Janhvi Kapoor: ಬಾಂಗ್ಲಾದೇಶದಲ್ಲಿ ಬೆಂಕಿ ಹಚ್ಚಿ ಹಿಂದೂ ಯುವಕನ ಸಜೀವ ದಹನ; "ಇದು ನರಮೇಧ" ಜಾಹ್ನವಿ
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದೆ. ಭಾರತದ ವಿರೋಧಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಈ ವೇಳೆ ಬಾಂಗ್ಲಾದೇಶದ ಉದ್ರಿಕ್ತ ಜನರ ಗುಂಪೊಂದು ಹಿಂದೂ ಯುವಕ ದೀಪು ಚಂದ್ರ ದಾಸ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಬಾಂಗ್ಲಾದೇಶದ ಹಿಂದೂಗಳನ್ನು ಬೆಚ್ಚಿಬೀಳಿಸಿದೆ. ಅಲ್ಲದೆ, ಭಾರತೀಯರನ್ನು ಕೆರಳಿಸಿದೆ.
ಬಾಂಗ್ಲಾದೇಶದಲ್ಲಿ 27 ವರ್ಷದ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಕೆಲವು ಗುಂಪುಗಳು ಹೀನಾಯವಾಗಿ ಥಳಿಸಿ ಜೀವಂತವಾಗಿ ಸುಟ್ಟಾಕಿದ್ದರು. ಈ ಅಮಾನವೀಯ ಘಟನೆಯನ್ನು ಇಡೀ ವಿಶ್ವದವನ್ನು ತಲ್ಲಣಗೊಳಿಸಿದೆ. ಈ ಘಟನೆಯನ್ನು ವಿಶ್ವದ ಮೂಲೆ ಮೂಲೆಯಲ್ಲಿ ಹಿಂದೂಗಳು ಹಾಗೂ ಬೇರೆ ಬೇರೆ ಸಮುದಾಯದ ಜನರು ಖಂಡಿಸಿದ್ದರು.

ಹಾಗೆಯೇ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಜಾಹ್ನವಿ ಕಪೂರ್, ರವೀನಾ ಟಂಡನ್, ದಿಯಾ ಮಿರ್ಜಾ ಸೇರಿದಂತೆ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಅಮಾನವೀಯ ಘಟನೆಯನ್ನು ಖಂಡಿಸಿ, ಹಾಕಿಕೊಂಡ ಪೋಸ್ಟ್ ಚರ್ಚೆಯಾಗುತ್ತಿದೆ.
"ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರೋ ಬರ್ಬರ. ಇದು ಒಂದು ಘಟನೆಯಲ್ಲ. ಇದೊಂದು ನರಮೇಧವೇ ಸರಿ. ಈ ಅಮಾನವೀಯ ಹತ್ಯೆ ಬಗ್ಗೆ ನಿಮಗೆ ತಿಳಿದಿಲ್ಲವಾದರೆ, ಆ ಘಟನೆಗಳ ಬಗ್ಗೆ ಓದಿ, ವೀಡಿಯೊಗಳನ್ನು ನೋಡಿ. ಬಳಿಕ ಪ್ರಶ್ನೆಗಳನ್ನು ಕೇಳಿ. ಇಷ್ಟಲ್ಲ ಆದ್ಮೇಲೆ ನಿಮಗೆ ಕೋಪ ಬರದಿದ್ದರೆ, ಇದು ನಿಮ್ಮನ್ನು ನಾಶಪಡಿಸುತ್ತದೆ. ನಮ್ಮ ಸಹೋದರ-ಸಹೋದರಿಯರನ್ನು ಜೀವಂತವಾಗಿ ಸುಡುತ್ತಿರುವಾಗ ವಿಶ್ವದ ಇನ್ನೊಂದು ಮೂಲೆಯಲ್ಲಿ ನಡೆಯುವ ಘಟನೆಗಳಿಗೆ ಕಣ್ಣೀರು ಸುರಿಸುತ್ತೇವೆ" ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಜಾಹ್ನವಿ ಕಪೂರ್ ಹಂಚಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ "ಅದು ಯಾವುದೇ ರೂಪದಲ್ಲಿರಲಿ, ನಾವೇ ಸಂತ್ರಸ್ತರಾಗಿರಲಿ ಅಥವಾ ಅಪರಾಧಿಗಳಾಗಿರಲಿ, ಅದನ್ನು ಎತ್ತಿ ತೋರಿಸಿ ಖಂಡಿಸುವುದು ಅವಶ್ಯಕ. ನಮ್ಮ ಮಾನವೀಯತೆಯನ್ನು ಮರೆಯುವ ಮುನ್ನ ಇದನ್ನು ಮಾಡಬೇಕು. ನಾವು ಕಾಣದ ಗೆರೆಗಳ ಎರಡೂ ಬದಿ ಇರುತ್ತೇವೆಂದು ಭಾವಿಸುವ ಮುಖಗಳು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು," ಎಂದು ಜಾಹ್ನವಿ ಕಪೂರ್ ಈ ಘಟನೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇಷ್ಟೇ ಅಲ್ಲ ಜಾಹ್ನವಿ ಕಪೂರ್ ಈ ಕೃತ್ಯದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸುವುದನ್ನು ಮುಂದುವರೆಸಿದ್ದಾರೆ. "ಪ್ರತಿಯೊಂದು ರೀತಿಯ ಉಗ್ರವಾದವನ್ನು ನಾವು ಮಾನವೀಯತೆಯನ್ನು ಮರೆಯುವುದಕ್ಕೂ ಮುನ್ನ ಖಂಡಿಸುವುದು ತೀರಾ ಅವಶ್ಯಕ. ಸಾಮುದಾಯಿಕ ಸಂಘರ್ಷದಲ್ಲಿ ನಿರಂತರವಾಗಿ ಬಲಿಯಾಗುತ್ತಿರುವ ಹಾಗೂ ಭಯಭೀತರಾಗಿರುವ ಅಮಾಯಕ ಜೀವಗಳಿಗೆ ಧ್ವನಿಯಾಗಿ ನಿಲ್ಲಿಬೇಕು" ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.
ಇನ್ನು ವೃತ್ತಿ ಬದುಕಿನ ಕಡೆಗೆ ಬರುವುದಾರೇ, ಜಾಹ್ನವಿ ಕಪೂರ್ ನಟಿಸಿದ 'ಹೋಮ್‌ಬೌಂಡ್' ಸಿನಿಮಾದ ಬಗ್ಗೆ ಚರ್ಚೆಯಾಗುತ್ತಿದೆ. ಈ ಸಿನಿಮಾದಲ್ಲಿನ ಅವರ ಅಭಿನಯದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಆಸ್ಕರ್ 2026ಕ್ಕೆ ಈ ಸಿನಿಮಾ ಸೆಲೆಕ್ಟ್ ಆಗಿದೆ. ಆದರೆ, ವರುಣ್ ಧವನ್ ಜೊತೆ ನಟಿಸಿದ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು.
ಜಾಹ್ನವಿ ಕಪೂರ್ ವೃತ್ತಿ ಬದುಕಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪೆದ್ದಿ'. ತೆಲುಗಿನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ ಈ ಸಿನಿಮಾದಲ್ಲಿ ಜಾಹ್ನವಿ ಕಪೂರ್ ಗ್ಲಾಮರಸ್ ಲುಕ್‌ಗೆ ಸಿನಿ ಪ್ರಿಯರು ಹಾಗೂ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಜಾಹ್ನವಿ ಕಪೂರ್ ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆಯನ್ನು ಖಂಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











