ಹೇಮಾ ಮಾಲಿನಿ ಮದ್ವೆಯಾದಾಗ ಧರ್ಮೇಂದ್ರಗೆ 'ಸ್ತ್ರೀವ್ಯಾಮೋಹಿ' ಹಣೆಪಟ್ಟಿ;ಡ್ರೀಮ್ ಗರ್ಲ್ ಬಗ್ಗೆ ಮೊದಲ ಪತ್ನಿ ಹೀಗಂದಿದ್ರು!
ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ಸಿನಿಮಾ ಬದುಕು ಎಷ್ಟು ರೋಚಕವೋ, ಅಷ್ಟೇ ರೋಷಕ ಅವರ ಫ್ಯಾಮಿಲಿ ಲೈಫ್. ಪಂಜಾಬಿನ ಹಳ್ಳಿಯೊಂದರಲ್ಲಿ ಹೆಡ್ ಮಾಸ್ಟರ್ ಮಗನಾಗಿ ಜನಿಸಿದ ಧರ್ಮೇಂದ್ರಗೆ ಮುಂದೊಂದು ದಿನ ಸ್ಟಾರ್ ಆಗುತ್ತೇನೆ ಅನ್ನೋ ಚಿಕ್ಕ ಕಲ್ಪನೆಯೂ ಇರಲಿಕ್ಕಿಲ್ಲ. ಒಂದು ವೇಳೆ ಹಾಗೇನಾದರೂ ಗೊತ್ತಿದ್ದರೆ, ಕೇವಲ 19 ವರ್ಷಕ್ಕೆ ಮದುವೆ ಆಗುತ್ತಿದ್ದರೋ ಇಲ್ವೋ?
ಧರ್ಮೇಂದ್ರ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ ಪ್ರಕಾಶ್ ಕೌರ್ ಎಂಬುವವರೊಂದಿಗೆ ಮದುವೆ ಆಗಿದ್ದರು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಇನ್ನೂ ಸಂಸಾರದ ಅರಿವೇ ಇಲ್ಲದ ಸಮಯದಲ್ಲಿಯೇ ಕೌಟುಂಬಿಕ ಜೀವನ ಆರಂಭ ಆಗಿತ್ತು. ಆದರೆ, ಧರ್ಮೇಂದ್ರಗೆ ಮಾತ್ರ ಸಂಸಾರಕ್ಕಿಂತ ಹೆಚ್ಚಾಗಿ ಸಿನಿಮಾ ಮೇಲೆ ಒಲವು. ನಟನಾಗಬೇಕು ಅನ್ನೋ ಕನಸು. ಆ ಕನಸನ್ನೇ ಹೊತ್ತುಕೊಂಡು ಅಂದಿನ ಬಾಂಬೆ, ಇಂದಿನ ಮುಂಬೈಗೆ ಬಂದು ಇಳಿದಿದ್ದರು.

ಎಲ್ಲರಂತೆ ಒಂದಿಷ್ಟು ಸೈಕಲ್ ಹೊಡೆದ ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. 1960ರಿಂದ ಶುರುವಾದ ಜರ್ನಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸಿನಿಮಾ ಕ್ಷೇತ್ರದಲ್ಲಿ ಯಶಸ್ಸಿನ ಬೆನ್ನು ಹತ್ತಿ ಹೊರಟಿದ್ದ ಧರ್ಮೇಂದ್ರಗೆ ಮೊದಲ ಪತ್ನಿಯಿಂದ ನಾಲ್ಕು ಮಕ್ಕಳಾಗಿದ್ದವು. ಅವರೇ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಇಬ್ಬರು ಗಂಡು ಮಕ್ಕಳು ಹಾಗೂ ವಿತೇಜಾ ಡಿಯೋಲ್, ಅಜೀತಾ ಡಿಯೋಲ್ ಎಂಬ ಹೆಣ್ಣು ಮಕ್ಕಳು.
ಆದರೆ, ಧರ್ಮೇಂದ್ರ ಸಿನಿಮಾ ಸ್ಟಾರ್ ಆಗಿ ಮರೆಯುತ್ತಿರುವಾಗ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮೇಲೆ ಮನಸಾಗಿತ್ತು. ಇಬ್ಬರ ಮದುವೆಯಿಂದ ದೊಡ್ಡ ವಿವಾದವೇ ಸೃಷ್ಟಿಯಾಯ್ತು. ಬಳಿಕ ಇಸ್ಲಾಂಗೆ ಮತಾಂತರಗೊಂಡು ಹೇಮಾ ಮಾಲಿನಿಯನ್ನು ಮದುವೆ ಆದರು. ಹಾಗಂತ ಮೊದಲ ಪತ್ನಿ ಪ್ರಕಾಶ್ ಕೌರ್ ಬಹಿರಂಗವಾಗಿ ಪತಿ ಧರ್ಮೇಂದ್ರ ಎರಡನೇ ಮದುವೆ ಬಗ್ಗೆಯಾಗಲಿ, ಹೇಮಾ ಮಾಲಿನಿ ಬಗ್ಗೆಯಾಗಲಿ ನೆಗೆಟಿವ್ ಆಗಿ ಮಾತಾಡಿಲ್ಲ. ಇನ್ನೊಂದು ಕಡೆ ಹೇಮಾ ಮಾಲಿನಿ ಕೂಡ ಹೆಚ್ಚು ಸಮಯ ಮೌನವಾಗಿಯೇ ಇದ್ದರು.
'ಶೋಲೆ' ಬಳಿಕ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ವಿವಾಹವಾದರು. ಇದು ಬಾಲಿವುಡ್ ಮಂದಿಯ ವಿರೋಧಕ್ಕೆ ಕಾರಣವಾಗಿತ್ತು. ಧರ್ಮೇಂದ್ರ ಅವರನ್ನು 'ಸ್ತ್ರೀ ವ್ಯಾಮೋಹಿ' ಎಂಬ ಪಟ್ಟ ಕಟ್ಟಿದ್ದರು. ಇದು ಧರ್ಮೇಂದ್ರ ವೃತ್ತಿ ಬದುಕಿಗೆ ಹಿನ್ನೆಡೆಯಾಗಿತ್ತು. ಎಲ್ಲರೂ ದೂಷಿಸುತ್ತಿರುವಾಗ, ಧರ್ಮೇಂದ್ರ ಬೆಂಬಲಕ್ಕೆ ನಿಂತಿದ್ದು ಮೊದಲ ಪತ್ನಿ ಪ್ರಕಾಶ್ ಕೌರ್. 1981ರಲ್ಲಿ ಸ್ಟಾರ್‌ಡಸ್ಟ್‌ಗೆ ನೀಡಿದ ಸಂದರ್ಶನದಲ್ಲಿ "ಸ್ತ್ರೀ ವ್ಯಾಮೋಹಿ ಎಂದು ನನ್ನ ಪತಿಯನ್ನಷ್ಟೇ ಯಾಕೆ ಕರೆಯುತ್ತೀರಿ? ಇಡೀ ಚಿತ್ರರಂಗದಲ್ಲಿ ಇರುವವರು ಇಂತಹದ್ದೇ ಕೆಲಸ ಮಾಡುತ್ತಿರುವಾಗ ನನ್ನ ಪತಿಯನ್ನು ಹೀಗೆ ಕರೆಯುವುದಕ್ಕೆ ನಿಮಗೆಷ್ಟು ಧೈರ್ಯ?" ಎಂದು ಧರ್ಮೇಂದ್ರ ಬೆಂಬಲಕ್ಕೆ ನಿಂತಿದ್ದರು.

