Jawan Tickets: ಮೊದಲ ದಿನವೇ 11 ಲಕ್ಷ 'ಜವಾನ್' ಟಿಕೆಟ್ ಖರೀದಿ.. 'ಪಠಾಣ್', ಆದಿಪುರುಷ್ ಕಥೆ ಏನಾಗಿತ್ತು?
'ಪಠಾಣ್' ಸಿನಿಮಾ ಮೂಲಕ ಮತ್ತೆ ಯಶಸ್ಸಿನ ಹಾದಿ ಹಿಡಿದಿದ್ದ ಶಾರುಖ್ ಖಾನ್ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಜವಾನ್'. ತಮಿಳು ನಿರ್ದೇಶಕ ಅಟ್ಲೀ ಜೊತೆ ಕೈ ಜೋಡಿಸಿದ್ದ ಕಿಂಗ್ ಖಾನ್ 'ಜವಾನ್' ಅವತಾರವೆತ್ತಿ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಶಾರುಖ್ ಖಾನ್ ಸಿನಿಮಾ 'ಜವಾನ್' ದಾಖಲೆಗಳನ್ನು ಬರೆಯುತ್ತಿದೆ. ಅಡ್ವಾನ್ಸ್ ಬುಕಿಂಗ್‌ನಿಂದಲೇ ಹೊಸ ದಾಖಲೆ ಬರೆದು ಮತ್ತೊಂದು ರೆಕಾರ್ಡ್ ಬ್ರೇಕಿಂಗ್ ಸಿನಿಮಾ ಆಗಬಹುದು ಅನ್ನೋ ಸುಳಿವು ನೀಡಿದೆ.

'ಪಠಾಣ್' ಸಿನಿಮಾ ಶಾರುಖ್ ಖಾನ್ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ. ಬಾಕ್ಸಾಫೀಸ್‌ನಲ್ಲಿ 'ಪಠಾಣ್' ಸಿನಿಮಾದ ದಾಖಲೆಯನ್ನು ಮುರಿಯುವ ಸಾಧ್ಯತೆಗಳಿವೆ ಎಂದು ಅಂದಾಜು ಮಾಡಲಾಗುತ್ತಿದೆ. ಅಲ್ಲದೆ ಮೊದಲ ದಿನವೇ 'ಜವಾನ್' ಸಿನಿಮಾ ಅತೀ ಹೆಚ್ಚು ಟಿಕೆಟ್‌ಗಳನ್ನು ಸೇಲ್ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದೆ. ಹಾಗಿದ್ದರೆ, ಜವಾನ್ ಯಾವ್ಯಾವ ಸಿನಿಮಾಗಳ ದಾಖಲೆಯನ್ನು ಅಳಿಸಿ ಹಾಕಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಜವಾನ್' 11 ಲಕ್ಷ ಟಿಕೆಟ್ ಸೋಲ್ಡ್
ಶಾರುಖ್ ಖಾನ್ ಸಿನಿಮಾ ಬಿಡುಗಡೆಗೆ ಕೆಲವು ದಿನಗಳಿದೆ ಅನ್ನುವಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ಶಾರುಖ್ ಅಭಿಮಾನಿಗಳು ಮುಗಿಬಿದ್ದು ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಮೂಲಗಳ ಪ್ರಕಾರ, 'ಜವಾನ್' ಸಿನಿಮಾ ನೋಡಲು ಸುಮಾರು 11 ಲಕ್ಷಕ್ಕೂ ಅಧಿಕ ಟಿಕೆಟ್‌ಗಳನ್ನು ಅಡ್ವಾನ್ಸ್ ಬುಕಿಂಗ್ ಮಾಡಲಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆದ ಸಿನಿಮಾ 'ಜವಾನ್' ಎಂದು ಹೇಳಲಾಗುತ್ತಿದೆ.

