'ಹುಡುಗ ಹುಡುಗಿ' ನಟಿಯೊಂದಿಗೆ ಆಮಿರ್ ಸೋದರಳಿಯ ಡೇಟಿಂಗ್; ಆ ನಟಿ ಯಾರು? ಹಿನ್ನೆಲೆಯೇನು?
ಆಮಿರ್ ಖಾನ್ ಸೋದರಳಿಯ ಇಮ್ರಾನ್ ಖಾನ್ ನಿಮಗೆ ಮರೆತು ಹೋಗಿರಬಹುದು. ಬಾಲಿವುಡ್‌ಗೆ ಕಾಲಿಟ್ಟಾಗ ಈ ನಟನಿಗಾಗಿ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಇಮ್ರಾನ್ ಖಾನ್ ಸಿನಿಮಾಗಳನ್ನು ನೋಡುವುದಕ್ಕಂತಲೇ ಒಂದು ವರ್ಗವಿತ್ತು. ಇನ್ನು ಸೋದರಳಿಯನಿಗಾಗಿಯೇ ಆಮಿರ್ ಖಾನ್ ಸಿನಿಮಾವನ್ನೂ ನಿರ್ಮಾಣ ಮಾಡಿದ್ದರು.
2008ರಲ್ಲಿ ತೆರೆಕಂಡಿದ್ದ 'ಜಾನೆ ತು ಯಾ ಜಾನೇ ನಾ', 'ಲಕ್', ದೆಲ್ಲಿ ಬೆಲ್ಲಿ' ಅಂತಹ ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಹೀಗಾಗಿ 2015ರಿಂದಲೇ ತೆರೆಮರೆಗೆ ಸರಿದಿದ್ದರು. ಇಮ್ರಾನ್ ಖಾನ್ ಸಿನಿಮಾದಿಂದ ದೂರ ಉಳಿದಿದ್ದರೂ, ಈತನ ಪರ್ಸನಲ್ ಲೈಫ್ ಮಾತ್ರ ಆಗಾಗ ಚರ್ಚೆಗೆ ಬರುತ್ತಿದೆ.

ಉದ್ಯಮಿಯ ಪುತ್ರಿ ಅವಂತಿಕಾರನ್ನು ಇಮ್ರಾನ್ ಖಾನ್ ಡೇಟಿಂಗ್ ಮಾಡುವುದಕ್ಕೆ ಶುರು ಮಾಡಿದ್ದರು. 2011ರಲ್ಲಿ ಈ ವೈವಾಹಿಕ ಜೀವನಕ್ಕೂ ಕಾಲಿಟ್ಟಿತ್ತು. ಅದರೆ, 2019ರಲ್ಲಿ ಇಬ್ಬರು ತಮ್ಮ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದರು. ಎಂಟು ವರ್ಷಗಳ ಸಾಂಸಾರಿಕ ಜೀವನಕ್ಕೆ ತಿಲಾಂಜಲಿ ಹಾಡಿದ್ದರು. ಇಬ್ಬರು ಯಾವ ಕಾರಣಕ್ಕೆ ಬೇರೆ ಆದರು? ಅನ್ನೋದನ್ನು ಇಬ್ಬರೂ ಬಹಿರಂಗಪಡಿಸಿಲ್ಲ.
2019ರಲ್ಲಿ ಪತ್ನಿ ಅವಂತಿಕಾ ಮಲಿಕ್‌ರಿಂದ ದೂರವಾದ ಬಳಿಕ ಇಮ್ರಾನ್ ಖಾನ್ ಬಾಳಲ್ಲಿ ಮತ್ತೊಬ್ಬ ಮಹಿಳೆಯ ಪ್ರವೇಶ ಆಗಿದೆ. ಆಕೆಯ ಮತ್ಯಾರೂ ಅಲ್ಲ ಲೇಖಾ ವಾಷಿಂಗ್‌ಟನ್. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಲೇಖಾ ವಾಶಿಂಗ್‌ಟನ್ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಇಮ್ರಾನ್ ಖಾನ್ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಇವರಿಬ್ಬರ ಡೇಟಿಂಗ್ ಬಗ್ಗೆ ಯಾಕಿಷ್ಟು ಪೀಠಿಕೆ ಅಂದ್ರೆ, ಲೇಖಾ ವಾಷಿಂಗ್‌ಟನ್‌ಗೂ ಕನ್ನಡ ಚಿತ್ರರಂಗಕ್ಕೂ ಚಿಕ್ಕದೊಂದು ನಂಟಿದೆ.

