ಈ ಬಾರಿ ಕಿಸ್ ಮಾಡಿದ್ದು ಕರ್ನಾಟಕದ ಖತರ್ನಾಕ್ ಕಳ್ಳನಲ್ಲ ಸ್ವತ: ಜಾಕ್ವೆಲಿನ್ ಫರ್ನಾಂಡೀಸ್
ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಕಳೆದೊಂದು ವಾರದಿಂದ ಸುದ್ದಿಯಲ್ಲಿದ್ದಾಳೆ. ವಿವಾದ ಸುಳಿಯಲ್ಲಿ ಸಿಕ್ಕಿ ಬಲೆಗೆ ಸಿಕ್ಕ ಮೀನಿನಂತಾಗಿದ್ದಾಳೆ ಜಾಕ್ವೆಲಿನ್. ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ ಕರ್ನಾಟಕ ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದ್ದು, ಇಬ್ಬರ ಪ್ರೇಮ ಪುರಾಣಕ್ಕೆ ಮತ್ತೊಂದು ಸಾಕ್ಷಿ ಲಭ್ಯವಾಗಿದೆ.
ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚೆಗೆ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿ ಹೋಗಿದ್ದಳು. ಹೀಗಾಗಿ ಕನ್ನಡ ಸಿನಿಮಾಗೂ ಜಾಕ್ವೆಲಿನ್ ಫರ್ನಾಂಡೀಸ್‌ಗೂ ಸಂಬಂಧವೊಂದು ಬೆಸೆದುಕೊಂಡಿದೆ. ಆದರೆ, ಇದೇ ನಟಿ ಈಗ ವಂಚಕ ಪ್ರೀತಿಯ ಬಲೆಗೆ ಬಿದ್ದಿದ್ದಳು ಅನ್ನುವ ವಿಷಯ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಕೆಲವು ದಿನಗಳ ಹಿಂದೆ ವಂಚಕ ಸುಕೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್ ಕೆನ್ನೆಗೆ ಮುತ್ತಿಟ್ಟ ಫೋಟೊ ವೈರಲ್ ಆಗಿತ್ತು. ಆದ್ರೀಗ ಜಾಕ್ವೆಲಿನ್ ಕಿಸ್ ಮಾಡಿದ ಫೋಟೊ ಲೀಕ್ ಆಗಿದೆ.

ವಂಚಕನಿಗೆ ಜಾಕ್ವೆಲಿನ್ ಕಿಸ್ ಮಾಡಿದ ಫೋಟೊ ವೈರಲ್
ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತೆ ಸುದ್ದಿಯಲ್ಲಿದ್ದಾಳೆ. ಬಾಲಿವುಡ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡಿ ಮುಂದೆ ವಂಚಕ ಸುಕೇಶ್ ಚಂದ್ರಶೇಖರ್ ಕೆನ್ನೆಗೆ ಜಾಕ್ವೆಲಿನ್ ಫರ್ನಾಂಡೀಸ್ ಕಿಸ್ ಮಾಡುತ್ತಿರುವ ಫೋಟೊ ಅದು. ಈ ದೃಶ್ಯವನ್ನು ಕಳ್ಳ ಸುಕೇಶ್ ಮಿರರ್ ಮುಂದೆ ತನ್ನದೇ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿದಿದ್ದಾನೆ. ಜಾಕ್ವೆಲಿನ್ ಹಾಗೂ ಸುಕೇಶ್ ಇಬ್ಬರ ಈ ಫೋಟೊ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಮತ್ತೆ ಚರ್ಚೆಯ ವಿಷಯವಾಗಿದೆ.

