35 ವರ್ಷದ ಸಿಂಗರ್ ನಿಧನ: "ಆಸ್ಪತ್ರೆ ಬೆಡ್ ಮೇಲೂ ದೌರ್ಜನ್ಯ ನಿಲ್ಲಲಿಲ್ಲ" ಎಂದು ಗಾಯಕ ತಾಯಿ ಗಂಭೀರ ಆರೋಪ
ಒಡಿಶಾ ಮೂಲದ ಜನಪ್ರಿಯ ಗಾಯಕ ಹ್ಯೂಮನ್ ಸಾಗರ್ ಇತ್ತೀಚೆಗೆಷ್ಟೇ ತಮ್ಮ 35ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಹ್ಯೂಮನ್ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿಢೀರನೇ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದರಿಂದ ಭುವನೇಶ್ವರ ಏಮ್ಸ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅವರಿಗೆ ವೈದ್ಯಕೀಯ ತಂಡದ ನಿರಂತರ ಚಿಕಿತ್ಸೆ ನೀಡಿದ್ದರೂ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಹ್ಯೂಮನ್ ಸಾಗರ್ ನಿಧನದ ಸುದ್ದಿ ಒಡಿಶಾ ಸಂಗೀತ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ. ಗಾಯಕನ ಅಭಿಮಾನಿಗಳು ಹಾಗೂ ಸಂಗೀತ ಕ್ಷೇತ್ರದ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಹ್ಯೂಮನ್ ಸಾಗರ್‌ಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಒಡಿಶಾದ ಸಣ್ಣ ಹಳ್ಳಿಯಿಂದ ಪ್ರಯಾಣ ಆರಂಭಿಸಿದ್ದ ಹ್ಯೂಮನ್ ಸಾಗರ್ ಅತೀ ಕಡಿಮೆ ಅವಧಿಯಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಒಡಿಶಾದ ಗಾಯಕ ಹ್ಯೂಮನ್ ಸಾಗರ್ ಅವರು ಮಲ್ಟಿಆರ್ಗನ್ ಫೇಲ್ಯೂರ್‌ನಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಇವರ ನಿಧನ ಬಳಿಕ ಗಾಯಕ ತಾಯಿ ಮ್ಯಾನೇಜರ್ ಹಾಗೂ ಆಯೋಜಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈಗ ಈ ಗಾಯಕ ಸಾವು ದೊಡ್ಡ ವಿವಾದವನ್ನೇ ಹುಟ್ಟಾಕಿದೆ. ಮಗನ ಸಾವಿನ ದು:ಖದಲ್ಲಿಯೂ ಇಂತಹದ್ದೊಂದು ಆರೋಪ ಮಾಡಿದ್ದೀಗ ಚರ್ಚೆಯಾಗುತ್ತಿದೆ.
ಗಾಯಕ ಹ್ಯೂಮನ್ ಸಾಗರ್ ತಾಯಿ ಶೆಫಾಲಿ ಸುನಾ ಮ್ಯಾನೇಜರ್ ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಮಗ ತೀವ್ರವಾಗಿ ಅಸ್ವಸ್ಥನಾಗಿದ್ದರೂ , ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಗಾಯಕನ ತಾಯಿ ಶೆಫಾಲಿ ಆರೋಪಿಸಿದ್ದಾರೆ. ಮಗನನ್ನು ಕಳೆದುಕೊಂಡು ತೀವ್ರ ಆಘಾತದಲ್ಲಿರುವ ಶೆಫಾಲಿ ಸುನಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನನ್ನ ಮಗನನ್ನು ಮ್ಯಾನೇಜರ್ ಹಾಗೂ ಆಯೋಜಕರು ಬಳಸಿಕೊಂಡಿದ್ದಾರೆ. ಅವನ ಆರೋಗ್ಯ ಹದಗೆಟ್ಟಿದ್ದರೂ ಸಹ ಕಾರ್ಯಕ್ರಮಗಳಲ್ಲಿ ಹಾಡಲು ಒತ್ತಾಯಿಸುತ್ತಿದ್ದರು" ಎಂದು ಹೇಳಿದ್ದಾರೆ. ಹಾಗೇ ತಮ್ಮ ಮಗನಿಗೆ ವಿಶ್ರಾಂತಿ ಹಾಗೂ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದಾಗಲೂ, ಆಯೋಜಕರು ಸ್ಟೇಜ್ ಶೋಗಳನ್ನು ನೀಡುವಂತೆ ಒತ್ತಡ ಹಾಕುತ್ತಿದ್ದರು ಎಂದು ಶೆಫಾಲಿ ಆರೋಪಿಸಿದ್ದಾರೆ. ತಮ್ಮ ಮಗನ ಕೊನೆಯ ಕೆಲವು ದಿನಗಳನ್ನು ನೆನಪಿಸಿಕೊಂಡು ಗಾಯಕನ ತಾಯಿ ಭಾವುಕರಾಗಿದ್ದಾರೆ.
ಗಾಯಕ ಹ್ಯೂಮನ್ ಸಾಗರ್ ತಾಯಿ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಿದ್ದಂತೆ, ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ದಾರೆ. "ಹ್ಯೂಮನ್ ಸಾಗರ್ ಅವರ ತಾಯಿ ಮಾಡಿರುವ ಈ ಆರೋಪಗಳು ಸತ್ಯಕ್ಕೆ ದೂರವಾಗಿವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ "ಗಾಯಕನ ಆರೋಗ್ಯ ಹದಗೆಡಲು ಯಾವುದೇ ರೀತಿಯ ಒತ್ತಡ ಕಾರಣವಲ್ಲ. ಆದರೆ, ಅವರು ಆರೋಗ್ಯವನ್ನು ಸರಿಪಡಿಸಿಕೊಳ್ಳುವ ವಿಚಾರದಲ್ಲಿ ಅವರ ನಿರ್ಲಕ್ಷ್ಯವೇ ಕಾರಣ: ಎಂದು ಮ್ಯಾನೇಜರ್ ಮಾಧ್ಯಮಗಳ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಇನ್ನು ಗಾಯಕ ಹ್ಯೂಮನ್‌ಗೆ ಯಕೃತ್ತಿನ ಸಮಸ್ಯೆ ಇತ್ತು. ಹೀಗಾಗಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಅವರು ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳದೆ, ವೈದ್ಯರು ನೀಡಿದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದರು ಎಂದು ಮ್ಯಾನೇಜರ್ ತಿಳಿಸಿದ್ದಾರೆ. ಗಾಯಕನ ಈ ನಿರ್ಲಕ್ಷ್ಯವೇ ಅವರ ಸ್ಥಿತಿ ಗಂಭೀರವಾಗಲು ಕಾರಣ. ಅಲ್ಲದೆ ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಮತ್ತು ಚಿಕಿತ್ಸೆಯತ್ತ ಗಮನ ಹರಿಸಲು ಸಲಹೆ ನೀಡಲಾಗಿತ್ತು. ಆದರೆ, ಗಾಯಕ ವೈದ್ಯರು ನೀಡಿದ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ.


Click it and Unblock the Notifications











