ಭೀಕರ ಅಪಘಾತಕ್ಕೀಡಾದ ಅಕ್ಷಯ್ ಕುಮಾರ್ ಕಾರು ; ನಜ್ಜುಗುಜ್ಜಾದ ಆಟೋ - ಇಬ್ಬರ ಸ್ಥಿತಿ ಗಂಭೀರ
ವಾಹನ ಚಾಲನೆ ಎನ್ನುವುದು ತುಂಬಾನೇ ಸೂಕ್ಷ್ಮವಾದ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಯಾಕೆಂದರೆ ಈ ಪ್ರಯಾಣ ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪುವುದು ಆಗಿರುವುದಿಲ್ಲ. ಬದಲಿಗೆ ಅದೊಂದು ಸಾಮಾಜಿಕ ಜವಾಬ್ಧಾರಿಯೂ ಹೌದು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ.
ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ಅವರಸವೇ ಅಪಾಯಕ್ಕೆ ಕಾರಣವೆನ್ನುವುದನ್ನು ಮರೆತು ತಮ್ಮ ಕಾರು ಅಥವಾ ಬೈಕ್‌ಗಳನ್ನು ಓಡಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಮುಂಬೈನ ಜುಹುನಲ್ಲಿ ನಡೆದ ಭೀಕರ ರಸ್ತೆ ಅಪಘಾತ.

ಹೌದು, ಮೊನ್ನೆ ಮೊನ್ನೆಯಷ್ಟೇ (ಜನವರಿ 17 ) ತಮ್ಮ ದಾಂಪತ್ಯ ಜೀವನಕ್ಕೆ 25 ವಸಂತ ತುಂಬಿದ ಹಿನ್ನೆಲೆ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಸಂಭ್ರಮ ಪಟ್ಟಿದ್ದರು. ಅದೇ ಸಂಭ್ರಮದಲ್ಲಿ ನಿನ್ನೆ (ಜನವರಿ 19) ಮುಂಬೈ ವಿಮಾನ ನಿಲ್ಧಾಣದಿಂದ ಹೊರ ಬಂದು ತಮ್ಮ ಮನೆಯತ್ತ ಪ್ರಯಾಣವನ್ನು ಕೂಡ ಮಾಡುತ್ತಿದ್ದರು.
ಆದರೆ ಈ ಸಮಯದಲ್ಲಿ ಅಕ್ಷಯ್ ಕುಮಾರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಆಟೋ ರಿಕ್ಷಾಗೆ ಹೋಗಿ ಗುದ್ದಿದೆ. ಈ ಭೀಕರ ಅಪಘಾತದಿಂದ ಅಕ್ಷಯ್ ಕುಮಾರ್ ಅವರ ಬೆಂಗಾವಲು ಪಡೆಯ ಕಾರು ಪಲ್ಟಿ ಹೊಡೆದು ಬಿದ್ದಿದ್ದು ಆಟೋ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಸೋಮವಾರ ರಾತ್ರಿ 9 ಗಂಟಗೆ ಈ ಅಪಘಾತ ಸಂಭವಿಸಿದ್ದು ಪ್ರಾಥಮಿಕ ವರದಿ ಪ್ರಕಾರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳಿಯರು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.
ಸದ್ಯ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಅಪಘಾತದಲ್ಲಿ ಅಕ್ಷಯ್ ಕುಮಾರ್ ಅವರ ಬೆಂಗಾಲಿನ ವಾಹನದ ಯಾವ ತಪ್ಪು ಕೂಡ ಇಲ್ಲ. ಬದಲಿಗೆ ಅತಿ ವೇಗವಾಗಿ ಬೇರೊಬ್ಬರು ತಮ್ಮ ಕಾರು ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಗೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಆಟೋ ಅಕ್ಷಯ್ ಕುಮಾರ್ ಅವರ ಬೆಂಗಾವಲು ವಾಹನಕ್ಕೆ ಅಪ್ಪಳಿಸಿದೆ. ಈ ದುರ್ಘಟನೆ ನಡೆದಿದೆ.
ಇನ್ನು ಅಪಘಾತಕ್ಕೀಡಾದ ಕಾರಿನಲ್ಲಿ ಅದೃಷ್ಟವಶಾತ್ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಇರಲಿಲ್ಲ. ಇಬ್ಬರು ಬೇರೊಂದು ಕಾರಿನಲ್ಲಿದ್ದರು ಎಂದು ವರದಿಯಾಗಿದ್ದು ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳದ ಮಹಾನಿರ್ದೇಶಕ ವಿಶ್ವಾಸ್ ನಾಗರೆ ಪಾಟೀಲ್ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದುವರೆಗೂ ಈ ಭೀಕರ ಅಪಘಾತದಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಅಕ್ಷಯ್ ಕುಮಾರ್ ಅಥವಾ ಟ್ವಿಂಕಲ್ ಖನ್ನಾ ಈ ಕುರಿತು ಇನ್ನೂ ಪ್ರತಿಕ್ರಿಯೆಯನ್ನು ನೀಡಿಲ್ಲ. ಸದ್ಯ ಈ ರಣಭೀಕರ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಕ್ಷಯ್ ಕುಮಾರ್ ಅವರ ಅಭಿಮಾನಿಗಳನ್ನು ಈ ದೃಶ್ಯಾವಳಿಗಳು ಆತಂಕಕ್ಕೀಡು ಮಾಡಿವೆ.
ಇನ್ನುಳಿದಂತೆ ಕಳೆದ ವರ್ಷ ''ಹೌಸ್‌ಫುಲ್ 5''.. ''ಕೇಸರಿ 2''.. ''ಜಾಲಿ ಎಲ್‌ಎಲ್‌ಬಿ 3''.. ''ಸ್ಕೈಪೋರ್ಸ್'' ಚಿತ್ರಗಳ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಅಕ್ಷಯ್ ಕುಮಾರ್ ಸದ್ಯ ''ವೆಲ್ ಕಮ್ ಟು ಜಂಗಲ್''.. ''ಹೇರಾ ಫೇರಿ 3''.. '''ಭೂತ್ ಬಂಗ್ಲಾ''..ಚಿತ್ರಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ''ಭಾಘಂ ಭಾಘ್ 2'' ಸೇರಿ ಇನ್ನೂ ಕೆಲ ಚಿತ್ರಗಳ ಚಿತ್ರೀಕರಣವನ್ನು ಮಾಡುತ್ತಿದ್ದಾರೆ.


Click it and Unblock the Notifications











