2 ದಿನದಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ 'ಅನಿಮಲ್' ಕಲಾವಿದರ ಸಂಭಾವನೆ ವಿವರ ಇಲ್ಲಿದೆ
ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಅನಿಮಲ್ ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆ ಗಳಿಸಿಸಿರುವ 'ಅನಿಮಲ್' ತನ್ನ ನಾಗಾಲೋಟ ಮುಂದುವರೆಸುತ್ತಿದೆ.
ಸಿನಿಮಾ ಬಿಡುಗಡೆಯಾದ ಎರಡೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ವಿಶ್ವದಾದ್ಯಂತ ಈ ಸಿನಿಮಾದ ಕಲೆಕ್ಷನ್ ಎರಡೇ ದಿನಕ್ಕೆ ಸುಮಾರು 236 ಕೋಟಿ ರೂಪಾಯಿ ಎಂದು ಚಿತ್ರತಂಡ ಮಾಹಿತಿ ನೀಡಿದೆ. ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಚಿತ್ರದ ಕಲಾವಿದರ ಸಂಭಾವನೆ ಕೂಡ ಚರ್ಚೆಗೆ ಬಂದಿದೆ.

ಅರ್ಧದಷ್ಟು ಸಂಭಾವನೆ ಪಡೆದ ನಟ ರಣಬೀರ್ ಕಪೂರ್
'ಅನಿಮಲ್' ಕ್ರೇಜ್ ಮತ್ತು ಹೈಪ್ ನಡುವೆ, ಕೆಲವು ವರದಿಗಳು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಸಿನಿಮಾದಲ್ಲಿ ನಟಿಸಲು ನಟ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಅನಿಲ್ ಕಪೂರ್ ಎಷ್ಟೇಷ್ಟು ಶುಲ್ಕವನ್ನು ಪಡೆದಿದ್ದಾರೆ ಎಂಬ ವಿವರಗಳನ್ನು ಹಂಚಿಕೊಂಡಿವೆ.
ನಟ ರಣಬೀರ್ ಕಪೂರ್ 'ಅನಿಮಲ್'ಗಾಗಿ 30 - 35 ಕೋಟಿ ರೂಪಾಯಿಗಳ ಮುಂಗಡ ಶುಲ್ಕವನ್ನು ಪಡೆಯುತ್ತಿದ್ದಾರೆ ಎಂದು ಈ ಹಿಂದೆ ಪಿಂಕ್ವಿಲ್ಲಾ ವೆಬ್‌ಸೈಟ್ ವರದಿ ಮಾಡಿತ್ತು. ನಂತರ ಈ ಚಿತ್ರದ ನಿರ್ಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ತಮ್ಮ ಸಂಭಾವನೆಯ ಅರ್ದದಷ್ಟು ಮೊತ್ತವನ್ನು ಮಾತ್ರ ಪಡೆದಿದ್ದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಚಿತ್ರಕ್ಕೆ ರಣಬೀರ್ ಕಪೂರ್ 70 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ, ಅನಿಮಲ್ ಸಿನಿಮಾಗಾಗಿ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡಿದ್ದು, ಇದರ ಬದಲಿಗೆ ಸಿನಿಮಾದ ಲಾಭದಲ್ಲಿ ಪಾಲು ಪಡೆಯಲಿದ್ದಾರೆ. ಅನಿಮಲ್‌ನ ನಿರ್ಮಾಪಕರಾದ ಭೂಷಣ್ ಕುಮಾರ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರಿಗೆ ಬೆಂಬಲ ಸೂಚಿಸಿ, ಕಪೂರ್ ತಮ್ಮ ನಟನಾ ಶುಲ್ಕವನ್ನು 50% ಕಡಿಮೆ ಮಾಡಿದ್ದರು.

ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಸಂಭಾವನೆ
ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಮತ್ತು ಹೆಚ್ಚು ಪ್ರಶಂಸೆಗೆ ಒಳಗಾಗಿರುವ ಖಳನಟನಾಗಿ ಅಬ್ಬರಿಸಿರುವ ಬಾಬಿ ಡಿಯೋಲ್ 4 ರಿಂದ 5 ಕೋಟಿ ರೂಪಾಯಿ ಸಂಭಾವನೆಯಾಗಿ ಪಡೆದಿದ್ದಾರೆ. ಅನಿಮಲ್ ಸಿನಿಮಾದಲ್ಲಿನ ಅವರ ನಟನೆಯನ್ನು ಜನ ಸಕತ್ ಮೆಚ್ಚಿಕೊಂಡಿದ್ದಾರೆ.
ಸಿನಿಮಾದ ನಾಯಕ ನಟಿ, ರಣಬೀರ್ ಕಪೂರ್ ಪತ್ನಿ ಗೀತಾಂಜಲಿಯಾಗಿ ನಟಿಸಿರುವ ಕನ್ನಡತಿ ರಶ್ಮಿಕಾ ಮಂದಣ್ಣ 4 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್‌ನಲ್ಲಿ ಭದ್ರ ಬುನಾದಿಗಾಗಿ ಕಾಯುತ್ತಿದ್ದ ರಶ್ಮಿಕಾ ಅವರಿಗೆ ಈ ಸಿನಿಮಾ ಒಳ್ಳೆ ಬೇಸ್ ಹಾಕಿಕೊಟ್ಟಿದೆ.
ಇನ್ನು ಸಿನಿಮಾದ ಪ್ರಮುಖ ಅಂಶವೇ ತಂದೆ- ಮಗನ ನಡುವಿನ ಬಾಂಧವ್ಯ. ರಣಬೀರ್ ಕಪೂರ್ ಅಪ್ಪನಾಗಿ ನಟ ಅನಿಲ್ ಕಪೂರ್ ನಟಿಸಿದ್ದು, ತಂದೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾದ ನಟನೆಗಾಗಿ ಅನಿಲ್ ಕಪೂರ್ 2 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ. ಮಗನನ್ನು ಪ್ರೀತಿಸದ, ಆತನ ಬಗ್ಗೆ ಗಮನ ಕೊಡದ ತಂದೆಯಾಗಿ ಅನಿಲ್ ಕಪೂರ್ ನಟಿಸಿದ್ದರೇ, ತಂದೆಯೇ ತನ್ನ ಸರ್ವಸ್ವ ಎನ್ನುವ ಮಗನ ಪಾತ್ರಕ್ಕೆ ರಣಬೀರ್ ಕಪೂರ್ ಜೀವ ತುಂಬಿದ್ದಾರೆ.


Click it and Unblock the Notifications











