Jawan Box Office Day 2: ₹100 ಕೋಟಿ ಕ್ಲಬ್ ಸೇರಿದ 'ಜವಾನ್'.. 2ನೇ ದಿನ ಬಾಕ್ಸಾಫೀಸ್ ದೋಚಿದ್ದೆಷ್ಟು?
'ಪಠಾಣ್' ಅಂತಹ ಮೆಗಾ ಹಿಟ್ ಕೊಟ್ಟ ಶಾರುಖ್ ಖಾನ್ ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕಿಂಗ್ ಖಾನ್‌ಗೆ ಆಕ್ಷನ್ ಕಟ್ ಹೇಳಿರೋದು ಅಟ್ಲೀ. ಆ ಸಿನಿಮಾನೇ 'ಜವಾನ್'. ಈ ಸಿನಿಮಾ ಸೆಪ್ಟೆಂಬರ್ 7ರಂದು ವಿಶ್ವದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು.
ಸೂಪರ್‌ಸ್ಟಾರ್ ಸಿನಿಮಾಗಳು ಮೊದಲ ದಿನ ಅದ್ಭುತ ಓಪನಿಂಗ್ ಪಡೆದುಕೊಳ್ಳುತ್ತವೆ. ಹಾಗೇ 'ಜವಾನ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಇದೇ ಕ್ರೇಜ್ 2ನೇ ದಿನವೂ ಇದೆಯಾ? ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದು ಸಿನಿಮಾದ ಭವಿಷ್ಯವನ್ನು ಹೇಳುತ್ತೆ.

ಶಾರುಖ್ ಖಾನ್ 'ಜವಾನ್' ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಸದ್ಯದ ಪರಿಸ್ಥಿತಿ ನೋಡಿದ್ರೆ 'ಜವಾನ್' ಕ್ರೇಜ್ ಸದ್ಯಕ್ಕೆ ಕಡಿಮೆ ಆಗೋ ಹಾಗೆ ಕಾಣಿಸುತ್ತಿಲ್ಲ. ಕೇವಲ ಎರಡು ದಿನಕ್ಕೆ ಭಾರತದಲ್ಲಿ 100 ಕೋಟಿ ಕ್ಲಬ್ ಸೇರಿದೆ.
'ಜವಾನ್' 2ನೇ ದಿನದ ಗಳಿಕೆ ಎಷ್ಟು?
ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ ಕಾಂಬಿನೇಷನ್ ಕ್ಲಿಕ್ ಆಗಿದೆ. ಹೀಗಾಗಿ 'ಜವಾನ್' ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ಆಗಮಿಸುತ್ತಿದ್ದಾರೆ. ಮೊದಲ ದಿನ ಜವಾನ್ ಭಾರತದಲ್ಲಿ 74.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 2ನೇ ದಿನವೂ ಇದೇ ಕ್ರೇಜ್ ಮುಂದುವರೆದಿದ್ದು, 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಲೆಕ್ಕ ಹಾಕಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ 'ಜವಾನ್' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಭೇಟೆ ಮಾಡುವ ಲಕ್ಷಣಗಳು ಕಾಣಿಸುತ್ತಿವೆ.

100 ಕೋಟಿ ಕ್ಲಬ್ ಸೇರಿದ 'ಜವಾನ್'
ಶಾರುಖ್ ಖಾನ್ 'ಜವಾನ್' ಎರಡನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಮೊದಲ ದಿನ 74.5 ಕೋಟಿ ರೂ. ಹಾಗೂ ಎರಡನೇ ದಿನ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೀಗಾಗಿ 2ನೇ ದಿನಕ್ಕೆ 'ಜವಾನ್' 127.50 ಕೋಟಿ ರೂಪಾಯಿ ಗಳಿಕೆ ಮಾಡಿ ಇತಿಹಾಸ ಬರೆದಿದೆ. ವಿಶೇಷ ಅಂದರೆ, ಶಾರುಖ್ ಖಾನ್ ಸಿನಿಮಾ ಮೊದಲ ದಿನ ಕೇವಲ ಹಿಂದಿಯಲ್ಲೇ 65.5 ಕೋಟಿ ಕಲೆಕ್ಷನ್ ಮಾಡಿತ್ತು. 5.3 ಕೋಟಿ ರೂ. ತಮಿಳಿನಲ್ಲಿ ಹಾಗೂ 3.7 ಕೋಟಿ ರೂ. ತೆಲುಗಿನಲ್ಲಿ ಕಲೆಕ್ಷನ್ ಮಾಡಿತ್ತು.
ಮಲ್ಟಿಪ್ಲೆಕ್ಸ್‌ನಲ್ಲಿ 'ಜವಾನ್' ಅಬ್ಬರ
ಯಾವುದೇ ಸಿನಿಮಾ ರಿಲೀಸ್ ಆದರೂ, ಮಲ್ಟಿಪ್ಲೆಕ್ಸ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಸಿಂಗಲ್ ಸ್ಕ್ರೀನ್‌ನಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದು ಪ್ರತ್ಯೇಕ ಲೆಕ್ಕ ಇಡುತ್ತಾರೆ. ಹಾಗೇ 'ಜವಾನ್' ಸಿನಿಮಾಗೆ ಮಲ್ಟಿಪ್ಲೆಕ್ಸ್‌ನಲ್ಲಿ ಒತ್ತಮ ಓಪನಿಂಗ್ ಸಿಕ್ಕಿದೆ. 2ನೇ ದಿನ ಪಿವಿಆರ್ ಹಾಗೂ ಐನಾಕ್ಸ್‌ನಿಂದ 17.90 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ ಸಿನಿಪೊಲಿಸ್‌ನಿಂದ 4.55 ಕೋಟಿ ರೂಪಾಯಿ ಗಳಿಕೆ ಕಂಡಿದ್ದರೆ, ಮೂವಿ ಮ್ಯಾಕ್ಸ್‌ನಿಂದ 70.50 ಲಕ್ಷ ರೂಪಾಯಿ ಹಾಗೂ ಮಿರಜ್‌ನಿಂದ 1.67 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ ವರದಿ ಮಾಡಿದ್ದಾರೆ.
ವೀಕೆಂಡ್ ಭವಿಷ್ಯವೇನು?
ಜವಾನ್‌ಗೆ ಸದ್ಯಕ್ಕಿರೋ ಕ್ರೇಜ್ ನೋಡಿದರೆ, ಶನಿವಾರ ಹಾಗೂ ಭಾನುವಾರ ಎರಡು ದಿನಗಳಲ್ಲಿ ಕಮ್ಮಿ ಅಂದರೂ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಹೀಗಾಗಿ ಮೊದಲ ನಾಲ್ಕು ದಿನಗಳಿಂದ 'ಜವಾನ್' 220 ರಿಂದ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು. ಇದೂ ಕೂಡ ಶಾರುಖ್ ವೃತ್ತಿ ಬದುಕಿನಲ್ಲಿ ಅದ್ಭುತ ಗಳಿಕೆ ಕಂಡ ಸಿನಿಮಾಗಳ ಪಟ್ಟಿ ಸೇರಲಿದೆ.


Click it and Unblock the Notifications