ವೈರಲ್ ಆಗಿತ್ತು ಜಾಕ್ವೆಲಿನ್ ಕೆನ್ನೆಗೆ ಮುತ್ತಿಟ್ಟಿದ್ದ ಸುಕೇಶ್ ಫೋಟೊ
ಕೆಲವೇ ದಿನಗಳ ಹಿಂದೆ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಇದೇ ವಂಚಕ ಸುಕೇಶ್ ಚಂದ್ರಶೇಖರ್ ಕಿಸ್ ಮಾಡಿದ ಫೋಟೊವೊಂದು ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಜಾಕ್ವೆಲಿನ್ ವಂಚಕ ಸುಕೇಶ್ ಪ್ರೀತಿಯ ಬಲೆಗೆ ಬಿದ್ದಿದ್ದಳು ಎಂಬ ಸುದ್ದಿ ಮತ್ತೆ ಚರ್ಚೆಗೆ ಬಂದಿತ್ತು. ಈ ಫೋಟೋದಲ್ಲಿ ಸುಕೇಶ್ ಚಂದ್ರಶೇಖರ್ ತನ್ನ ಐಫೋನ್‌ನಿಂದ ನಟಿ ಜಾಕ್ವೆಲಿನ್ ಕೆನ್ನೆಗೆ ಕಿಸ್ ಮಾಡಿದ್ದನ್ನು ಸೆರೆ ಹಿಡಿದಿದ್ದ. ಶ್ರೀಲಂಕಾದ ಸುಂದರಿಯನ್ನು 200 ಕೋಟಿ ವಂಚಕ ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಅನ್ನುವುದು ಆ ಫೋಟೊ ಸಾಬೀತು ಮಾಡಿತ್ತು.

ಬೆಂಗಳೂರು ಕಳ್ಳನ ಮೇಲಿದೆ 15 FIR
ಸುಕೇಶ್ ಚಂದ್ರಶೇಖರ್ ಸದ್ಯ 200 ಕೋಟಿ ವಂಚನೆ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. 27 ವರ್ಷದ ಸುಕೇಶ್ ಚಂದ್ರಶೇಖರ್ ಬೆಂಗಳೂರು ಮೂಲದವನಾಗಿದ್ದು, ತನ್ನ 17ನೇ ವರ್ಷಕ್ಕೆ ನಕಲಿ ಸಹಿ ಕೇಸಿನಲ್ಲಿ ಪೊಲೀಸರ ಅತಿಥಿಯಾಗಿದ್ದ. ಆ ಬಳಿಕ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಸೆಲೆಬ್ರೆಟಿಗಳಿಗೆ ನಂಬಿಕೆ ಹುಟ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡುವುದೇ ಈತನ ಕಾಯಕವಾಗಿತ್ತು. ಐಷಾರಾಮಿ ಜೀವನ ನಡೆಸಲು ಈತ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದ.

ವಂಚಕನ ಪ್ರೀತಿಯ ಬಲೆಗೆ ಬಿದ್ದಿದ್ಲಾ ಜಾಕ್ವೆಲಿನ್?
ಸುಕೇಶ್ ಚಂದ್ರಶೇಖರ್ 200 ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ವೇಳೆ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿತ್ತು. ಆ ವೇಳೆ ಇವರಿಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ, ಆಗ ಜಾಕ್ವೆಲಿನ್ ಡೇಟಿಂಗ್ ವಿಷಯವನ್ನು ಒಪ್ಪಿಕೊಂಡಿರಲಿಲ್ಲ. ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಏಪ್ರಿಲ್-ಜೂನ್‍ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ. ಈ ವೇಳೆ ಜಾಕ್ವಲಿನ್ ಅನ್ನು ಚೆನ್ನೈಗೆ ಕರೆಸಿಕೊಂಡಿದ್ದ ಎನ್ನಲಾಗಿದೆ. ಆ ವೇಳೆನೇ ಈ ಮುತ್ತಿನ ಪ್ರಕರಣ ನಡೆದಿದೆ ಎನ್ನುತ್ತಿವೆ ಇಡಿಯ ಉನ್ನತ ಮೂಲಗಳು. ಈ ವಂಚಕ ಜೈಲಿನೊಳಗಿದ್ದುಕೊಂಡೇ ಜಾಕ್ವೆಲಿನ್‍ಗೆ ಪೋನ್ ಮಾಡುತ್ತಿದ್ದ. ನಾನೊಬ್ಬ ದೊಡ್ಡ ವ್ಯಕ್ತಿಯೆಂದು ನಂಬಿಸಿ, ಐಷಾರಾಮಿ ಉಡುಗೊರೆಗಳನ್ನು ಜಾಕ್ವೆಲಿನ್‌ಗೆ ಕಳುಹಿಸುತ್ತಿದ್ದ ಎನ್ನಲಾಗಿದೆ.


Click it and Unblock the Notifications











