾವ್ ನೀಡುತ್ತಾರೆ. ಏಕೆಂದರೆ ಬಾಡಿ ಡಬಲ್ ಮಾಡಲು ಪ್ರಶಾಂತ್ ಹೇಳಿ ಮಾಡಿಸಿರುವಂತಹ ವ್ಯಕ್ತಿ. 'ಶಾರುಖ್ ಖಾನ್ ಅವರೊಂದಿಗೆ ಸಿನಿಮಾ ಮಾಡುವ ನಿರ್ದೇಶಕರಿಗೆ ನಾನು ಕೈಯಾಳು. ಅವರ ಅನುಪಸ್ಥಿತಿಯಲ್ಲಿ ಕ್ಯಾಮೆರಾ ಎದುರಿಸಲು ಮತ್ತು ರಿಹರ್ಸಲ್ ಮಾಡಲು, ಸಹ ನಟರಿಗೆ ದೃಶ್ಯವನ್ನು ವಿವರಿಸಲು ನನ್ನನ್ನು ಡಮ್ಮಿಯಾಗಿ ಬಳಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಶಾರುಖ್ ಇಲ್ಲದೆಯೂ ನನ್ನನ್ನೇ ಬಳಸಿ ದೃಶ್ಯಗಳನ್ನು ತೆಗೆದು ಮೋಸ ಕೂಡ ಮಾಡುತ್ತೇವೆ' ಎಂದು ಪ್ರಶಾಂತ್ ಹೇಳುತ್ತಾರೆ.

ಓಂ ಶಾಂತಿ ಓಂ ಮೂಲಕ ಶುರು
ವಿಶೇಷವೆಂದರೆ ಕೆಲವು ನಿರ್ದೇಶಕರು ಪ್ರಶಾಂತ್ ಅವರಿಗೂ ಸ್ಕ್ರಿಪ್ಟ್ ನೀಡುತ್ತಾರಂತೆ. ಶಾರುಖ್ ಖಾನ್ ಸೆಟ್‌ಗೆ ಬರುವ ಮೊದಲೇ ಬರಬೇಕು ಎಂದು ಕೇಳುತ್ತಾರೆ. ಅವರು ಮೊದಲ ಬಾರಿ ಶಾರುಖ್ ಜತೆ ಕೆಲಸ ಮಾಡಿದ್ದು 2007ರಲ್ಲಿ 'ಓಂ ಶಾಂತಿ ಓಂ' ಚಿತ್ರದ ಮೂಲಕ. ಆ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡುವ ಅವಕಾಶ ಸಿಕ್ಕಿದ್ದು ಅವರಿಗೆ ನಂಬಲು ಅಸಾಧ್ಯ ಎನಿಸಿತ್ತು. ಅಷ್ಟೇ ಅಲ್ಲ ಶಾರುಖ್ ಕೂಡ ಅಚ್ಚರಿಗೊಂಡಿದ್ದರು. ಅನೇಕ ಸಂದರ್ಭಗಳಲ್ಲಿ ಜನರು ಗೊಂದಲಕ್ಕೊಳಗಾಗಿದ್ದಿದೆ. ಅದರಲ್ಲಿಯೂ ದೂರದಿಂದ ನೋಡಿದಾಗ ಶಾರುಖ್ ಎಂದೇ ಭಾವಿಸುತ್ತಾರಂತೆ.

30,000 ರೂ. ಸಂಪಾದನೆ
ಈ ರೀತಿ ಸಿನಿಮಾಗಳಲ್ಲಿ ಶಾರುಖ್ ಖಾನ್ ಬದಲಿಯಾಗಿ ಕೆಲಸ ಮಾಡುವಾಗ ಅವರಿಗೆ ಸುಮಾರು 30,000 ರೂವರೆಗೂ ಆದಾಯ ಬರುತ್ತದೆ. ಇದರ ಜತೆಗೆ ಅವರು ನೃತ್ಯ ನಿರ್ದೇಶನ ಕೂಡ ಮಾಡುತ್ತಾರೆ. ಅನೇಕ ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.


Click it and Unblock the Notifications