ಲೇಖಾ ವಾಷಿಂಗ್‌ಟನ್ ಮೂಲ ಉತ್ತರ ಭಾರತ ಆಗಿದ್ದರೂ, ಆಕೆಯ ಶಿಕ್ಷಣ ಎಲ್ಲಾ ಆಗಿದ್ದು ಚೆನ್ನೈನಲ್ಲಿ. ಮೊದಲು ನಿರೂಪಕಿಯಾಗಿ ಕೆಲಸ ಮಾಡಿದ್ದು ಕೂಡ ತಮಿಳು ಚಾನೆಲ್ ಒಂದಕ್ಕೆ. ಹಾಗೇ ಸಿನಿಮಾಗಳಲ್ಲಿ ನಟಿಸಿದ್ದು ಕೂಡ ತಮಿಳು ಸಿನಿಮಾನೇ. ಹಾಗೇ ಕನ್ನಡದಲ್ಲೂ ಒಂದು ಸಿನಿಮಾದಲ್ಲಿ ಲೇಖಾ ವಾಷಿಂಗ್‌ಟನ್ ನಟಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅದುವೇ 'ಹುಡುಗ ಹುಡುಗಿ'.
ಧ್ಯಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ಲೇಖಾ ವಾಷಿಂಗ್‌ಟನ್ ನಾಯಕಿಯಾಗಿ ನಟಿಸಿದ್ದರು. ಇಂದ್ರಜಿತ್ ಲಂಕೇಶ್ ಈ ನಾಯಕಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಲೇಖಾ ಕೂಡ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೆ, ಕನ್ನಡದಲ್ಲಿ 'ಹುಡುಗ ಹುಡುಗಿ' ಸಿನಿಮಾದಲ್ಲಿ ನಟಿಸಿದಾಗ ಇಲ್ಲೂ ಒಂದಿಷ್ಟು ಮಂದಿ ಯುವಕರು ಈಕೆ ಅಭಿಮಾನಿಯಾಗಿದ್ದರು.
ಇಷ್ಟು ದಿನ ಸೈಲೆಂಟ್ ಆಗಿ ತೆರೆಮರೆಯಲ್ಲಿದ್ದ ಲೇಖಾ ವಾಷಿಂಗ್‌ಟನ್ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಆಮಿರ್ ಖಾನ್ ಸೋದರಳಿಯನ ಜೊತೆ ಲೇಖಾ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯ ಈ ನಟಿ ಮುಂಬೈನಲ್ಲಿ ನೆಲೆಸಿದ್ದಾರೆ. 2015ರಿಂದ ಯಾವುದೇ ಸಿನಿಮಾಗಳಲ್ಲಿ ಈ ನಟಿ ಕಾಣಿಸಿಕೊಂಡಿಲ್ಲ. ಇಮ್ರಾನ್ ಖಾನ್ ವಿಚ್ಛೇದನ ನೀಡಿದ ಒಂದೂವರೆ ವರ್ಷದ ಬಳಿಕ ಲೇಖಾ ಪರಿಚಯವಾಗಿ ಈಗ ಇಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಇಮ್ರಾನ್ ಹೇಳಿಕೊಂಡಿದ್ದಾರೆ.


Click it and Unblock the Notifications