ಅಡ್ವಾನ್ಸ್ ಬುಕಿಂಗ್ ಬಂದ ಹಣವೆಷ್ಟು?
ಅಡ್ವಾನ್ಸ್ ಬುಕಿಂಗ್‌ನಿಂದಲೇ ದಾಖಲೆ ಬರೆದಿರೊ 'ಜವಾನ್' ಸಿನಿಮಾದ ಮೊದಲ ದಿನದ ಗಳಿಕೆ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ಅಡ್ವಾನ್ಸ್ ಆಗಿ ಟಿಕೆಟ್ ಖರೀದಿ ಮಾಡಿದ್ದರಿಂದ ಸುಮಾರು 50 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಲೆಕ್ಕಚಾರವನ್ನು ಮುಂದಿಟ್ಟಕೊಂಡು ಮೊದಲ ದಿನ ವಿಶ್ವದಾದ್ಯಂತ ದೊಡ್ಡ ಮೊತ್ತವನ್ನೇ ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಬಹುದು ಎಂದು ಅಂದಾಜಿಸಲಾಗಿದೆ. ಈ ಮಧ್ಯೆ ಅಡ್ವಾನ್ಸ್ ಬುಕಿಂಗ್‌ನಲ್ಲಿ 'ಜವಾನ್' ಹಿಂದಿಕ್ಕಿದೆ ಎರಡು ಸಿನಿಮಾಗಳು ಟ್ರೋಲ್ ಆಗುತ್ತಿವೆ.
ಮೊದಲನೇ ಸಿನಿಮಾ 'ಪಠಾಣ್'
ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ 4 ವರ್ಷಗಳ ಬಳಿಕ ಥಿಯೇಟರ್‌ಗೆ ಮರಳಿದ್ದರು. ಹೀಗಾಗಿ 'ಪಠಾಣ್' ಸಿನಿಮಾ ನೋಡಲು ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಈಗಾಗಲೇ ಕೆಲವೆಡೆ ವರದಿಯಾಗಿರೋ ಪ್ರಕಾರ, ಪಠಾಣ್ ಸಿನಿಮಾ ಮೊದಲ ದಿನ ಅಡ್ವಾನ್ಸ್ ಬುಕಿಂಗ್‌ನಿಂದ ಸುಮಾರು 10.81 ಲಕ್ಷ ಟಿಕೆಟ್‌ಗಳು ಸೇಲ್ ಆಗಿದ್ದವು. ಇದೂವರೆಗೂ 'ಪಠಾಣ್' ಅತೀ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆದ ಟಿಕೆಟ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಆ ದಾಖಲೆಯನ್ನು ಶಾರುಖ್ ಸಿನಿಮಾವೇ ಮುರಿದು ಹಾಕಿದೆ.
ಎರಡನೇ ಸಿನಿಮಾ 'ಆದಿಪುರುಷ್'
ಸೋಲುಗಳಿಂದ ಕಂಗಾಲಾಗಿರೋ ಮತ್ತೊಬ್ಬ ಸೂಪರ್‌ಸ್ಟಾರ್ ಪ್ರಭಾಸ್. ಇತ್ತೀಚೆಗೆ ತೆರೆಕಂಡ 'ಆದಿಪುರುಷ್' ಸಿನಿಮಾ ಕೂಡ ಹೀನಾಯವಾಗಿ ಸೋಲುಂಡಿತ್ತು. ಸುಮಾರು 500 ರಿಂದ 550 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ 'ಆದಿಪುರುಷ್' ಬಿಡುಗಡೆಗೂ ಮುನ್ನವೇ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಅಡ್ವಾನ್ಸ್ ಬುಕಿಂಗ್‌ನಲ್ಲಿ ಸುಮಾರು 10.74 ಲಕ್ಷ ಟಿಕೆಟ್‌ಗಳು ಸೇಲ್ ಆಗಿದ್ದವು. 'ಜವಾನ್' ಪ್ರಭಾಸ್ ಸಿನಿಮಾದ ದಾಖಲೆಯನ್ನು ಉಡೀಸ್ ಮಾಡಿದೆ.


Click it and Unblock the Notifications











