ಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತು ತನಿಖೆ ನಡೆಸಲು ಬಿಹಾರದಿಂದ ಮುಂಬೈಗೆ ಬಂದಿಳಿದ ಐಪಿಎಸ್ ಅಧಿಕಾರಿಯನ್ನು ಮುಂಬೈನ ಪಾಲಿಕೆ ಅಧಿಕಾರಿಗಳು ಬಲವಂತವಾಗಿ ಸೀಲ್ ಹಾಕಿ ಕ್ವಾರೆಂಟೈನ್ ಮಾಡಿದ್ದಾರೆ. ಐಪಿಎಸ್ ಶ್ರೇಣಿಯ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಿಲ್ಲ. ಆದರೆ ಮುಂಬೈ ಅಧಿಕಾರಿಗಳ ಈ ಕೃತ್ಯ ತನಿಖೆಗೆ ಅಡ್ಡಿಪಡಿಸುವ ಅವರ ಪ್ರಯತ್ನಕ್ಕೆ ಸಾಕ್ಷಿ ಎಂದು ಆರೋಪಿಸಲಾಗಿದೆ.
ಈ ಘಟನೆಯನ್ನು ನಟಿ ಕಂಗನಾ ರಣಾವತ್ ಖಂಡಿಸಿದ್ದಾರೆ. ಈ ಅಧಿಕಾರಿಯನ್ನು ಐಪಿಎಸ್ ಮೆಸ್‌ಗೆ ಹೋಗಲು ಅವಕಾಶ ನೀಡಿಲ್ಲ. ಬಲವಂತವಾಗಿ ಕ್ವಾರೆಂಟೈನ್ ಮಾಡಲಾಗಿದೆ. ಏಕೆಂದರೆ ಮುಂಬೈನಲ್ಲಿ ಈಗ ಒಬ್ಬ ಪಪ್ಪು ಇದ್ದಾರೆ (ಆದಿತ್ಯ ಠಾಕ್ರೆ). ನೆಪೋಟಿಸಂನ ಮಾಫಿಯಾ ಮಾತ್ರವೇ ಜನರೊಂದಿಗೆ ಹೀಗೆ ವರ್ತಿಸಲು ಸಾಧ್ಯ. ಮಹಾರಾಷ್ಟ್ರ ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು ಎಂದು ಕಂಗನಾ ಹೇಳಿದ್ದಾರೆ. ಮುಂದೆ ಓದಿ.

ಇದು ಗೂಂಡಾ ರಾಜ್
ಇದು ಏನು? ಗೂಂಡಾ ರಾಜ್? ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದನ್ನು ಹೇಳಲು ಬಯಸಿದ್ದೇನೆ, ಸುಶಾಂತ್ ಸಿಂಗ್ ರಜಪೂತ್ ಅವರನ್ನು ಹತ್ಯೆ ಮಾಡಿದ ತಪ್ಪಿತಸ್ಥರನ್ನು ಬಂಧಿಸದೆ ಹೋದರೆ ಮುಂಬೈನಲ್ಲಿ ಯಾವ ಹೊರಗಿನವರೂ ಸುರಕ್ಷಿತರಾಗಿರಲು ಸಾಧ್ಯವೇ ಇಲ್ಲ. ಅಪರಾಧಿಗಳು ದಿನೇ ದಿನೇ ಶಕ್ತಿಶಾಲಿಗಳಾಗುತ್ತಿದ್ದಾರೆ. ದಯವಿಟ್ಟು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಎಂದು ಕಂಗನಾ ಮನವಿ ಮಾಡಿದ್ದಾರೆ.

ನಾಲ್ವರು ಸಹೋದರಿಯರ ಏಕೈಕ ತಮ್ಮ
ರಕ್ಷಾಬಂಧನದ ಈ ಸಂದರ್ಭದಲ್ಲಿ ಸುಶಾಂತ್ ಸಹೋದರಿಯರು ಮತ್ತು ಕುಟುಂಬದ ನೋವಿನ ತೀವ್ರತೆಯನ್ನು ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾಲ್ವರು ಸಹೋದರಿಯರ ಏಕೈಕ ತಮ್ಮ ಹಲವು ವರ್ಷಗಳ ಪೂಜೆ, ಪ್ರಾರ್ಥನೆಗಳ ಬಳಿಕ ಜನಿಸಿದ್ದ ಎಂದು ಕಂಗನಾ ಕುಟುಂಬದ ಬಗ್ಗೆ ಅನುಕಂಪದ ಮಾತನ್ನಾಡಿದ್ದಾರೆ.

ಸುಶಾಂತ್ ಮಾಡಿದ ತಪ್ಪು
ಸುಶಾಂತ್ ಅವರು ಮಾಡಿದ ಒಂದೇ ಒಂದು ತಪ್ಪೆಂದರೆ ಅವರು 'ಬುಲ್ಲಿವುಡ್'ನ ಪಪ್ಪುಗಳಿಂತ ತುಂಬಾ ಬುದ್ಧಿವಂತನಾಗಿದ್ದು. ಹೀಗಾಗಿ ಅವರು ಸುಶಾಂತ್‌ರನ್ನು ಕೊಂದು ಹಾಕಿದರು. ಖಂಡಿತಾ ಇದು ಅವರ ಕುಟುಂಬ ಮತ್ತು ದೇಶಕ್ಕೆ ದುಃಖದ ದಿನ ಎಂದು ಹೇಳಿದ್ದಾರೆ.

ಮುಂಬೈ ಪೊಲೀಸರ ಮೇಲಿನ ಗೌರವ ಹೋಯ್ತು
ನಟಿ ಪಾಯಲ್ ಘೋಷ್ ಕೂಡ ಮುಂಬೈ ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇತ್ತು. ಭಾರತದಲ್ಲಿ ಮುಂಬೈ ಪೊಲೀಸರೇ ಉತ್ತಮರು ಎಂದು ಕೋಲ್ಕತಾದಲ್ಲಿರುವ ನನ್ನ ಕುಟುಂಬದವರೊಂದಿಗೆ ಜಗಳವಾಡುತ್ತಿದ್ದೆ. ರಾತ್ರಿ, ನಸುಕಿನಲ್ಲಿಯೂ ನಮ್ಮನ್ನು ಸುರಕ್ಷಿತರಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಮುಂಬೈ, ನನ್ನ ಮುಂಬೈ ಪೊಲೀಸ್. ಆದರೆ ಈಗ ಅದರ ಕುರಿತು ಇನ್ನು ಏನೂ ಹೇಳಲು ಸಾಧ್ಯವಾಗುತ್ತಿಲ್ಲ. ಸುಶಾಂತ್ ಸಾವನ್ನು ಸಿಬಿಐಗೆ ಒಪ್ಪಿಸಲು ಭಾರತ ಕೂಗುತ್ತಿದೆ ಎಂದು ಪಾಯಲ್ ಹೇಳಿದ್ದಾರೆ.


Click it and Unblock the Notifications











