ಭೀಕರ ಅಪಘಾತಕ್ಕೀಡಾದ ಖ್ಯಾತ ನಟಿಯ ಕಾರು ; ಪ್ರಚಾರಕ್ಕೆ ತೆರಳುವ ವೇಳೆ ಮೂರು ಕಾರುಗಳ ನಡುವೆ ಡಿಕ್ಕಿ
ವಾಹನ ಚಾಲನೆ ಎನ್ನುವುದು ತುಂಬಾನೇ ಸೂಕ್ಷ್ಮವಾದ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಯಾಕೆಂದರೆ ಈ ಪ್ರಯಾಣ ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪುವುದು ಆಗಿರುವುದಿಲ್ಲ. ಬದಲಿಗೆ ಅದೊಂದು ಸಾಮಾಜಿಕ ಜವಾಬ್ಧಾರಿಯೂ ಹೌದು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ.
ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ಅವರಸವೇ ಅಪಾಯಕ್ಕೆ ಕಾರಣವೆನ್ನುವುದನ್ನು ಮರೆತು ತಮ್ಮ ಕಾರು ಅಥವಾ ಬೈಕ್‌ಗಳನ್ನು ಓಡಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಪುಣೆ-ಸಾಂಗ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತ.

ಹೌದು, ಇಂದು (ಜೂನ್ 9 ) ಮರಾಠಿ ಚಿತ್ರರಂಗದ ಖ್ಯಾತ ನಾಯಕಿ ಪೂಜಾ ಸಾವಂತ್ ಅವರ ಅವರ ಕಾರು ಭೀಕರ ಅಪಘಾತಕ್ಕೀಡಾಗಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪುಣೆ-ಸಾಂಗ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಪೂಜಾ ಸಾವಂತ್ ಪ್ರಾಣಾಪಾಯದಿಂದ ಪಾರಾಗಿದ್ಧಾರೆ.
ತಮ್ಮ ಮುಂಬರುವ ಚಿತ್ರ ''ಕಪ್‌ಬಾಶಿ'' ಚಿತ್ರದ ಪ್ರಚಾರಕ್ಕೆ ಪೂಜಾ ಸಾವಂತ್, ತಮ್ಮ ಚಿತ್ರದ ಹೀರೋ ರಿಷಿ ಮನೋಹರ್ ಮತ್ತು ಚಿತ್ರದ ಪಿಆರ್ ದರ್ಶನ್ ಮುಸುಳೆ ಜೊತೆ ಪುಣೆಯಿಂದ ಸಾಂಗ್ಲಿಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಪೂಜಾ ಸಾವಂತ್ ಕಾರು ಅಪಘಾತಕ್ಕೀಡಾಗಿದ್ದು ಆ ನಂತರ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಪೂಜಾ ಸಾವಂತ್ ಪ್ರಯಾಣಿಸುತ್ತಿದ್ದ ಕಾರು ಜಖಂ ಆಗಿದ್ದು, ಪ್ರಾಥಮಿಕ ಪೊಲೀಸ್ ವರದಿ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಹೆದ್ದಾರಿಯಲ್ಲಿ ಅನಿರೀಕ್ಷಿತವಾಗಿ ಮೂರು ವಾಹನಗಳು ಒಂದಕ್ಕೊಂದು ಸರಣಿ ಡಿಕ್ಕಿಯಾಗಿವೆ.
ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ನಟಿ ಪೂಜಾ ಸಾವಂತ್ ಇದ್ದ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡು ನಜ್ಜುಗುಜ್ಜಾಗಿದೆ. ನಜ್ಜುಗುಜ್ಜಾದ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದು,ಅಪಘಾತ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರು ಧಾವಿಸಿ ಬಂದು, ಕಾರಿನಲ್ಲಿದ್ದವರನ್ನು ತಕ್ಷಣವೇ ಹೊರತೆಗೆದು ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ. ಸದ್ಯ ಪೂಜಾ ಸಾವಂತ್ ಮತ್ತು ರಿಷಿ ಪ್ರಾಣಾಪಾಯದಿಂದ ಪಾರಾಗಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ಧಾರೆ.

ಪೂಜಾ ಸಾವಂತ್ ಯಾರು ?
ಮರಾಠಿ ಚಿತ್ರರಂಗದ ಖ್ಯಾತ ನಟಿಯರಲ್ಲಿ ಪೂಜಾ ಸಾವಂತ್ ಕೂಡ ಒಬ್ಬರು. 1990 ರಲ್ಲಿ ಮುಂಬೈನಲ್ಲಿ ಜನಿಸಿದ ಇವರು, 2008 ರಲ್ಲಿ ''ಮಹಾರಾಷ್ಟ್ರ ಟೈಮ್ಸ್ ಶ್ರಾವಣ ಕ್ವೀನ್'' ಸೌಂದರ್ಯ ಸ್ಪರ್ಧೆಯನ್ನು ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.
''ಕ್ಷಣಭರ್ ವಿಶ್ರಾಂತಿ'' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಪೂಜಾ ಸಾವಂತ್, ಆ ನಂತರ ''ದಗಡಿ ಚಾಲ್''.. ''ದಗಡಿ ಚಾಲ್ 2''.. ''ಲಪಾಚಾಪಿ''.. ''ಪೋಸ್ಟರ್ ಬಾಯ್ಸ್''.. ''ಬೋನಸ್''.. ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ''ಭೇಟಲಿ ತೂ ಪುನ್ಹಾ''.. ಚಿತ್ರದ ಅಭಿನಯಕ್ಕಾಗಿ ಪೂಜಾಗೆ ಅತ್ಯುತ್ತಮ ನಟಿ ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಸಿಕ್ಕಿದೆ. ವಿದ್ಯುತ್ ಜಾಮ್ವಾಲ್ ಅಭಿನಯದ ''ಜಂಗ್ಲಿ'' ಚಿತ್ರದ ಮೂಲಕ ಬಾಲಿವುಡ್‌ನಲ್ಲಿಯೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ಧಾರೆ ಪೂಜಾ ಸಾವಂತ್.
'ಕಪ್-ಬಶಿ' ಚಿತ್ರದ ಕಥೆ ಏನು..?
ಜೂನ್ 19ರಂದು ಬಿಡುಗಡೆಯಾಗಲಿರುವ ''ಕಪ್ ಬಶಿ'' ಮದುವೆ ಸುತ್ತ ಸುತ್ತುವ ಸಿನಿಮಾ. ಅತ್ತೆ ಮತ್ತು ಸೊಸೆಯ ಜಾತಕ ಹೊಂದಾಣಿಕೆ ಕುರಿತ ಕಥೆ ಈ ಚಿತ್ರದಲ್ಲಿದೆ. ಪೂಜಾ ಸಾವಂತ್ ಮತ್ತು ರಿಷಿ ಅವರ ಜೊತೆ ಚಿತ್ರದಲ್ಲಿ ನಿರ್ಮಿತಿ ಸಾವಂತ್, ನಯನಾ ಆಪ್ಟೆ, ಅನಂತ್ ಜೋಗ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಆನಂದ್ ಕಾಳೆ, ಚಿನ್ಮಯ ಶಿಂದ್ರೆ ಜೊತೆ ಉಮಾ ಸರ್ದೇಶ್ಮುಖ ಕೂಡ ಚಿತ್ರದಲ್ಲಿದ್ದಾರೆ.


Click it and Unblock the Notifications