ಹಾಗೇ ಹೇಮಾ ಮಾಲಿಯನ್ನು ಮದುವೆ ಆಗಿದ್ದಕ್ಕೂ ಪ್ರತಿಕ್ರಿಯೆ ನೀಡಿದ್ದರು. "ಯಾವುದೇ ವ್ಯಕ್ತಿಯಾದರೂ ಹೇಮಾ ಮಾಲಿನಿಯನ್ನೇ ಇಷ್ಟ ಪಡುತ್ತಿದ್ದರು." ಎಂದು ಹೇಳಿದ್ದರು. ಅಲ್ಲದೇ " ಹೇಮಾ ಮಾಲಿನಿ ಯಾವ ಪರಿಸ್ಥಿತಿಯಲ್ಲಿ ಇರಬಹುದು ಎಂಬುದು ಅರ್ಥ ಆಗುತ್ತೆ. ಹೇಮಾ ಕೂಡ ಅವರ ಕುಟುಂಬಕ್ಕೆ, ಚಿತ್ರರಂಗಕ್ಕೆ ಉತ್ತರ ಕೊಡಬೇಕು. ಆದರೆ, ನಾನು ಅವರು ಸ್ಥಾನದಲ್ಲಿ ಇದ್ದಿದ್ದರೆ, ಹೀಗೆ ಆಗುವುದಕ್ಕೆ ಬಿಡುತ್ತಿರಲಿಲ್ಲ. ಒಬ್ಬ ಹೆಣ್ಣಾಗಿ ಅವರ ಫೀಲಿಂಗ್ಸ್ ಅನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಒಬ್ಬ ಹೆಂಡ್ತಿ ಹಾಗೂ ತಾಯಿಯಾಗಿ ಈ ಮದುವೆಯನ್ನು ಒಪ್ಪುವುದಿಲ್ಲ" ಎಂದಿದ್ದರು.
ಇತ್ತ ಮದುವೆ ಬಗ್ಗೆ ಹೇಮಾ ಮಾಲಿನಿ ವಿವಾದದ ಬಗ್ಗೆ ಹೆಚ್ಚಾಗಿ ಎಲ್ಲೂ ಮಾತಾಡಲೇ ಇಲ್ಲ. ಅದರಲ್ಲೂ ಧರ್ಮೇಂದ್ರ ಮೊದಲ ಪತ್ನಿ ಬಗ್ಗೆ ಮಾತಾಡಿದ್ದೇ ವಿರಳ. ಹೀಗೊಮ್ಮೆ ಸಂದರ್ಶನದಲ್ಲಿ "ನಾನು ಯಾರನ್ನೂ ಡಿಸ್ಟರ್ಬ್ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ಧರಂಜೀ ನನಗೆ ಹಾಗೂ ನನ್ನ ಮಕ್ಕಳಿಗೆ ಖುಷಿಯನ್ನು ಕೊಟ್ಟಿದ್ದಾರೆ. ತಂದೆ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ. ನಾನು ಪ್ರಕಾಶ್ ಬಗ್ಗೆ ಹೆಚ್ಚು ಮಾತಾಡಿಲ್ಲ. ಆದರೂ ನನಗೆ ಅವರ ಮೇಲೆ ಗೌರವವಿದೆ." ಎಂದು ಹೇಮಾ ಮಾಲಿನಿ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.


Click it and Unblock the Notifications











